ವಕೀಲರ ಪರಿಷತ್ ಚುನಾವಣೆ ವಿಳಂಬ; ಸ್ಪಷ್ಟನೆ ನೀಡಲು ಬಿಸಿಐ, ಕೆ‌ಎಸ್‌ಬಿಸಿಗೆ ಮತ್ತೆ ಕಾಲಾವಕಾಶ ನೀಡಿದ ಹೈಕೋರ್ಟ್

ಬೆಂಗಳೂರು: ವಕೀಲಿಕೆ ಪ್ರಮಾಣಪತ್ರ (Certificate of Practice-COP) ನೀಡುವ ಕುರಿತ ರಿಟ್ ಅರ್ಜಿ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇರುವುದೇ ಕರ್ನಾಟಕ ವಕೀಲರ ಪರಿಷತ್‌‌ (ಕೆಎಸ್‌ಬಿಸಿ) ಚುನಾವಣೆ ನಡೆಸದಿರಲು ಕಾರಣವೇ ಹಾಗೂ ಚುನಾವಣೆ ನಡೆಸಲು ಕೆಎಸ್‌ಬಿಸಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಆದ್ಯತೆ ನೀಡುತ್ತಿದೆಯೇ ಎಂಬ ಪ್ರಶ್ನೆಗಳಿಗೆ ಉತ್ತರಿಸಲು ಭಾರತೀಯ ವಕೀಲರ ಪರಿಷತ್ (ಬಿಸಿಐ) ಹಾಗೂ ಕೆ‌ಎಸ್‌ಬಿಸಿಗೆ ಹೈಕೋರ್ಟ್ ಮತ್ತೆ ಕಾಲಾವಕಾಶ ನೀಡಿದೆ.

ಕೆ‌ಎಸ್‌ಬಿಸಿ ಆಡಳಿತ ಮಂಡಳಿಯ ನಿಗದಿತ 5 ವರ್ಷಗಳ ಅವಧಿ 2023ರ ಜೂನ್‌‌ನಲ್ಲೇ ಪೂರ್ಣಗೊಂಡಿದ್ದು, ಹಾಲಿ ಆಡಳಿತ ಮಂಡಳಿಯನ್ನು ವಿಸರ್ಜಿಸಿ ಹೊಸದಾಗಿ ಚುನಾವಣೆ ನಡೆಸಲು ನಿರ್ದೇಶಿಸುವಂತೆ ಹಾಗೂ ಪರಿಷತ್‌ನ ನಾಮನಿರ್ದೇಶಿತ ಅಧ್ಯಕ್ಷ ಎಸ್‌.ಎಸ್‌. ಮಿಟ್ಟಲಕೋಡ ನೇಮಕಾತಿ ವಜಾಗೊಳಿಸುವಂತೆ ಮತ್ತು ಬೆಂಗಳೂರು ವಕೀಲರ ಸಂಘಕ್ಕೆ ಪರ್ಯಾಯವಾಗಿ ಹೊಸ ಸಂಘ ನೋಂದಣಿ ಮಾಡದಂತೆ ಕೆಎಸ್‌ಬಿಸಿಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿರುವ ಮೂರು ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಬಿ.ಎಂ. ಶ್ಯಾಮ್‌ ಪ್ರಸಾದ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಶನಿವಾರ ವಿಚಾರಣೆ ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಕೆಎಸ್‌ಬಿಸಿ ಪರವಾಗಿ ಹಾಜರಿದ್ದ ವಕೀಲ ಎಸ್‌. ನಟರಾಜ್‌ ಅವರು, 2025ರ ಜುಲೈ 31ರಂದು ಬಿಸಿಐ ಹೊರಡಿಸಿದ್ದ ಪತ್ರದಲ್ಲಿ ಕೆಎಸ್‌ಬಿಸಿಗೆ ಶೀಘ್ರದಲ್ಲೇ ಚುನಾವಣೆ ನಡೆಸಲಾಗುವುದು ಎಂದು ಹೇಳಿರುವ ನಡುವೆಯೂ ಸುಪ್ರೀಂಕೋರ್ಟ್‌ನಲ್ಲಿ ಸಿಒಪಿಗೆ ಸಂಬಂಧಿಸಿದ ಅರ್ಜಿ ಬಾಕಿ ಇರುವುದು ಚುನಾವಣೆ ವಿಳಂಬಕ್ಕೆ ಕಾರಣವಾಗಿದೆಯೇ ಹಾಗೂ ಚುನಾವಣೆ ನಡೆಸಲು ಕೆಎಸ್‌ಬಿಸಿ ಎಲ್ಲ ಸಿದ್ಧತೆ ಮಾಡಿಕೊಳ್ಳಲು ಆದ್ಯತೆ ನೀಡುತ್ತಿದೆಯೇ? ಎಂಬ ಎರಡು ಪ್ರಶ್ನೆಗಳನ್ನು ಆಗಸ್ಟ್ 14ರಂದು ನ್ಯಾಯಾಲಯ ಕೇಳಿದೆ. ಇದಕ್ಕೆ ಉತ್ತರಿಸಲು 3 ದಿನ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಬೆಂಗಳೂರು ವಕೀಲರ ಸಂಘದ ಪರ ಹಿರಿಯ ವಕೀಲ ಕೆ.ಎನ್‌. ಫಣೀಂದ್ರ ಅವರು, ಮಿಟ್ಟಲಕೋಡ ಅವರು ಪ್ರಮಾಣೀಕೃತ ಪ್ರತಿಗಳನ್ನು ನೀಡುವಂತೆ ಸೂಚಿಸಿ, ನೋಟಿಸ್‌ ಪಡೆಯಲು ನಿರಾಕರಿಸಿದ್ದಾರೆ. ಸಿಒಪಿಗಾಗಿ ಮಾತ್ರ ಮಿಟ್ಟಲಕೋಡ ಅವರನ್ನು ನಾಮನಿರ್ದೇಶನ ಮಾಡಲಾಗಿದೆ ಎಂದರು.

ವಾದ ಆಲಿಸಿದ ನ್ಯಾಯಪೀಠ, ಆಗಸ್ಟ್ 14ರ ಆದೇಶಕ್ಕೆ ಸಂಬಂಧಿಸಿದಂತೆ ನಿಲುವು ಕೈಗೊಳ್ಳಲು ಬಿಸಿಐ ಹಾಗೂ ಕೆಎಸ್‌ಬಿಸಿಗೆ ಮುಂದಿನ ವಿಚಾರಣೆವರೆಗೆ ಕಾಲಾವಕಾಶ ನೀಡಲಾಗಿದೆ. ನ್ಯಾಯಾಲಯದ ಅನುಮತಿ ಪಡೆಯದೇ ಎಎಬಿಗೆ ಪರ್ಯಾಯವಾಗಿ ಹೊಸ ಸಂಘ ನೋಂದಣಿ ಮಾಡದಂತೆ ಮಾಡಿರುವ ಮಧ್ಯಂತರ ಆದೇಶವನ್ನು ವಿಸ್ತರಿಸಲಾಗಿದೆ ಎಂದು ತಿಳಿಸಿ, ವಿಚಾರಣೆಯನ್ನು ಸೆಪ್ಟೆಂಬರ್‌ 12ಕ್ಕೆ ಮುಂದೂಡಿತು.

Related Articles

Comments (0)

Leave a Comment