ಬೆಂಗಳೂರು ಕಾಲ್ತುಳಿತ ಪ್ರಕರಣ; ನಿಖಿಲ್ ಸೋಸಲೆ ಮತ್ತಿತರರ ಉದ್ಯೋಗ ಪ್ರವಾಸಕ್ಕೆ ಹೈಕೋರ್ಟ್ ಅನುಮತಿ
- by Jagan Ramesh
- August 30, 2025
- 32 Views

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜೂನ್ 4ರಂದು ಸಂಭವಿಸಿದ್ದ ಕಾಲ್ತುಳಿತ ಪ್ರಕರಣದಲ್ಲಿ ಆರೋಪಿಗಳಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನಿಖಿಲ್ ಸೋಸಲೆ ಮತ್ತು ಡಿಎನ್‌ಎ ಎಂಟರ್ಟೇನ್ಮೆಂಟ್ ನೆಟ್‌ವರ್ಕ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಸುನೀಲ್ ಮ್ಯಾಥ್ಯೂ, ಉದ್ಯೋಗಿಗಳಾದ ಎಸ್.ಕಿರಣ್ ಕುಮಾರ್ ಮತ್ತು ಸಮಂತ್ ಮಾವಿನಕೆರೆ ಅವರಿಗೆ ಕೆಲಸದ ನಿಮಿತ್ತ ದೇಶದ ವಿವಿಧೆಡೆ ಪ್ರವಾಸ ಕೈಗೊಳ್ಳಲು ಹೈಕೋರ್ಟ್ ಅನುಮತಿ ನೀಡಿದೆ.
ಕೆಲಸದ ಕಾರಣಗಳಿಗಾಗಿ ದೇಶದ ವಿವಿಧೆಡೆ ಪ್ರವಾಸ ಕೈಗೊಳ್ಳಬೇಕಿದ್ದು, ಪ್ರಕರಣದಲ್ಲಿ ಮಧ್ಯಂತರ ಜಾಮೀನು ಮಂಜೂರು ಮಾಡುವಾಗ ನ್ಯಾಯಾಲಯದ ವ್ಯಾಪ್ತಿ ತೊರೆಯದಂತೆ ವಿಧಿಸಿದ್ದ ಷರತ್ತು ಸಡಿಲಿಸುವಂತೆ ಕೋರಿ ಆರೋಪಿಗಳು ಸಲ್ಲಿಸಿದ್ದ ಮಧ್ಯಂತರ ಅರ್ಜಿಗಳನ್ನು ಶನಿವಾರ ಪುರಸ್ಕರಿಸಿರುವ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿತು.
ವಿಚಾರಣೆ ವೇಳೆ ನಿಖಿಲ್ ಸೋಸಲೆ ಪರ ಹಿರಿಯ ವಕೀಲ ಡಿ.ಆರ್. ರವಿಶಂಕರ್ ವಾದ ಮಂಡಿಸಿ, ಪ್ರಕರಣದ ತನಿಖೆ ಬಹುತೇಕ ಪೂರ್ಣಗೊಂಡಿದ್ದು, ಅರ್ಜಿದಾರರು ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಿದ್ದಾರೆ. ಸದ್ಯ ನಾಲ್ಕು ದಿನ ಕೆಲಸದ ಕಾರಣಕ್ಕಾಗಿ ಮುಂಬೈ ಪ್ರವಾಸ ಕೈಗೊಳ್ಳಬೇಕಿದೆ. ಅದಕ್ಕೆ ಅನುಮತಿ ನೀಡಬೇಕು ಎಂದು ಕೋರಿದರು. ಸುನೀಲ್ ಮ್ಯಾಥ್ಯೂ, ಕಿರಣ್ ಕುಮಾರ್ ಮತ್ತು ಸಮಂತ್ ಮಾವಿನಕೆರೆ ಪರ ಹಾಜರಿದ್ದ ವಕೀಲ ಸೂರಜ್ ಸಂಪತ್, ತಮ್ಮ ಕಕ್ಷಿದಾರರು ಕರ್ತವ್ಯದ ಭಾಗವಾಗಿ ದೇಶಾದ್ಯಂತ ಪ್ರಯಾಣಿಸಬೇಕಿದ್ದು, ಅವರಿಗೂ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದರು.
ಮನವಿ ಪರಿಗಣಿಸಿದ ನ್ಯಾಯಪೀಠ, ಪ್ರವಾಸ ಕೈಗೊಳ್ಳುವುದಕ್ಕೂ ಮುನ್ನ ಹಾಗೂ ಪ್ರವಾಸದಿಂದ ಹಿಂದಿರುಗಿದ ಬಳಿಕ ತನಿಖಾಧಿಕಾರಿಗೆ ಮಾಹಿತಿ ಒದಗಿಸಬೇಕು ಎಂಬ ಷರತ್ತಿಗೆ ಒಳಪಟ್ಟಂತೆ ಅರ್ಜಿದಾರರ ಮಧ್ಯಂತರ ಅರ್ಜಿಯನ್ನು ಪುರಸ್ಕರಿಸಿತು.
Related Articles
Thank you for your comment. It is awaiting moderation.
Comments (0)