ಕಾನೂನು ಪದವಿ ಪ್ರವೇಶಕ್ಕೆ ಅಧಿಕ ಶುಲ್ಕ ಸಂಗ್ರಹ ಪ್ರಶ್ನಿಸಿದ ಅರ್ಜಿ; ಸೆ.9ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
- by Jagan Ramesh
- August 29, 2025
- 198 Views
ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ (ಕೆಎಸ್‌ಎಲ್‌ಯು) 2025-2026ನೇ ಸಾಲಿನ ಪ್ರವೇಶಾತಿಗೆ ವಿದ್ಯಾರ್ಥಿಗಳಿಂದ ಕಾನೂನುಬಾಹಿರವಾಗಿ ಅಧಿಕ ಶುಲ್ಕ ಸಂಗ್ರಹಿಸಲಾಗಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಸೆಪ್ಟೆಂಬರ್ 9ಕ್ಕೆ ಮುಂದೂಡಿದೆ.
ಕೆಎಸ್‌ಎಲ್‌ಯು ಸಂಯೋಜಿತ ಕಾಲೇಜುಗಳಿಗೆ 2025-26ನೇ ಸಾಲಿನ ವಿವಿಧ ಕೋರ್ಸ್‌ಗಳ ಪ್ರವೇಶ ಶುಲ್ಕ ಪರಿಷ್ಕರಿಸಿ 2025ರ ಜುಲೈ 2ರಂದು ಹೊರಡಿಸಲಾಗಿರುವ ಸುತ್ತೋಲೆ ರದ್ದು ಕೋರಿ ಬೆಂಗಳೂರಿನ ಕೆ.ಎನ್. ಪ್ರಣವ, ಎನ್. ಪ್ರಿಯಾಂಕ ಸೇರಿ 6 ಮಂದಿ ಕಾನೂನು ವಿದ್ಯಾರ್ಥಿಗಳು ಸಲ್ಲಿಸಿರುವ 3 ಪ್ರತ್ಯೇಕ ರಿಟ್ ಅರ್ಜಿಗಳನ್ನು ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಕಾನೂನು ವಿಶ್ವ ವಿದ್ಯಾಲಯದ ಪರ ವಕೀಲರು ಹಾಜರಾಗಿ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದರು. ಮನವಿ ಪರಿಗಣಿಸಿದ ನ್ಯಾಯಪೀಠ, ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ಮುಂದೂಡಿತು.
ಅರ್ಜಿದಾರರ ಆಕ್ಷೇಪವೇನು?
2025-26ನೇ ಸಾಲಿನ ವಿವಿಧ ಕೋರ್ಸ್‌ಗಳಿಗೆ ಪ್ರಥಮ ವರ್ಷ ಹಾಗೂ ನಂತರದ ವರ್ಷಗಳಿಗೆ ಪ್ರವೇಶ ಶುಲ್ಕ ಪರಿಷ್ಕರಿಸಿ 2025ರ ಜುಲೈ 2ರಂದು ಕೆಎಸ್‌ಎಲ್‌ಯು ಸುತ್ತೋಲೆ ಹೊರಡಿಸಿದೆ. ಅದರ ಪ್ರಕಾರ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ 6,580 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದ್ದು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ 4,820ರಿಂದ 5,180 ರೂ. ವರೆಗೆ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಈ ಶುಲ್ಕವು ಹಿಂದಿನ ಶೈಕ್ಷಣಿಕ ಸಾಲುಗಳಿಗೆ ಹೋಲಿಸಿದರೆ ಅತ್ಯಧಿಕವಾಗಿದೆ. ಶುಲ್ಕ ಪರಿಷ್ಕರಿಸುವಾಗ ವಿದ್ಯಾರ್ಥಿಗಳೊಂದಿಗೆ ಸಮಾಲೋಚಿಸಿ, ಅವರ ಪ್ರತಿಕ್ರಿಯೆ ಪಡೆದುಕೊಳ್ಳದೇ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
ಶುಲ್ಕ ಪರಿಷ್ಕರಣೆಯು ಶೈಕ್ಷಣಿಕ ಮಂಡಳಿಯ 37ನೇ ಸಭೆಯಲ್ಲಿ ಅನುಮೋದಿಸಲ್ಪಟ್ಟಿದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಆದರೆ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಕಾಯ್ದೆ- 2009ರ ಸೆಕ್ಷನ್ 34ರ ಪ್ರಕಾರ, ಶುಲ್ಕ ನಿಗದಿಪಡಿಸಲು, ಸಂಗ್ರಹಿಸಲು ಅಥವಾ ಪರಿಷ್ಕರಿಸಲು ಯಾವುದೇ ಶಾಸನಬದ್ಧ ಅಧಿಕಾರವನ್ನು ಶೈಕ್ಷಣಿಕ ಮಂಡಳಿಯಾಗಲಿ, ಕುಲಪತಿಯಾಗಲಿ ಹೊಂದಿಲ್ಲ. ವಿದ್ಯಾರ್ಥಿಗಳಿಗೆ ಯಾವುದೇ ಸೇವೆ ಅಥವಾ ಪ್ರಯೋಜನ ಒದಗಿಸಿದಯೇ ಈ ರೀತಿಯ ಶುಲ್ಕಗಳನ್ನು ವಿಧಿಸುವುದು ಕಾನೂನುಬಾಹಿರ ಕ್ರಮವಾಗಿದೆ. ಆದ್ದರಿಂದ, ಶುಲ್ಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಕೆಎಸ್‌ಎಲ್‌ಯು ಹೊರಡಿಸಿರುವ ಸುತ್ತೋಲೆ ರದ್ದುಪಡಿಸಬೇಕೆಂದು ಕೋರಿರುವ ಅರ್ಜಿದಾರರು, ಅರ್ಜಿ ಇತ್ಯರ್ಥವಾಗುವವರೆಗೆ ಸುತ್ತೋಲೆಗೆ ತಡೆ ನೀಡಬೇಕೆಂದು ಮಧ್ಯಂತರ ಮನವಿ ಮಾಡಿದ್ದಾರೆ.
Related Articles
Thank you for your comment. It is awaiting moderation.


Comments (0)