ಜಮೀನುಗಳ ಅಕ್ರಮ ಮಾರಾಟ ತಡೆಗೆ ಕ್ರಮ; ಉನ್ನತ ಮಟ್ಟದ ಸಮಿತಿ ರಚಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶ
- by Jagan Ramesh
- August 21, 2025
- 26 Views

ಬೆಂಗಳೂರು: ರಾಜ್ಯದಲ್ಲಿ ಜಮೀನುಗಳ ಅಕ್ರಮ ಮಾರಾಟ ಹಾಗೂ ವಂಚನೆ ತಡೆಗಟ್ಟಲು ರಾಜ್ಯದ ಜಮೀನು ಸಂಯೋಜಿತ ಭೌಗೋಳಿಕ ಡಿಜಿಟಲ್ ಪ್ಲಾಟ್ಫಾರ್ಮ್ ಮ್ಯಾಪ್ ಸಿದ್ದಪಡಿಸಲು ಉನ್ನತ ಮಟ್ಟದ ಸಮಿತಿ ರಚನೆ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಚಿಕ್ಕಸಣ್ಣೆ ಗ್ರಾಮದಲ್ಲಿ ಒತ್ತುವರಿಯಾಗಿರುವ ಒಟ್ಟು 51 ಎಕರೆ 4 ಗುಂಟೆ ಅರಣ್ಯ ಜಮೀನು ತೆರವುಗೊಳಿಸಲು ನಿರ್ದೇಶಿಸಿ ದೇವನಹಳ್ಳಿ ಅರಣ್ಯ ಸಂರಕ್ಷಣಾಧಿಕಾರಿ ಜಾರಿಗೊಳಿಸಿದ್ದ ನೋಟಿಸ್ ಪ್ರಶ್ನಿಸಿ ಪ್ರಕೃತಿ ಸೆಂಚುರಿ ಪ್ರಾಪರ್ಟೀಸ್ನ ಎಸ್. ಚೇತನ್ ಕುಮಾರ್ ಮತ್ತು ಮೊಹಮದ್ ಸನಾವುಲ್ಲಾ ಎಂಬುವರು ಸಲ್ಲಿಸಿದ್ದ ಪ್ರತ್ಯೇಕ ರಿಟ್ ಅರ್ಜಿಗಳನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಅರ್ಜಿದಾರರು ಒತ್ತುವರಿ ಮಾಡಿರುವ ಅರಣ್ಯ ಜಮೀನನ್ನು ತೆರವುಗೊಳಿಸಬೇಕು. ತೆರವಿಗೆ ಕಾಲಾವಕಾಶ ನೀಡುವುದಕ್ಕೆ ಸಂಬಂಧಿಸಿದಂತೆ ಈ ಆದೇಶದ ಪ್ರಮಾಣಿತ ಪ್ರತಿ ದೊರೆತ 15 ದಿನಗಳಲ್ಲಿ ಅರಣ್ಯಾಧಿಕಾರಿಗಳಿಗೆ ಅರ್ಜಿದಾರರು ಮನವಿ ಪತ್ರ ಸಲ್ಲಿಸಬೇಕು. ಅದಾದ 30 ದಿನಗಳಲ್ಲಿ ಅರ್ಜಿದಾರರ ಮನವಿ ಪರಿಗಣಿಸಿ ಅರಣ್ಯಾಧಿಕಾರಿಗಳು ಸೂಕ್ತ ಆದೇಶ ಹೊರಡಿಸಬೇಕು ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ಜತೆಗೆ, ರಾಜ್ಯದ ಜಮೀನುಗಳ ಅಕ್ರಮ ಮಾರಾಟ ಹಾಗೂ ವಂಚನೆ ತಡೆಯಲು ರಾಜ್ಯದ ಜಮೀನು ಸಂಯೋಜಿತ ಭೌಗೋಳಿಕ ಡಿಜಿಟಲ್ ಪ್ಲಾಟ್ಫಾರ್ಮ್ ಮ್ಯಾಪ್ ಸಿದ್ದಪಡಿಸಲು ಉನ್ನತ ಮಟ್ಟದ ಸಮಿತಿ ರಚನೆ ಮಾಡಬೇಕು. ಸಮಿತಿಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಕಚೇರಿಯ ಅಧಿಕಾರಿ, ಕಂದಾಯ ಇಲಾಖೆ, ಅರಣ್ಯ ಹಾಗೂ ನಗರಾಭಿವೃದ್ದಿ ಇಲಾಖೆ ಅಧಿಕಾರಿಗಳಿರಬೇಕು ಎಂದು ನ್ಯಾಯಾಲಯ ಹೇಳಿದೆ.
ಭೌಗೋಳಿಕ ಮ್ಯಾಪ್ ಸಿದ್ಧಪಡಿಸಲು ಇಸ್ರೋ ಹಾಗೂ ಎಫ್ಎಸ್ಐ ಸಂಸ್ಥೆಗಳ ನೆರವು ಪಡೆಯಬೇಕು. ಸಂಯೋಜಿತ ಭೌಗೋಳಿಕ ಮ್ಯಾಪ್ ಅಲ್ಲಿ ಸ್ಯಾಟಲೈಟ್ ಚಿತ್ರಗಳು ಒಳಗೊಂಡಿರಬೇಕು. ಅದರಲ್ಲಿ ಸರ್ಕಾರದ ಪ್ರತಿ ಜಮೀನುಗಳು ಹಾಗೂ ನಿವೇಶಗಳ ವಿವರ ಲಭ್ಯವಿರಬೇಕು. ಈ ಡಿಜಿಟಲ್ ಪ್ಲಾಟ್ಫ್ಲಾರ್ಮ್ ಸಬ್ ರಿಜಿಸ್ಟ್ರಾರ್ ಕಚೇರಿಗೂ ಸಂಪರ್ಕ ಹೊಂದಿರಬೇಕು. ಆ ಮೂಲಕ ಅಕ್ರಮ ನೋಂದಣಿ ತಡೆಯಬೇಕು. ಜನಸಾಮಾನ್ಯರಿಗೂ ಈ ಡಿಜಿಟಲ್ ಪ್ಲಾಟ್ಫಾರ್ಮ್ ಬಳಕೆಗೆ ಲಭ್ಯವಿರಬೇಕು. ಕಾಲಮಿತಿಯಲ್ಲಿ ಆದೇಶ ಜಾರಿಗೊಳಿಸಬೇಕು. ಈ ಆದೇಶ ಪಾಲಿಸಿದ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶಿಸಿದೆ.
Related Articles
Thank you for your comment. It is awaiting moderation.
Comments (0)