ಲೋಕಾಯುಕ್ತ ದಾಳಿಯ ಬೆದರಿಕೆಯೊಡ್ಡಿ ಹಣ ವಸೂಲಿ ಆರೋಪ; ಶ್ರೀನಾಥ್ ಜೋಶಿ ವಿರುದ್ಧ ಆತುರದ ಕ್ರಮ ಬೇಡವೆಂದ ಹೈಕೋರ್ಟ್
- by Jagan Ramesh
- August 21, 2025
- 138 Views

ಬೆಂಗಳೂರು: ಲೋಕಾಯುಕ್ತ ದಾಳಿ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳನ್ನು ಬೆದರಿಸಿ, ಹಣ ಸುಲಿಗೆ ಮಾಡಿದ ಆರೋಪ ಸಂಬಂಧ ಐಪಿಎಸ್ ಅಧಿಕಾರಿ ಶ್ರೀನಾಥ್ ಜೋಶಿ (ಲೋಕಾಯುಕ್ತ ಮಾಜಿ ಎಸ್ಪಿ) ಅವರನ್ನು ಬಂಧಿಸುವಂತಹ ಆತುರದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ನಿರ್ದೇಶಿಸಿದೆ.
ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಶ್ರೀನಾಥ್ ಜೋಶಿ ಸಲ್ಲಿಸಿದ್ದ ಅರ್ಜಿ ಕುರಿತು ಗುರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿತು.
ಎಫ್ಐಆರ್ನಲ್ಲಿ ಶ್ರೀನಾಥ್ ಜೋಶಿ ಅವರನ್ನು ಆರೋಪಿಯನ್ನಾಗಿ ಮಾಡಲಾಗಿಲ್ಲ. ಹೀಗಿದ್ದರೂ, ಅರ್ಜಿದಾರರು ಬಂಧನ ಭೀತಿ ಎದುರಿಸುತ್ತಿದ್ದಾರೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) ಸೆಕ್ಷನ್ 35(3)ರ ಅಡಿ ನೋಟಿಸ್ ಜಾರಿಗೊಳಿಸಲಾಗಿದ್ದು, ಅದರ ಭಾಗವಾಗಿ ಜೋಶಿ ಅವರು ಜುಲೈ 15ರಂದು ತನಿಖೆಗೆ ಹಾಜರಾಗಿದ್ದರು. ಆದರೆ, ಅವರನ್ನು ಬಂಧಿಸಲಾಗಿಲ್ಲ. ಸದ್ಯ ಪ್ರಕರಣದಲ್ಲಿ ಜೋಶಿ ಅವರನ್ನು ಆರೋಪಿಯನ್ನಾಗಿಸಲಾಗಿದೆ. ಆಗಸ್ಟ್ 29ರಂದು ವಿಚಾರಣೆ ಮುಂದೂಡಲಾಗಿದೆ. ಅಲ್ಲಿಯವರೆಗೆ ಲೋಕಾಯುಕ್ತ ಪೊಲೀಸರು ಶ್ರೀನಾಥ್ ಜೋಶಿಯನ್ನು ಬಂಧಿಸುವಂಥ ಆತುರದ ನಿರ್ಧಾರ ಕೈಗೊಳ್ಳಬಾರದು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಇದಕ್ಕೂ ಮುನ್ನ ಲೋಕಾಯುಕ್ತ ಪರ ವಿಶೇಷ ಸರ್ಕಾರಿ ಅಭಿಯೋಜಕ ವೆಂಕಟೇಶ್ ಅರಬಟ್ಟಿ ಅವರು, ಜುಲೈ 15ರಂದು ಶ್ರೀನಾಥ್ ಜೋಶಿ ಅವರು ವಿಚಾರಣೆಗೆ ಹಾಜರಾಗಿದ್ದರು. ಸದ್ಯಕ್ಕೆ ಅವರಿಗೆ ಬಂಧನದ ಭೀತಿ ಇಲ್ಲ ಎಂದು ತಿಳಿಸಿದರು.
ಶ್ರೀನಾಥ್ ಜೋಶಿ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂದೇಶ್ ಚೌಟ, ಅತ್ಯುತ್ತಮ ಸೇವಾ ಹಿನ್ನೆಲೆ ಹೊಂದಿರುವ ಅರ್ಜಿದಾರರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಆರೋಪಿಯಾಗಿರುವ ನಿಂಗಪ್ಪ ಸಾವಂತ್ಗೂ ಜೋಶಿ ಅವರಿಗೂ ಯಾವುದೇ ಸಂಬಂಧವಿಲ್ಲ. ವಿಚಾರಣಾ ನ್ಯಾಯಾಲಯ ಜೋಶಿ ಅವರ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದೆ. ಬಂಧನದ ಭೀತಿ ಇರುವ ಕಾರಣ ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.
Related Articles
Thank you for your comment. It is awaiting moderation.
Comments (0)