ಕಾರ್ಖಾನೆ ಆವರಣದ ನಿರ್ವಹಣೆ, ದುರಸ್ತಿಗೆ ಗುತ್ತಿಗೆ ಕೆಲಸ ಮಾಡುವರೂ ಇಎಸ್ಐ ಕಾಯ್ದೆಯಡಿ ಕಾರ್ಮಿಕರೆನಿಸಿಕೊಳ್ಳುತ್ತಾರೆ;ಹೈಕೋರ್ಟ್
- by Prashanth Basavapatna
- August 15, 2025
- 32 Views

ಬೆಂಗಳೂರು: ಕಾರ್ಖಾನೆ ಆವರಣದಲ್ಲಿ ನಿರ್ಮಾಣ ಮತ್ತು ದುರಸ್ತಿ ಕಾರ್ಯಗಳಿಗಾಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವರನ್ನೂ ಸಹ ‘ಕಾರ್ಮಿಕ ರಾಜ್ಯ ವಿಮಾ (ಇಎಸ್ಐ) ಕಾಯ್ದೆ’ಯ ಸೆಕ್ಷನ್ 2(9) ರ ಅಡಿಯಲ್ಲಿ ‘ಕಾರ್ಮಿಕರು’ ಎಂದು ಪರಿಗಣಿಸಲಾಗುತ್ತದೆ ಎಂದು ಹೈಕೋರ್ಟ್ ಆದೇಶಿಸಿದೆ.
ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿದ್ದ ಕಾರ್ಮಿಕರಿಗೆ ಆನೇಕಲ್ ತಾಲೂಕಿನ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿರುವ ಸನ್ಸೇರಾ ಇಂಜಿನಿಯರಿಂಗ್ ಕಂಪನಿ ಪಾವತಿಸಬೇಕಿದ್ದ 13,52,825 ರೂ. ಇಎಸ್ಐ ಪಾಲಿನ ಮೊತ್ತವನ್ನು 3.5 ಲಕ್ಷ ರೂ.ಗಳಿಗೆ ಇಳಿಕೆ ಮಾಡಿದ್ದ ಬೆಂಗಳೂರಿನ ಇಎಸ್ಐ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಇಎಸ್ಐ ನಿಗಮದ ಸಹಾಯಕ ನಿರ್ದೇಶಕರು ಸಲ್ಲಿಸಿದ್ದ ಮೇಲ್ಮನವಿ ಮಾನ್ಯ ಮಾಡಿರುವ ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಹೈಕೋರ್ಟ್ ಹೇಳಿದ್ದೇನು?
ಇಎಸ್ಐ ಕಾಯ್ದೆಯ ಸೆಕ್ಷನ್ 2(9) ರ ಅಡಿಯಲ್ಲಿ ‘ಕಾರ್ಮಿಕ’ ಎಂದರೆ, ಪ್ರಧಾನ ಉದ್ಯೋಗದಾತರಿಂದ ನೇರವಾಗಿ ನೇಮಕಗೊಂಡು ಕೆಲಸ ಮಾಡುವವರಷ್ಟೇ ಅಲ್ಲದೆ, ಕಾರ್ಖಾನೆಯ ಕೆಲಸ ಅಥವಾ ಕಾರ್ಖಾನೆಯ ಮುಖ್ಯ ಕೆಲಸಕ್ಕೆ ಪೂರಕವಾದ ಕೆಲಸಗಳಿಗಾಗಿ ತಕ್ಷಣದ ಉದ್ಯೋಗದಾತರ (ಗುತ್ತಿಗೆದಾರರಂಥವರು) ಮೂಲಕ ನೇಮಕಗೊಂಡವರೂ ಆಗಿರುತ್ತಾರೆ. ಆದ್ದರಿಂದ, ಆ ಉದ್ಯೋಗಿಗಳಿಗೆ ಕಾಯ್ದೆಯಡಿಯಲ್ಲಿ ನೀಡಬೇಕಾದ (ಇಎಸ್ಐ) ಪಾಲನ್ನು ನೇಮಿಸಿಕೊಂಡ ಸಂಸ್ಥೆ ಪಾವತಿಸಬೇಕಾಗುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಈ ಪ್ರಕರಣದಲ್ಲಿ, ಪ್ರತಿವಾದಿ ಸಂಸ್ಥೆ (ಸನ್ಸೇರಾ ಇಂಜಿನಿಯರಿಂಗ್ಸ್) ತನ್ನ ಕಾರ್ಖಾನೆ ಆವರಣದಲ್ಲಿ ವಿವಿಧ ನಿರ್ಮಾಣ ಕಾರ್ಯಗಳು, ನಿರ್ವಹಣೆ ಮತ್ತು ದುರಸ್ತಿ ಚಟುವಟಿಕೆಗಾಗಿ ಗುತ್ತಿಗೆದಾರರನ್ನು ನೇಮಿಸಿಕೊಂಡಿತ್ತು. ಹೀಗಿದ್ದರೂ, ಅಂತಹ ಚಟುವಟಿಕೆಯಲ್ಲಿ ತೊಡಗಿದ್ದ ಕಾರ್ಮಿಕರಿಗೆ ಸಂಬಂಧಿಸಿದಂತೆ ಇಎಸ್ಐ ಪಾಲನ್ನು ಕಂಪನಿ ಪಾವತಿಸಿಲ್ಲ. ಹೆಚ್ಚುವರಿ ಶೆಡ್ಗಳ ನಿರ್ಮಾಣ, ಹೊಸ ಘಟಕಗಳ ಸ್ಥಾಪನೆ, ಅಸ್ತಿತ್ವದಲ್ಲಿರುವ ಕಟ್ಟಡಗಳ ನವೀಕರಣ ಇನ್ನಿತರ ಚಟುವಟಿಕೆಯನ್ನು ಕಾರ್ಮಿಕರು ನಡೆಸಿದ್ದಾರೆ. ಇವೆಲ್ಲವೂ ಕಾರ್ಖಾನೆಯ ನಿರ್ವಹಣೆಗೆ ಸಂಬಂಧಿಸಿವೆ. ಹೀಗಿರುವಾಗ, ಕಾರ್ಮಿಕರನ್ನು ಸ್ವತಂತ್ರ ಗುತ್ತಿಗೆದಾರರ ಮೂಲಕ ನೇಮಿಸಿಕೊಳ್ಳಲಾಗಿದ್ದು, ಅವರ ಕೆಲಸಗಳು ಕಾರ್ಖಾನೆಯ ಚಟುವಟಿಕೆಗೆ ಸಂಬಂಧಿಸಿದ್ದಲ್ಲ ಎಂಬ ವಾದ ಒಪ್ಪಲಾಗದು ಎಂದು ನ್ಯಾಯಪೀಠ ಹೇಳಿದೆ.
ಸಾಕಷ್ಟು ಅವಕಾಶ ನೀಡಿದ ಹೊರತಾಗಿಯೂ ಕಾರ್ಮಿಕರು ಹಾಗೂ ಸಾಮಗ್ರಿಗಳ ವೆಚ್ಚ ಸೇರಿ ಗುತ್ತಿಗೆದಾರರಿಗೆ ಮಾಡಲಾಗಿರುವ ಪಾವತಿಗೆ ಸಂಬಂಧಿಸಿದ ವಿವರಗಳನ್ನು ಪ್ರತಿವಾದಿ ಸಂಸ್ಥೆ ಒದಗಿಸಿಲ್ಲ. ಈ ಹಿನ್ನೆಲೆಯಲ್ಲಿ ಇಎಸ್ಐ ನಿಗಮವು ಕೆಲಸದ ಸ್ವರೂಪ ಆಧರಿಸಿ, ವೇತನ ಹಾಗೂ ಆಂತರಿಕ ಮೌಲ್ಯಮಾಪನ ನಡೆಸಿ ಶೇ.25 ಭಾಗ ಪಾವತಿ ಮಾಡಲು ಅಂದಾಜು ಮಾಡಲಾಗಿದೆ. ಇದರಲ್ಲಿ ಯಾವುದೇ ದೋಷ ಕಂಡುಬರುತ್ತಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಇಎಸ್ಐ ಕೋರ್ಟ್ ಆದೇಶ ರದ್ದು:
ನಿಗಮ ಅಂದಾಜಿಸಿದ್ದ ಮೊತ್ತವನ್ನು ಇಳಿಕೆ ಮಾಡಿರುವ ಇಎಸ್ಐ ನ್ಯಾಯಾಲಯದ ಕ್ರಮ ಲೋಪದಿಂದ ಕೂಡಿದೆ. 3.5 ಲಕ್ಷ ಪರಿಷ್ಕೃತ ಮೊತ್ತವನ್ನು ಬೆಂಬಲಿಸುವ ಯಾವುದೇ ಲೆಕ್ಕವನ್ನೂ ತೋರಿಸಿಲ್ಲ. ಯಾವುದೇ ಆಧಾರವಿಲ್ಲದೇ ಈ ರೀತಿ ಇಳಿಕೆ ಮಾಡುವುದು ಉದ್ಯೋಗದಾತರು ದಾಖಲೆಗಳನ್ನು ಒದಗಿಸದಿರುವುದಕ್ಕೆ ಹಾಗೂ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವುದಕ್ಕೆ ದಾರಿಮಾಡಿಕೊಟ್ಟಂತಾಗುತ್ತದೆ ಎಂದಿರುವ ಹೈಕೋರ್ಟ್, ಇಎಸ್ಐ ನ್ಯಾಯಾಲಯದ ಆದೇಶ ರದ್ದುಪಡಿಸಿದೆ. ಜತೆಗೆ, 13,52,825 ರೂ.ಗಳನ್ನು ಎಂಟು ವಾರಗಳ ಒಳಗೆ ಇಎಸ್ಐ ನಿಗಮಕ್ಕೆ ಪಾವತಿಸಬೇಕು ಎಂದು ಪ್ರತಿವಾದಿ ಸಂಸ್ಥೆಗೆ ನಿರ್ದೇಶಿಸಿದೆ.
Related Articles
Thank you for your comment. It is awaiting moderation.
Comments (0)