ಅಭಿಮಾನ್ ಸ್ಟುಡಿಯೊ ಆವರಣದಿಂದ ವಿಷ್ಣು ಸ್ಮಾರಕ ತೆರವು; ಇಲ್ಲಿದೆ ಹೈಕೋರ್ಟ್ ಆದೇಶದ ವಿವರ

ಬೆಂಗಳೂರು: ಉತ್ತರಹಳ್ಳಿ–ಕೆಂಗೇರಿ ರಸ್ತೆಯಲ್ಲಿರುವ ಅಭಿಮಾನ್ ಸ್ಟುಡಿಯೊ ಆವರಣದಲ್ಲಿದ್ದ ನಟ ವಿಷ್ಣುವರ್ಧನ್ ಸ್ಮಾರಕವನ್ನು ರಾತ್ರೋರಾತ್ರಿ ನೆಲಸಮಗೊಳಿಸಿದ್ದರಿಂದ ಅವರ ಅಭಿಮಾನಿ ಬಳಗದಿಂದ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈ ಮಧ್ಯೆ, ವಿಷ್ಣು ಸ್ಮಾರಕವನ್ನು ರಾಜ್ಯ ಹೈಕೋರ್ಟ್ ಆದೇಶದಂತೆ ತೆರವುಗೊಳಿಸಲಾಗಿದೆ ಎಂದು ತಿಳಿದುಬಂದಿತ್ತು. ಹಾಗಾದರೆ, ಸ್ಮಾರಕ ತೆರವಿಗೆ ಕೋರಿ ನ್ಯಾಯಾಲಯದ ಮೊರೆ ಹೋದವರು ಯಾರು, ಹೈಕೋರ್ಟ್‌ ಯಾವಾಗ ಆದೇಶ ಮಾಡಿತ್ತು, ಆ ಆದೇಶದಲ್ಲೇನಿತ್ತು ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಅಭಿಮಾನ್ ಸ್ಟುಡಿಯೋ ಆವರಣದಲ್ಲಿರುವ ಅನಧಿಕೃತ ಸ್ಮಾರಕ ತೆರವುಗೊಳಿಸುವಂತೆ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದವರು ಅಭಿಮಾನ್ ಸ್ಟುಡಿಯೊ ಮೂಲ ಮಾಲೀಕರಾದ ಹಿರಿಯ ನಟ ಬಾಲಕೃಷ್ಣ ಅವರ ಮೊಮ್ಮಗ ಬಿ.ಎಸ್. ಕಾರ್ತಿಕ್. ಮೊದಲಿಗೆ, ಸ್ಟುಡಿಯೊ ಆವರಣದಲ್ಲಿರುವ ಸ್ಮಾರಕ ತೆರವುಗೊಳಿಸುವಂತೆ ಕೋರಿ 2024ರ ಡಿಸೆಂಬರ್ 2ರಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ 13ರಂದು ಬೆಂಗಳೂರು ನಗರ ವಿಶೇಷ ಜಿಲ್ಲಾಧಿಕಾರಿಗೆ ಕಾರ್ತಿಕ್ ಮನವಿ ಸಲ್ಲಿಸಿದ್ದರು. ಆದರೆ, ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ 2025ರ ಜನವರಿ 9ರಂದು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು.

ಹೈಕೋರ್ಟ್ ಆದೇಶವೇನು?
ಅರ್ಜಿ ಕುರಿತು ಜನವರಿ 13ರಂದು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಮೈಸೂರಿನಲ್ಲಿ ಡಾ. ವಿಷ್ಣುವರ್ಧನ್ ಅವರ ಸ್ಮಾರಕ‌ ನಿರ್ಮಿಸಲು ಸರ್ಕಾರ ನಿರ್ಧರಿಸಿದ್ದು, ಈಗಾಗಲೇ ಅಲ್ಲಿ ನಿರ್ಮಾಣ‌ ಕಾಮಗಾರಿ ಪೂರ್ಣಗೊಂಡಿದೆ. ಹೀಗಿರುವಾಗ, ವಿವಾದಿತ ಜಾಗದಲ್ಲಿ ಕಟ್ಟಡ/ಸ್ಮಾರಕವಿರುವುದು ಅಪ್ರಸ್ತುತವೆನಿಸಲಿದೆ. ಆದ್ದರಿಂದ, ವಿವಾದಿತ ಭೂಮಿಯಲ್ಲಿ ಯಾವುದೇ ಕಟ್ಟಡಗಳನ್ನು ನಿರ್ಮಿಸಿದ್ದರೆ, ಅದನ್ನು ಎರಡು ತಿಂಗಳ ಒಳಗೆ ತೆರವುಗೊಳಿಸಬೇಕು ಎಂದು ಬೆಂಗಳೂರು ನಗರ ವಿಶೇಷ ಜಿಲ್ಲಾಧಿಕಾರಿಗೆ ನಿರ್ದೇಶಿಸಿತ್ತು.

ಒಂದು ವೇಳೆ, ನ್ಯಾಯಾಲಯದ ಆದೇಶದಂತೆ ವಿಶೇಷ ಜಿಲ್ಲಾಧಿಕಾರಿಗಳು ತೆರವುಗೊಳಿಸದಿದ್ದರೆ, ಅರ್ಜಿದಾರರೇ ತೆರವು ಕಾರ್ಯ ನಡೆಸಬಹುದು. ಅಂತಹ ಸಂದರ್ಭದಲ್ಲಿ ಅನಧಿಕೃತ ಕಟ್ಟಡದ ತೆರವು ಹಾಗೂ ತ್ಯಾಜ್ಯ ಸಾಗಣೆಗೆ ತಗಲುವ ವೆಚ್ಚವನ್ನು ಬೆಂಗಳೂರು ನಗರ ವಿಶೇಷ ಜಿಲ್ಲಾಧಿಕಾರಿ ಹಾಗೂ ಸರ್ಕಾರವೇ ಭರಿಸಬೇಕು ಎಂದು ನಿರ್ದೇಶಿಸಿ, ಅರ್ಜಿ ಇತ್ಯರ್ಥಪಡಿಸಿತ್ತು.

ನ್ಯಾಯಾಲಯದ ಆದೇಶದಂತೆ 2 ತಿಂಗಳಲ್ಲಿ ಸ್ಮಾರಕ ಸ್ಥಳವನ್ನು ತೆರವು ಮಾಡದ ಕಾರಣ, ಕಳೆದ ಗುರುವಾರ ರಾತ್ರಿ ಪೊಲೀಸರ ಸಮ್ಮುಖದಲ್ಲಿ ನಮ್ಮ ಕಕ್ಷಿದಾರರೇ ತೆರವು ಮಾಡಿದ್ದಾರೆ ಎಂದು ಬಿ.ಎಸ್. ಕಾರ್ತಿಕ್ ಪರ ವಕೀಲರಾದ ವಿ. ಕಾರ್ತಿಕ್ ಮಾಹಿತಿ ನೀಡಿದ್ದಾರೆ.

ಪಿಐಎಲ್ ವಜಾಗೊಳಿಸಿದ್ದ ಹೈಕೋರ್ಟ್:
ದಿ. ಡಾ. ವಿಷ್ಣುವರ್ಧನ್ ಸ್ಮಾರಕ ಭವನ ನಿರ್ಮಾಣಕ್ಕಾಗಿ ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿಯ ಮೈಲಸಂದ್ರ ಗ್ರಾಮದ ಸರ್ವೇ ಸಂಖ್ಯೆ 68ರಲ್ಲಿ (ಹಳೇ ಸರ್ವೇ ಸಂಖ್ಯೆ 26) 10 ಗುಂಟೆ ಜಾಗ ಮಂಜೂರು ಮಾಡಲು ಸರ್ಕಾರ ಹಾಗೂ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ನಿರ್ದೇಶಿಸುವಂತೆ ಕೋರಿ ವಿಷ್ಣು ಸೇನಾ ಸಂಘಟನೆ, ಡಾ. ವಿಷ್ಣುವರ್ಧನ್ ಪುಣ್ಯಭೂಮಿ ಟ್ರಸ್ಟ್, ಸಿ.ಸಿ. ಶ್ರೀಧರ್ ಸೇರಿ 7 ಮಂದಿ 2023ರಲ್ಲಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ, ವಿಷ್ಣುವರ್ಧನ್ ಅವರ ಸ್ಮಾರಕವನ್ನು ಬೆಂಗಳೂರಿನಿಂದ ಮೈಸೂರಿಗೆ ಸ್ಥಳಾಂತರಿಸಲು 2020ರ ಜನವರಿ 10ರಂದು ಸರ್ಕಾರ ಹೊರಡಿಸಿದ್ದ ಆದೇಶ ಹಾಗೂ ಮೈಸೂರಿನಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ಸ್ಮಾರಕ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿರುವ ವಿಚಾರಗಳನ್ನು ಗಮನಿಸಿತ್ತಲ್ಲದೆ, ಚಿತ್ರತಾರೆಯೊಬ್ಬರಿಗೆ ಸ್ಮಾರಕ ನಿರ್ಮಾಣ ಮಾಡಬೇಕೆಂಬ ಮನವಿಯು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಸ್ತುವಿಷಯವಲ್ಲ ಎಂದು ಅಭಿಪ್ರಾಯಪಟ್ಟು, 2024ರ ಜೂನ್ 4ರಂದು ಪಿಐಎಲ್ ವಜಾಗೊಳಿಸಿತ್ತು. ವಿಭಾಗೀಯ ನ್ಯಾಯಪೀಠದ ಈ‌ ಆದೇಶವನ್ನು ವಿಷ್ಣುವರ್ಧನ್ ಸ್ಮಾರಕ ತೆರವಿಗೆ ಹೊರಡಿಸಿರುವ ಆದೇಶದಲ್ಲಿ ಏಕಸದಸ್ಯ ನ್ಯಾಯಪೀಠ ಉಲ್ಲೇಖಿಸಿದೆ.

Related Articles

Comments (1)

  • - ಅಭಿಮಾನ್ ಸ್ಟುಡಿಯೊ ಆವರಣದಿಂದ ವಿಷ್ಣು ಸ್ಮಾರಕ ತೆರವು; ಇಲ್ಲಿದೆ ಹೈಕೋರ್ಟ್ ಆದೇಶದ ವಿವರ - Suddiloka

    […] https://legalsamachar.com/high-court/removal-of-vishnuvardhan-memorial-from-abhiman-studio-premises-… […]

    Reply

Leave a Comment