ಡಿಬಿಟಿ ಮೂಲಕ ತಸ್ತಿಕ್ ಹಣ ಪಾವತಿ ವ್ಯವಸ್ಥೆ ತಾತ್ಕಾಲಿಕ ಸ್ಥಗಿತಕ್ಕೆ ಕೋರಿದ್ದ ಪಿಐಎಲ್ ವಜಾ
- by Jagan Ramesh
- August 6, 2025
- 140 Views

ಬೆಂಗಳೂರು: ರಾಜ್ಯದಲ್ಲಿ ‘ನೇರ ನಗದು ವರ್ಗಾವಣೆ’ (ಡಿಬಿಟಿ) ಮೂಲಕ ಅರ್ಚಕರಿಗೆ ತಸ್ತಿಕ್ ಹಣ ಪಾವತಿಸುವ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಈ ಹಿಂದೆ ಜಾರಿಯಲ್ಲಿದ್ದ ಸ್ವಯಂ ದೃಢೀಕರಣ ಆಧಾರಿತ ತಸ್ತಿಕ್ ಹಣ ಪಾವತಿ ಪದ್ದತಿಯನ್ನು ಮುಂದುವರಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಲು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಕೆ.ಎಸ್. ಪದ್ಮನಾಭಾಚಾರ್ ಸೇರಿ ಚಿಕ್ಕಬಳ್ಳಾಪುರ ಜಿಲ್ಲೆಯ ಐವರು ಅರ್ಚಕರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಡಿಬಿಟಿ ವ್ಯವಸ್ಥೆಯಡಿ ತಸ್ತಿಕ್ ಹಣ ಪಡೆದುಕೊಳ್ಳಬೇಕಾದರೆ ಹತ್ತಾರು ಪ್ರಕ್ರಿಯೆಗಳನ್ನು ಅನುಸರಿಸಬೇಕು. ಆಧಾರ್ ಸೇರಿ ಗುರುತಿನ ದಾಖಲೆಗಳನ್ನು ಸಲ್ಲಿಸಬೇಕು. ಈ ವ್ಯವಸ್ಥೆ ಬಹಳ ತಾಂತ್ರಿಕ ಹಾಗೂ ಗೊಂದಲಕಾರಿಯಾಗಿದೆ. ದೇವಸ್ಥಾನದ ಅರ್ಚಕರಿಗೆ ತಂತ್ರಜ್ಞಾನ ಅಷ್ಟಾಗಿ ತಿಳಿದಿರುವುದಿಲ್ಲ. ಹಳ್ಳಿಗಾಡು, ಅರಣ್ಯ ಪ್ರದೇಶದ ಅರ್ಚಕರಿಗೆ ನೆಟ್ವರ್ಕ್ ಸಮಸ್ಯೆಯೂ ಇರುತ್ತದೆ. ದಾಖಲೆ ಸಲ್ಲಿಸಲು ಅರ್ಚಕರು ಹತ್ತಾರು ಕಿ.ಮೀ ಪ್ರಯಾಣಿಸಬೇಕಾಗುತ್ತದೆ. ಇದರಿಂದ ದೈನಂದಿನ ಪೂಜಾ ಕೈಂಕರ್ಯಗಳಿಗೆ ತೋಂದರೆ ಆಗುತ್ತದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಡಿಬಿಟಿ ವ್ಯವಸ್ಥೆಗೆ ನಮ್ಮ ವಿರೋಧವಿಲ್ಲ. ಆದರೆ, ಅದಕ್ಕೆ ಪೂರಕವಾಗಿ ವ್ಯವಸ್ಥೆ ತಂದು, ತಿಳಿವಳಿಕೆ ನೀಡಬೇಕಾಗಿದೆ. ಆದ್ದರಿಂದ, ತಾತ್ಕಲಿಕವಾಗಿ ಡಿಬಿಟಿ ವ್ಯವಸ್ಥೆ ಸ್ಥಗಿತಗೊಳಿಸಬೇಕು. ಅದರ ಬದಲಿಗೆ ಸ್ವಯಂ ದೃಢೀಕರಣ ಆಧಾರಿತ ತಸ್ತಿಕ್ ಹಣ ಪಾವತಿ ವ್ಯವಸ್ಥೆ ಮುಂದುವರಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದರು.
ಪಾರದರ್ಶಕತೆಯೇ ಡಿಬಿಟಿ ಗುರಿ:
ಅರ್ಜಿದಾರರ ವಾದ ಒಪ್ಪದ ನ್ಯಾಯಪೀಠ, ಆರ್ಥಿಕ ಸೌಲಭ್ಯಗಳು ನೇರವಾಗಿ ಫಲಾನುಭವಿಗಳಿಗೆ ತಲುಪುವ ಉದ್ದೇಶದೊಂದಿಗೆ ಡಿಬಿಟಿ ವ್ಯವಸ್ಥೆ ಜಾರಿಗೆ ತರಲಾಗಿದೆ. ಸೋರಿಕೆ ತಡೆದು ಪಾರದರ್ಶಕತೆ ತರುವುದು ಡಿಬಿಟಿ ವ್ಯವಸ್ಥೆಯ ಮುಖ್ಯ ಗುರಿಯಾಗಿದೆ. ಈ ವ್ಯವಸ್ಥೆಯಿಂದ ಅರ್ಜಿದಾರರ ಸಾಂವಿಧಾನಿಕ ಹಕ್ಕುಗಳಿಗೆ ಧಕ್ಕೆ ಬರಲಾರದು. ತಾಂತ್ರಿಕ ಸಮಸ್ಯೆಗಳಿದ್ದರೆ ಅದನ್ನು ಪರಿಹರಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಿಗಳ ನೆರವು ಪಡೆದುಕೊಳ್ಳಬಹುದು. ಆದ್ದರಿಂದ, ಈ ಅರ್ಜಿ ಆಧರಿಸಿ ನ್ಯಾಯಾಲಯ ಯಾವುದೇ ನಿರ್ದೇಶನ ನೀಡುವುದಿಲ್ಲ ಎಂದು ತಿಳಿಸಿ, ಅರ್ಜಿ ವಜಾಗೊಳಿಸಿ ಆದೇಶಿಸಿತು.
ಪ್ರಕರಣವೇನು?
ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳ ಅರ್ಚಕರಿಗೆ ಡಿಬಿಟಿ ಮೂಲಕ ತಸ್ತಿಕ್ ಹಣ ಪಾವತಿಸಲು ಆನ್‌ಲೈನ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಕ್ರಮ ಕೈಗೊಳ್ಳುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿ 2024ರ ಫೆಬ್ರವರಿ 19 ರಂದು ಧಾರ್ಮಿಕ ದತ್ತಿ ಆಯುಕ್ತರು ಆದೇಶ ಹೊರಡಿಸಿದ್ದರು.
Related Articles
Thank you for your comment. It is awaiting moderation.
Comments (0)