ಕೆಎಸ್ಪಿಸಿಬಿ ಅಧ್ಯಕ್ಷ ಸ್ಥಾನಕ್ಕೆ ಶಾಸಕ ನರೇಂದ್ರಸ್ವಾಮಿ ನೇಮಕ ಪ್ರಶ್ನಿಸಿ ಮತ್ತೊಂದು ಪಿಐಎಲ್; ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
- by Jagan Ramesh
- August 5, 2025
- 106 Views

ಬೆಂಗಳೂರು: ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್ಪಿಸಿಬಿ) ಅಧ್ಯಕ್ಷರನ್ನಾಗಿ ನೇಮಕ ಮಾಡಿ, ಸಂಪುಟ ದರ್ಜೆ ಸ್ಥಾನಮಾನ ನೀಡಿ ಲಾಭದಾಯಕ ಹುದ್ದೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಆಕ್ಷೇಪಿಸಿ ಹೈಕೋರ್ಟ್ಗೆ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ಬೆಂಗಳೂರಿನ ವಕೀಲ ಎಂ. ಶ್ರೇಯಸ್ ಸಲ್ಲಿಸಿರುವ ಅರ್ಜಿಯು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ನಿಗದಿಯಾಗಿತ್ತು.
ಅರ್ಜಿದಾರರ ಪರ ವಕೀಲರು ಹಾಜರಾಗಿ, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಬೇರೆ ಅರ್ಜಿಗಳ ವಿಚಾರಣೆ ಆಗಸ್ಟ್ 13ರಂದು ವಿಚಾರಣೆಗೆ ಬರಲಿದೆ. ಆದ್ದರಿಂದ, ಈ ಅರ್ಜಿಯಲ್ಲಿ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ಇತರ ಅರ್ಜಿಗಳೊಂದಿಗೇ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಸಮ್ಮತಿಸಿದ ನ್ಯಾಯಪೀಠ, ಅರ್ಜಿಯಲ್ಲಿ ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಶಾಸಕ ಪಿ.ಎಂ ನರೇಂದ್ರಸ್ವಾಮಿ, ಕೆಎಸ್ಪಿಸಿಬಿ ಸದಸ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
ಅರ್ಜಿದಾರರ ಮನವಿ ಏನು?
ರಾಜ್ಯ ಸರ್ಕಾರದ ಶಿಫಾರಸು ಹಾಗೂ ರಾಜ್ಯಪಾಲರ ಆದೇಶದಂತೆ ಹಾಲಿ ಶಾಸಕರಾಗಿರುವ ಪಿ.ಎಂ. ನರೇಂದ್ರಸ್ವಾಮಿ ಅವರನ್ನು 2025ರ ಫೆಬ್ರವರಿ 5ರಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಅರಣ್ಯ ಇಲಾಖೆ ಅಧಿಸೂಚನೆ ಹೊರಡಿಸಿತ್ತು. ಮುಂದುವರಿದು, ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಏಪ್ರಿಲ್ 29ರಂದು ಆದೇಶ ಹೊರಡಿಸಿತ್ತು. ಈ ಮೂಲಕ ನರೇಂದ್ರಸ್ವಾಮಿ ಅವರಿಗೆ ಲಾಭದಾಯಕ ಹುದ್ದೆ ನೀಡಿದಂತಾಗಿದೆ. ಅಲ್ಲದೇ ಈ ನೇಮಕಾತಿಯು ನಿಯಮಗಳಿಗೆ ವಿರುದ್ಧವಾಗಿದೆ. ಆದ್ದರಿಂದ, ಫೆಬ್ರವರಿ 5ರಂದು ಹೊರಡಿಸಿರುವ ನೇಮಕಾತಿ ಆದೇಶ ರದ್ದುಪಡಿಸಬೇಕು. ಅಲ್ಲಿಯವರೆಗೆ ಅಧ್ಯಕ್ಷ ಹುದ್ದೆಯ ಕರ್ತವ್ಯ ನಿರ್ವಹಿಸದಂತೆ ನರೇಂದ್ರಸ್ವಾಮಿ ಅವರಿಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
Related Articles
Thank you for your comment. It is awaiting moderation.
Comments (0)