- ಟ್ರಯಲ್ ಕೋರ್ಟ್
- ಪ್ರಮುಖ ಸಮಾಚಾರಗಳು
- Like this post: 15
ಪ್ರಜ್ವಲ್ ಪ್ರಕರಣದಲ್ಲಿ ಸಮಾಜವನ್ನೇ ಮುಖ್ಯ ಸಂತ್ರಸ್ತೆಯಂತೆ ಪರಿಗಣಿಸಬೇಕಿದೆ; ಇಲ್ಲಿದೆ ಕೋರ್ಟ್ ತೀರ್ಪಿನ ಹೈಲೈಟ್ಸ್
- by Jagan Ramesh
- August 2, 2025
- 903 Views

ಬೆಂಗಳೂರು: ತೋಟದ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ದೋಷಿ ಎಂದು ತೀರ್ಮಾನಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಅಪರಾಧಿಗೆ ಜೀವಿತಾವಧಿವರೆಗೆ ಕಾರಾಗೃಹ ಶಿಕ್ಷೆಯನ್ನೂ ವಿಧಿಸಿದೆ.
ಮಹಿಳೆ ಮೇಲೆ ಪದೇಪದೆ ಅತ್ಯಾಚಾರವೆಸಗಿರುವ ಈ ಪ್ರಕರಣದಲ್ಲಿ ಇಡೀ ಸಮಾಜವನ್ನೇ ಸಂತ್ರಸ್ತೆಯಂತೆ ನೋಡಬೇಕಾಗಿದೆ ಎಂದು ಮಾರ್ಮಿಕವಾಗಿ ನುಡಿದಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು, 480 ಪುಟಗಳ ಸುದೀರ್ಘ ತೀರ್ಪಿನಲ್ಲಿ ಅಪರಾಧಿ ಎಸಗಿರುವ ಕೃತ್ಯ, ಸಂತ್ರಸ್ತೆ ಅನುಭವಿಸಿರುವ ಯಾತನೆ, ಸಮಾಜದ ಮೇಲಾಗುವ ಪರಿಣಾಮ, ಪ್ರಕರಣದ ತನಿಖೆ, ನ್ಯಾಯಾಲಯಗಳ ಜವಾಬ್ದಾರಿ ಸೇರಿ ಅನೇಕ ವಿಚಾರಗಳನ್ನು ಉಲ್ಲೇಖಿಸಿದ್ದಾರೆ.
ತೀರ್ಪಿನ ಪ್ರಮುಖಾಂಶಗಳು:
• “ಎಲ್ಲಿ ಮಹಿಳೆಯರನ್ನು ಪೂಜಿಸುತ್ತಾರೋ, ಅಲ್ಲಿ ದೇವರು ನೆಲೆಸಿರುತ್ತಾರೆ” ಎನ್ನುವುದು ನಮ್ಮ ಸಮಾಜದಲ್ಲಿ ಅನಾದಿಕಾಲದಿಂದಲೂ ಇರುವ ನಂಬಿಕೆಯಾಗಿದೆ. ಪ್ರಕರಣದಲ್ಲಿ ಆರೋಪಿಯಾಗಿರುವವರು ಸಂಸದರಾಗಿದ್ದ ಸಂದರ್ಭದಲ್ಲಿ ಎಸಗಿರುವ ಕೃತ್ಯವನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಆರೋಪಿಯ ಕೃತ್ಯವನ್ನು ಹಾಲಿ ಪ್ರಕರಣದಲ್ಲಿ ವಿಸ್ತೃತ ನೆಲೆಯಲ್ಲಿ ಸಮಾಜವನ್ನೇ ಮುಖ್ಯ ಸಂತ್ರಸ್ತೆ ಎಂದು ಪರಿಗಣಿಸಬೇಕಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
• “ಯಾರು ಧರ್ಮವನ್ನು ರಕ್ಷಿಸುತ್ತಾರೋ, ಅವರನ್ನು ಧರ್ಮ ರಕ್ಷಿಸುತ್ತದೆ. ಯಾರು ಧರ್ಮವನ್ನು ನಾಶಪಡಿಸಲು ಯತ್ನಿಸುತ್ತಾರೋ ಅವರೇ ನಾಶವಾಗುತ್ತಾರೆ. ಆದ್ದರಿಂದ, ನಾವು ಧರ್ಮವನ್ನು ನಾಶಪಡಿಸಬಾರದು. ಆಗ ನಾವೂ ನಾಶ ಹೊಂದುವುದಿಲ್ಲ” ಎಂದು ನಿವೃತ್ತ ನ್ಯಾಯಮೂರ್ತಿ ದಿವಂಗತ ಡಾ. ಎಂ. ರಾಮ ಜೋಯಿಸ್ ಅವರು ರಾಜನೀತಿಯಲ್ಲಿ ಹೇಳಿರುವ ವಿಚಾರಗಳನ್ನು ನ್ಯಾಯಾಲಯ ತೀರ್ಪಿನಲ್ಲಿ ಪ್ರಸ್ತಾಪಿಸಿದೆ.
• ಅಧಿಕಾರದಿಂದ ಸಂತ್ರಸ್ತೆಯನ್ನು ಹಿಡಿತದಲ್ಲಿಟ್ಟುಕೊಂಡು ಎಸಗಿರುವ ಈ ಕೃತ್ಯದಿಂದ ಜನಪ್ರತಿನಿಧಿಯಾಗಿದ್ದವರ ಮೇಲೆ ಸಮಾಜವಿಟ್ಟಿದ್ದ ನಂಬಿಕೆಗೆ ಅಪಮಾನ ಮಾಡಿದಂತಾಗಿದೆ. ಘಟನೆ ಇಡೀ ಸಮಾಜವನ್ನು ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡಿದೆ. ಅಪರಾಧಿಗೆ ಕರುಣೆ ತೋರಿದಲ್ಲಿ ಮಹಿಳೆಯರ ಮೇಲಿನ ಭಯಾನಕ ಅಪರಾಧಗಳನ್ನು ಉದಾರವಾಗಿ ಪರಿಗಣಿಸಿ ತೀರ್ಮಾನಕ್ಕೆ ಬಂದಿರುವ ಸಂದೇಶ ರವಾನೆಯಾಗಲಿದೆ. ಬೃಹದಾರಣ್ಯಕ ಉಪನಿಷತ್‌ನಲ್ಲಿ ಉಲ್ಲೇಖಿಸಿರುವಂತೆ, “ಕಾನೂನು (ಧರ್ಮ) ರಾಜರ ರಾಜ. ಯಾರೂ ಕಾನೂನಿಗಿಂತ (ಧರ್ಮ) ಮಿಗಿಲಲ್ಲ; ರಾಜನ ಶಕ್ತಿಯ ನೆರವು ಹೊಂದಿರುವ ಕಾನೂನು (ಧರ್ಮ) ಬಲಿಷ್ಠರಿಂದ ಬಡವರನ್ನು ರಕ್ಷಿಸುತ್ತದೆ” ಎಂದು ತೀರ್ಪಿನಲ್ಲಿ ಹೇಳಿದೆ.
• ನಾಗರಿಕ ಸಮಾಜದಲ್ಲಿ ಯಾವುದೇ ರೀತಿಯ ಅತ್ಯಾಚಾರವು ಹೇಸಿಗೆಯಾಗಿದ್ದು, ಇದು ಸಂತ್ರಸ್ತೆಗೆ ಆಕೆಯ ಸಾಮಾನ್ಯ ಜೀವನವನ್ನು ನಿರಾಕರಿಸುತ್ತದೆ. ಹಾಲಿ ಪ್ರಕರಣದಲ್ಲಿ ದೇಶಾದ್ಯಂತ ಅಶ್ಲೀಲ ವಿಡಿಯೊಗಳು ಹಂಚಿಕೆಯಾಗಿದ್ದು, ಹಲವರು ಅವುಗಳನ್ನು ವೀಕ್ಷಿಸಿದ್ದಾರೆ. ಈ ದುಷ್ಕೃತ್ಯದಿಂದ ಸಂತ್ರಸ್ತೆ ಅಪಾರ ಯಾತನೆ ಅನುಭವಿಸುವಂತಾಗಿದೆ.
• ವಂಶವಾಹಿ (ಡಿಎನ್‌ಎ) ವಿಶ್ಲೇಷಣಾ ವರದಿ ರೂಪದಲ್ಲಿ ವಿಜ್ಞಾನ ತಜ್ಞರು ಸೂಕ್ತವಾದ ಸಾಕ್ಷಿಗಳನ್ನು ನ್ಯಾಯಾಲಯದ ಮುಂದಿಟ್ಟಿದ್ದು, ಸಂತ್ರಸ್ತೆಯ ಸೀರೆ ಮತ್ತು ಇತರ ಉಡುಪುಗಳ ಮೇಲೆ ದೊರೆತಿರುವ ಕಲೆಗಳು ಪ್ರಜ್ವಲ್ ರೇವಣ್ಣ ಅವರ ವಂಶವಾಹಿಗೆ ಹೊಂದಿಕೆಯಾಗಿವೆ. ದೇಶಾದ್ಯಂತ ಹಂಚಿಕೆಯಾಗಿರುವ ಡಿಜಿಟಲ್ ರೂಪದಲ್ಲಿರುವ ಅಶ್ಲೀಲ ವಿಡಿಯೊಗಳನ್ನು ತಿರುಚಲಾಗಿಲ್ಲ. ವಿಡಿಯೊದಲ್ಲಿರುವ ಮಹಿಳೆ ಮತ್ತು ಪುರುಷನ ಧ್ವನಿಯು ಪ್ರಜ್ವಲ್ ಮತ್ತು ಸಂತ್ರಸ್ತೆ ಧ್ವನಿಗೆ ಹೊಂದಿಕೆಯಾಗಿರುವುದರಿಂದ ಪ್ರಾಸಿಕ್ಯೂಷನ್ ಸಂಶಯಾತೀತವಾಗಿ ಅಪರಾಧಿಯ ಕೃತ್ಯವನ್ನು ಸಾಬೀತುಪಡಿಸಿದೆ.
• ಬಲವಂತವಾಗಿ ಸಂಭೋಗ ನಡೆಸುವಾಗ ಪ್ರಜ್ವಲ್ ರೇವಣ್ಣ ಮಾಡಿರುವ ವಿಡಿಯೊ ಸಹ ಅಸಲಿ ಎಂಬುದನ್ನು ಪ್ರಾಸಿಕ್ಯೂಷನ್ ಯಾವುದೇ ಅನುಮಾನವಿಲ್ಲದಂತೆ ಸಾಬೀತುಪಡಿಸಿದೆ. ಪ್ರಾಸಿಕ್ಯೂಷನ್ ಸಾಕ್ಷಿ ಕಾರ್ತಿಕ್ (ಪ್ರಜ್ವಲ್ ಮಾಜಿ ಕಾರು ಚಾಲಕ) ವಿಡಿಯೊಗಳನ್ನ ತಮ್ಮ ವಿವೊ ಮೊಬೈಲ್‌ಗೆ ಆನಂತರ ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ4 ಮೊಬೈಲ್‌ಗೆ ವರ್ಗಾಯಿಸಿದ್ದಾರೆ ಎಂಬುದು ದೃಢವಾಗಿದೆ.
• ಸಂತ್ರಸ್ತೆ ಮತ್ತು ಪ್ರಜ್ವಲ್ ಅವರ ಆರ್ಥಿಕ ಪರಿಸ್ಥಿತಿಯನ್ನು ನ್ಯಾಯಾಲಯ ಪರಿಗಣಿಸಿದ್ದು, ಸಂತ್ರಸ್ತೆಯು ಬಡ ದಿನಗೂಲಿ ಕಾರ್ಮಿಕರಾಗಿದ್ದಾರೆ. ಈ ದುಷ್ಕೃತ್ಯದಿಂದ ಆಕೆ ಯಾತನೆ ಅನುಭವಿಸುವಂತಾಗಿದೆ. ಇದರಿಂದ, ಆಕೆಯು ಪುರುಷ ಪ್ರಧಾನವಾದ ಸಮಾಜದಲ್ಲಿ ದಿನಗೂಲಿಗಳಿಸಿಕೊಳ್ಳುವುದೂ ಕಷ್ಟಕರವಾಗಿದೆ. ಅಪಾರ ಯಾತನೆಗೆ ಗುರಿಯಾಗಿರುವ ಆಕೆಗೆ ಇಂಥ ಸಂದರ್ಭದಲ್ಲಿ ವಿಸ್ತೃತ ನೆಲೆಯಲ್ಲಿ ಸೂಕ್ತ ಪರಿಹಾರ ಕೊಡಿಸುವುದು ನ್ಯಾಯಾಲಯದ ಕರ್ತವ್ಯವಾಗಿದೆ. ಪ್ರಜ್ವಲ್ ಆರ್ಥಿಕವಾಗಿ ಸುಭದ್ರ ಸ್ಥಿತಿಯಲ್ಲಿರುವುದರಿಂದ ಪರಿಹಾರ ನೀಡುವ ಹೊಣೆಯನ್ನು ಸರ್ಕಾರದ ಹೆಗಲ ಮೇಲೆ ಹೊರಿಸುವ ಅಗತ್ಯವಿಲ್ಲ.
• ಅಧಿಕಾರ ಅನುಭವಿಸುತ್ತಿದ್ದ ಸಂದರ್ಭದಲ್ಲಿ ಪ್ರಜ್ವಲ್ ವಿರುದ್ಧ ಆರೋಪ ಮಾಡಲಾಗಿದೆ. ಚುನಾಯಿತ ಪ್ರತಿನಿಧಿಯ ವಿರುದ್ಧದ ಆರೋಪ ಪ್ರಶ್ನೆಯು ಗಂಭೀರ ವಿಚಾರವಾಗಿದೆ. ಮಹಿಳೆಗೆ ಆಕೆಯ ಘನತೆಯು ಅತ್ಯಂತ ಮೌಲ್ಯಯುತವಾದ ಆಭರಣವಾಗಿದ್ದು, ಅದನ್ನು ಆಕೆ ಸಾಯುವವರೆಗೂ ಕಾಯುತ್ತಾಳೆ. ಪದೇಪದೇ ಸಂತ್ರಸ್ತೆಯ ಜತೆ ಬಲವಂತವಾಗಿ ಸಂಭೋಗ ನಡೆಸುವುದು ಕೊಲೆಗಿಂತಲೂ ಪಾತಕ ಕೃತ್ಯವಾಗಿದೆ. ಕೊಲೆ ನಡೆದರೆ ವ್ಯಕ್ತಿ ಒಮ್ಮೆ ಸಾಯುತ್ತಾನೆ. ಆದರೆ, ಅತ್ಯಾಚಾರದಂಥ ಲೈಂಗಿಕ ಕೃತ್ಯಗಳಿಗೆ ಸಿಲುಕುವ ಮಹಿಳೆ ಜೀವನದುದ್ದಕ್ಕೂ ನರಳುವಂತಾಗುತ್ತದೆ. ಇದರಿಂದ, ಆಕೆ ಪ್ರತಿಕ್ಷಣವೂ ಯಾತನೆ ಅನುಭವಿಸುವಂತಾಗುತ್ತದೆ.
• ಅಪರಾಧಿಯ ಕೃತ್ಯ ಸಾಮಾನ್ಯ ಮನುಷ್ಯನ ನಡುವಳಿಕೆಗೆ ಸಂಪೂರ್ಣ ವಿರುದ್ಧವಾಗಿದೆ. ಇದು ಅವರ ಮನಃಸ್ಥಿತಿಯನ್ನು ಬಿಂಬಿಸಲಿದ್ದು, ಇದು ಆಕಸ್ಮಿಕ ಹಾಗೂ ಸಾಮಾನ್ಯ ಘಟನೆಯಲ್ಲ. ಒಂದು ರೀತಿಯ ಕ್ರೂರ ಅಪರಾಧವಾಗಿದ್ದು, ಸಂತ್ರಸ್ಥೆಯನ್ನು ಪೀಡಿಸಿ ಕೃತ್ಯವೆಸಗಲಾಗಿದೆ. ಕೃತ್ಯದಿಂದ ಸಂತ್ರಸ್ಥೆಗೆ ಹಣದ ರೂಪದಲ್ಲಿ ಸರಿದೂಗಿಸಲಾಗದಂತಹ ಮಾನಸಿಕ ಯಾತನೆಯಾಗಿದೆ. ಸಮಾಜದಲ್ಲಿ ಮನೆಕೆಲಸದವರು ಮತ್ತು ಇತರ ಮಹಿಳೆಯರನ್ನು ಉಪೇಕ್ಷೆಯಿಂದ ಕಂಡು, ಅವರ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ ಅವರ ಮೇಲೆ ಲೈಂಗಿಕ ಅಪರಾಧ ಎಸಗುವುದು ದುಷ್ಕೃತ್ಯವಾಗಿದ್ದು, ಅದನ್ನು ಅಷ್ಟು ಸುಲಭವಾಗಿ ತಳ್ಳಿಹಾಕಲಾಗದು ಮತ್ತು ಅಂಥ ನಡತೆಯನ್ನು ಸಾಮಾನ್ಯ ಎಂದೂ ಪರಿಗಣಿಸಲಾಗದು.
• ಅಧಿಕಾರದಲ್ಲಿರುವವರು ಮತ್ತು ಬಲಾಢ್ಯರು ಕಾನೂನು ಮತ್ತು ನಿಯಮಗಳನ್ನು ಉಲ್ಲಂಘಿಸಿರುವುದಕ್ಕೆ ಉದಾಹರಣೆಯಾಗುವಂಥ ಪ್ರಕರಣ ಇದಾಗಿದ್ದು, ತನ್ನ ಕುಟುಂಬ ಸದಸ್ಯರು ಮತ್ತು ತಾತನನ್ನು (ಎಚ್.ಡಿ. ದೇವೇಗೌಡ) ನೋಡಿಕೊಳ್ಳಲು ಪ್ರಜ್ವಲ್‌ಗೆ ವಿನಾಯಿತಿ ನೀಡಬೇಕು ಎಂಬುದನ್ನು ಒಪ್ಪಲಾಗದು. ಪ್ರಜ್ವಲ್ ತಾತನವರು ರಾಜ್ಯಸಭಾ ಸದಸ್ಯರಾಗಿದ್ದು, ಅವರ ತಂದೆ ಎಚ್.ಡಿ. ರೇವಣ್ಣ ವಿಧಾನ ಸಭೆಯ ಸದಸ್ಯರಾಗಿದ್ದಾರೆ. ಇಲ್ಲಿ ನ್ಯಾಯಾಲಯವು ಸಂತ್ರಸ್ತೆ ಅನುಭವಿಸುತ್ತಿರುವ ಯಾತನೆ ಮತ್ತು ಭೀಕರತೆಯನ್ನು ಪರಿಗಣಿಸಬೇಕಿದ್ದು, ಸಮಾನತೆ ತತ್ವವನ್ನು ನ್ಯಾಯಾಲಯ ಎತ್ತಿ ಹಿಡಿಯಬೇಕಿದೆ.
• ಸಮಾಜದ ಕೆಲ ಘನತೆಯುತ ಮಹಿಳೆಯರು ಪ್ರಜ್ವಲ್ ಜತೆಗಿರುವ ಅಶ್ಲೀಲ ವಿಡಿಯೊಗಳು ವೈರಲ್ ಆಗಿದ್ದು, ಪ್ರಾಸಿಕ್ಯೂಷನ್‌ಗೆ ಅಸಾಮಾನ್ಯ ಕೆಲಸ ಮುಂದಿತ್ತು. ವಿಧಿ ವಿಜ್ಞಾನ ತಜ್ಞರ ನೆರವಿನಿಂದ ಡಿಜಿಟಲ್ ಸಾಕ್ಷಿಯ ಸಂಗ್ರಹ ಮತ್ತು ವಿಶ್ಲೇಷಣೆಯನ್ನು ಸಮರ್ಥವಾಗಿ ಮಾಡಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಕಾರ್ಯ ಶ್ಲಾಘನೀಯ. ಪ್ರಕರಣದ ತನಿಖೆಯಲ್ಲಿ ಎಸ್‌ಐಟಿಯು ಆಧುನಿಕ ತಂತ್ರಜ್ಞಾನ ವಿಧಾನವನ್ನು ಅಳವಡಿಸಿಕೊಂಡಿದೆ. ಎಸ್‌ಐಟಿಯು ವೈಜ್ಞಾನಿಕ ವಿಧಾನದ ಮೂಲಕ ತನಿಖೆ ನಡೆಸಿದ ರಾಜ್ಯದ ಮೊದಲ ಪ್ರಕರಣ ಇದೇ ಎನಿಸುತ್ತದೆ.
• ಅತ್ಯಾಚಾರ ಅತ್ಯಂತ ಹೇಯ ಕೃತ್ಯವಾಗಿದ್ದು, ಸಂತ್ರಸ್ಥರಾದವರು ಸಂಪೂರ್ಣ ಜೀವನವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಜನ ಪ್ರತಿನಿಧಿ ಎಂದರೆ ಸಮಾಜದ ಪರಿವರ್ತಕ ಎಂಬ ದೃಷ್ಠಿಯಲ್ಲಿ ಜನತೆ ನೋಡುತ್ತದೆ. ದೇಶದ ಜನರ ಕಲ್ಯಾಣಕ್ಕಾಗಿ ಕಾನೂನುಗಳನ್ನು ರೂಪಿಸುವ ಅಧಿಕಾರದಲ್ಲಿರುವ ವ್ಯಕ್ತಿಯೇ ಈ ಕೃತ್ಯ ಎಸಗಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು.
• ನ್ಯಾಯಾಲಯವು ಅಪರಾಧಿಯ ವಿರುದ್ಧವಾಗಿಲ್ಲ. ಬದಲಿಗೆ ಆತ ಎಸಗಿರುವ ಕ್ರಿಮಿನಲ್ ಕೃತ್ಯದ ವಿರುದ್ಧ ಮಾತ್ರವಿದೆ. ಶಿಕ್ಷೆ ನಿಗದಿಪಡಿಸುವಾಗ ನ್ಯಾಯಾಲಯವು ಅಪರಾಧ ಎಸಗಿರುವ ವಿಧಾನವನ್ನು ಪರಿಗಣಿಸಬೇಕಿದೆ. ಶಿಕ್ಷೆ ಪ್ರಮಾಣ ನಿಗದಿಪಡಿಸುವುದಕ್ಕೆ ನಿರ್ದಿಷ್ಟವಾದ ಕಾಯ್ದೆ ಇಲ್ಲ. ಪ್ರಕರಣದಲ್ಲಿನ ಕಾನೂನಿನ ಮಾನದಂಡಗಳನ್ನು ಆಧರಿಸಿ ಶಿಕ್ಷೆ ವಿಧಿಸಲಾಗಿದೆ.
• ಅನುಕಂಪ ತೋರುವಂತೆ ಅಪರಾಧಿ ಪ್ರಜ್ವಲ್ ಕೋರಿಕೆಯನ್ನು ಒಪ್ಪುಕೊಳ್ಳುವುದು ಸರಿಯಲ್ಲ. ತಜ್ಞರ ನೆರವಿನೊಂದಿಗೆ ಎಸ್‌ಐಟಿ ತನಿಖೆ ನಡೆಸಿದ್ದು, ಆರೋಪಗಳು ಮತ್ತು ದಾಖಲೆಗಳು ದೊರೆತಿರುವುದನ್ನು ಪರಿಗಣಿಸಿದರೆ ಇದು ಬೇರೆಯದೇ ರೀತಿಯ ಪ್ರಕರಣವಾಗಿದೆ. ಅಪರಾಧಿಗೆ ಗರಿಷ್ಟ ಪ್ರಮಾಣದ ಶಿಕ್ಷೆ ಏಕೆ ವಿಧಿಸಬಾರದು ಎಂಬುದಕ್ಕೆ ಸಕಾರಣಗಳಿಲ್ಲ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದ್ದಾರೆ.
Related Articles
Thank you for your comment. It is awaiting moderation.
Comments (0)