- ಟ್ರಯಲ್ ಕೋರ್ಟ್
- ಪ್ರಮುಖ ಸಮಾಚಾರಗಳು
- Like this post: 16
ಮನೆ ಕೆಲಸದಾಕೆ ಮೇಲಿನ ಅತ್ಯಾಚಾರ ಪ್ರಕರಣ; ಅಪರಾಧಿ ಪ್ರಜ್ವಲ್ ರೇವಣ್ಣಗೆ ಜೀವನಪರ್ಯಂತ ಸೆರೆವಾಸ
- by Jagan Ramesh
- August 2, 2025
- 1224 Views

ಬೆಂಗಳೂರು: ತೋಟದ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣದ ಅಪರಾಧಿ ಪ್ರಜ್ವಲ್ ರೇವಣ್ಣಗೆ ಜೀವನಪರ್ಯಂತ ಸೆರೆವಾಸ ಹಾಗೂ ಒಟ್ಟು 11.60 ಲಕ್ಷ ರೂ. ದಂಡ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ.
ಮನೆಗೆಲಸದ ಮಹಿಳೆಯ ಮೇಲೆ ಪದೇಪದೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಶುಕ್ರವಾರಷ್ಟೇ ಪ್ರಜ್ವಲ್ ರೇವಣ್ಣ ಅವರನ್ನು ಅಪರಾಧಿ ಎಂದು ತೀರ್ಮಾನಿಸಿದ್ದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರಿದ್ದ ನ್ಯಾಯಪೀಠ, ಶನಿವಾರ ಅಪರಾಧಿಗೆ ಶಿಕ್ಷೆಯ ಪ್ರಮಾಣ ಪ್ರಕಟಿಸಿತು.
ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 376(2)(ಕೆ)-ಪ್ರಬಲ ಸ್ಥಾನದಲ್ಲಿದ್ದುಕೊಂಡು ಮಹಿಳೆ ಮೇಲೆ ಅತ್ಯಾಚಾರ) ಅಪರಾಧಕ್ಕೆ ಜೀವಾವಧಿ ಶಿಕ್ಷೆ ಹಾಗೂ ಹಾಗೂ 5 ಲಕ್ಷ ರೂ. ದಂಡ, 376(2)(ಎನ್)-(ಮಹಿಳೆಯ ಮೇಲೆ ಪದೇಪದೆ ಅತ್ಯಾಚಾರ) ಅಪರಾಧಕ್ಕೆ ಜೀವನ ಪರ್ಯಂತ ಸೆರೆವಾಸ ಹಾಗೂ 5 ಲಕ್ಷ ರೂ. ದಂಡದ ಗರಿಷ್ಠ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ.
ಇತರ ಅಪರಾಧಗಳು ಮತ್ತು ಶಿಕ್ಷೆಯ ಪ್ರಮಾಣ:
• ಸೆಕ್ಷನ್ 354 (ಎ)-(ಲೈಂಗಿಕ ದೌರ್ಜನ್ಯ) ಅಡಿಯ ಅಪರಾಧಕ್ಕೆ 3 ವರ್ಷ ಜೈಲು, 25 ಸಾವಿರ ರೂ. ದಂಡ
• ಸೆಕ್ಷನ್ 354 (ಬಿ)-(ವಿವಸ್ತ್ರಗೊಳಿಸುವ ಉದ್ದೇಶದಿಂದ ಮಹಿಳೆಯ ಮೇಲೆ ಹಲ್ಲೆ ಅಥವಾ ಬಲಪ್ರಯೋಗ) ಅಡಿಯ ಅಪರಾಧಕ್ಕೆ 7 ವರ್ಷ ಕಾರಾಗೃಹ ಶಿಕ್ಷೆ, 50 ಸಾವಿರ ರೂ. ದಂಡ
• ಸೆಕ್ಷನ್ 354 (ಸಿ)-(ಮಹಿಳೆಯ ಖಾಸಗಿ ದೃಶ್ಯಗಳನ್ನು ನೋಡುವುದು ಅಥವಾ ಸೆರೆಹಿಡಿಯುವುದು) ಅಪರಾಧಕ್ಕೆ 3 ವರ್ಷ ಜೈಲು, 25 ಸಾವಿರ ರೂ. ದಂಡ
• ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಅಡಿಯ ಅಪರಾಧಕ್ಕೆ 2 ವರ್ಷ ಜೈಲು ಶಿಕ್ಷೆ, 10 ಸಾವಿರ ರೂ. ದಂಡ
• ಸೆಕ್ಷನ್ 201 (ಅಪರಾಧದ ಸಾಕ್ಷ್ಯ ನಾಶ) ಅಡಿಯ ಅಪರಾಧಕ್ಕೆ 3 ವರ್ಷ ಸೆರೆವಾಸ, 25 ಸಾವಿರ ರೂ. ದಂಡ
• ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ ಸೆಕ್ಷನ್ 66(ಇ)-(ವ್ಯಕ್ತಿಯ ಖಾಸಗಿತನ ಉಲ್ಲಂಘಿಸಿ ಚಿತ್ರ ಸೆರೆ ಹಿಡಿಯುವುದು ಹಾಗೂ ಹಂಚುವುದು) ಅಡಿಯ ಅಪರಾಧಕ್ಕೆ 3 ವರ್ಷ ಜೈಲು, 25 ಸಾವಿರ ರೂ. ದಂಡ
ಒಟ್ಟು ದಂಡದ ಮೊತ್ತ 11.60 ಲಕ್ಷ ರೂ. ಗಳಲ್ಲಿ 11.25 ಲಕ್ಷ ರೂ. ಗಳನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡಲು ಆದೇಶಿಸಿರುವ ನ್ಯಾಯಾಲಯ, ಎಲ್ಲ ಶಿಕ್ಷೆಗಳೂ ಏಕಕಾಲಕ್ಕೆ ಜಾರಿಯಾಗಲಿವೆ ಎಂದು ಸ್ಪಷ್ಟಪಡಿಸಿದೆ.
ಮಧ್ಯಾಹ್ನಕ್ಕೆ ಆದೇಶ ಕಾಯ್ದರಿಸಿದ್ದ ಕೋರ್ಟ್:
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ದೋಷಿ ಎಂದು ತೀರ್ಪು ನೀಡಿದ್ದ ವಿಶೇಷ ನ್ಯಾಯಾಲಯ, ಇಂದು ಬೆಳಗ್ಗೆ ಶಿಕ್ಷೆ ಪ್ರಮಾಣ ನಿಗದಿಪಡಿಸುವ ಕುರಿತು ಪ್ರಾಸಿಕ್ಯೂಷನ್ ಹಾಗೂ ಪ್ರಜ್ವಲ್ ಪರ ವಕೀಲರ ವಾದ-ಪ್ರತಿವಾದ ಆಲಿಸಿ, ಮಧ್ಯಾಹ್ನಕ್ಕೆ ಆದೇಶ ಕಾಯ್ದಿರಿಸಿತ್ತು.
ಮಧ್ಯಾಹ್ನ ನ್ಯಾಯಾಧೀಶರ ಕೊಠಡಿಯಲ್ಲಿ ಆದೇಶ ಬರೆಸುವ ಪ್ರಕ್ರಿಯೆ ನಡೆಯುತ್ತಿದ್ದರೆ, ಇತ್ತ ಪ್ರಜ್ವಲ್ ರೇವಣ್ಣ ಅವರಿಗೆ ಯಾವ ಶಿಕ್ಷೆಯಾಗಲಿದೆ ಎಂಬ ಕುತೂಹಲದಿಂದ ಕೋರ್ಟ್ ಹಾಲ್ನಲ್ಲಿ ವಕೀಲರು ಕಿಕ್ಕಿರಿದು ಸೇರಿದ್ದರು.
ಸಂಜೆ 4 ಗಂಟೆ ಸುಮಾರಿಗೆ ನ್ಯಾಯಾಧೀಶರು ಕೋರ್ಟ್ ಹಾಲ್ ಪ್ರವೇಶಿಸಿದರು. ನ್ಯಾಯಾಲಯದಲ್ಲಿ ಹಾಜರಿದ್ದ ಪ್ರಜ್ವಲ್ ರೇವಣ್ಣ ಕೈ ಜೋಡಿಸಿ ನಿಂತಿದ್ದರು. ತೆರೆದ ನ್ಯಾಯಾಲಯದಲ್ಲಿ ನೂರಾರು ಪುಟಗಳ ಆದೇಶದ ಪ್ರತಿಗೆ ಸಹಿ ಹಾಕಿದ ನ್ಯಾಯಾಧೀಶರು ಬಳಿಕ ಆದೇಶದ ಸಾರಾಂಶ ಓದಿದರು. ವಿಸ್ತೃತ ಆದೇಶ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.
Related Articles
Thank you for your comment. It is awaiting moderation.
Comments (0)