ಮನೆಗೆಲಸದಾಕೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ; ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತೀರ್ಪು

ಬೆಂಗಳೂರು: ತೋಟದ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ದೋಷಿ ಎಂದು ತೀರ್ಮಾನಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಶನಿವಾರ ಪ್ರಕಟಿಸಲಿದೆ. ಇದರಿಂದ, ಕಳೆದ 14 ತಿಂಗಳಿನಿಂದ ನ್ಯಾಯಾಂಗ ಬಂಧನದಲ್ಲಿರುವ ಪ್ರಜ್ವಲ್, ಮತ್ತೆ ಜೈಲಿನಲ್ಲಿ ದಿನ ಕಳೆಯುವಂತಾಗಿದೆ.

ಪ್ರಕರಣದ ಸಂಬಂಧ ಪ್ರಜ್ವಲ್‌ ಪರ ವಕೀಲರು ಮತ್ತು ಸಿಐಡಿಯ ಎಸ್‌ಐಟಿ ಪೊಲೀಸರ ಪರ ಸರ್ಕಾರಿ ಅಭಿಯೋಜಕರ ವಾದ-ಪ್ರತಿವಾದ ಆಲಿಸಿ ಜುಲೈ 18ರಂದು ಕಾಯ್ದಿರಿಸಿದ್ದ ಅಂತಿಮ ತೀರ್ಪನ್ನು ಶುಕ್ರವಾರ ಪ್ರಕಟಿಸಿರುವ ಜನಪ್ರತಿನಿಧಿಗಳ ವಿಶೇಷ‌ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ್ ಭಟ್ ಅವರಿದ್ದ ಪೀಠ, ಪ್ರಜ್ವಲ್ ಅವರನ್ನು ದೋಷಿ ಎಂದು ಘೋಷಿಸಿದೆ. ಶಿಕ್ಷೆಯ ಪ್ರಮಾಣವನ್ನು ಶನಿವಾರ ಪ್ರಕಟಿಸುವುದಾಗಿ ನ್ಯಾಯಾಲಯ ತಿಳಿಸಿದೆ.

ತೀರ್ಪು ಪ್ರಕಟಿಸುವ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ತೀರ್ಪು ಪ್ರಕಟಗೊಳ್ಳುತ್ತಿದ್ದಂತೆ ಪ್ರಜ್ವಲ್ ತಲೆ ತಗ್ಗಿಸಿ, ಕಣ್ಣೀರು ಹಾಕಿದರು.

ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿರುವ ವಿಧಾನ ಪರಿಷತ್‌ ಸದಸ್ಯ ಸೂರಜ್‌ ರೇವಣ್ಣಗೆ ಸೇರಿದ ಗನ್ನಿಗಡ ತೋಟದ ಮನೆಯಲ್ಲಿನ ಕೆಲಸ ಮಾಡುತ್ತಿದ್ದ ಮಹಿಳೆ ನೀಡಿದ್ದ ದೂರಿನ ಅನ್ವಯ ಬೆಂಗಳೂರಿನ ಸೈಬರ್‌ ಅಪರಾಧ ಠಾಣೆಯಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿತ್ತು.

ತೀರ್ಪು ಪ್ರಕಟಣೆ ಮುಂದೂಡಿದ್ದ ಕೋರ್ಟ್:
ಪ್ರಕರಣದ ವಿಚಾರಣೆಯನ್ನು ಜುಲೈ 18ರಂದೇ ಪೂರ್ಣಗೊಳಿಸಿದ್ದ ವಿಶೇಷ ನ್ಯಾಯಾಲಯ ಮೊದಲಿಗೆ ಜುಲೈ 30ರಂದು ತೀರ್ಪು ಪ್ರಕಟಿಸುವುದಾಗಿ ತಿಳಿಸಿತ್ತು. ಆದರೆ, ಕೆಲ ತಾಂತ್ರಿಕ ಸಾಕ್ಷ್ಯಗಳ ಕುರಿತಂತೆ ಸ್ಪಷ್ಟನೆ ಬಯಸಿದ್ದ‌ ನ್ಯಾಯಾಧೀಶರು, ಪ್ರಕರಣದಲ್ಲಿ ಗೂಗಲ್ ಮ್ಯಾಪ್ ಆಧರಿಸಿ ಮಹಜರು ಪ್ರಕ್ರಿಯೆ ನಡೆದಿದೆ. ಗೂಗಲ್ ಮ್ಯಾಪ್ ಆಧರಿಸಿ ವಾದ ಮಂಡಿಸಲಾಗಿದೆ. ಆದ್ದರಿಂದ, ಗೂಗಲ್ ಸಂಸ್ಥೆಯ ಅಧಿಕೃತ ಮಾಹಿತಿ ಇಲ್ಲದೆ ಈ ದಾಖಲೆ ಪರಿಗಣಿಸಬಹುದೇ ಎಂಬುದನ್ನು ತಿಳಿಸುವಂತೆ ಉಭಯ ಪಕ್ಷಗಾರರಿಗೆ ಜುಲೈ 30ರಂದು ಸೂಚಿಸಿದ್ದರಲ್ಲದೆ, ಆಗಸ್ಟ್‌ 1ರಂದು ತೀರ್ಪು ಪ್ರಕಟಿಸುವುದಾಗಿ ತಿಳಿಸಿದ್ದರು.

ಪ್ರಕರಣವೇನು?
ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅವರದ್ದೆನ್ನಲಾದ ಲೈಂಗಿಕ ಹಗರಣದ ಪೆನ್ ಡ್ರೈವ್‌ಗಳು ಭಾರಿ ಸದ್ದು ಮಾಡಿದ್ದವು.

ಈ ಸಂಬಂಧ ಮೈಸೂರಿನ ಕೆ.ಆರ್‌. ನಗರದ ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇರೆಗೆ ಸೈಬರ್‌ ಅಪರಾಧ ಠಾಣೆಯಲ್ಲಿ ಪ್ರಜ್ವಲ್‌ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ಗಳಾದ 376(2)(ಎನ್‌)-(ಒಂದೇ ಮಹಿಳೆಯ ಮೇಲೆ ಪದೇಪದೆ ಅತ್ಯಾಚಾರ), 376(2)(ಕೆ)-(ಮಹಿಳೆಯ ಮೇಲೆ ನಿಯಂತ್ರಣ ಅಥವಾ ಪ್ರಾಬಲ್ಯದಿಂದ ಅತ್ಯಾಚಾರ), 506-(ಕ್ರಿಮಿನಲ್ ಬೆದರಿಕೆ), 354(ಎ)-(ಲೈಂಗಿಕ ದೌರ್ಜನ್ಯ), 354(ಬಿ)-(ವಿವಸ್ತ್ರಗೊಳಿಸುವ ಉದ್ದೇಶದಿಂದ ಮಹಿಳೆಯ ಮೇಲೆ ಹಲ್ಲೆ ಅಥವಾ ಬಲಪ್ರಯೋಗ), 354(ಸಿ)-(ಮಹಿಳೆಯ ಖಾಸಗಿ ದೃಶ್ಯಗಳನ್ನು ನೋಡುವುದು ಅಥವಾ ಸೆರೆಹಿಡಿಯುವುದು) ಹಾಗೂ ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ ಸೆಕ್ಷನ್‌ 66ಇ (ವ್ಯಕ್ತಿಯ ಖಾಸಗಿತನ ಉಲ್ಲಂಘಿಸಿ ಚಿತ್ರ ಸೆರೆ ಹಿಡಿಯುವುದು ಹಾಗೂ ಹಂಚುವುದು) ಅಡಿ ಪ್ರಕರಣ ದಾಖಲಿಸಲಾಗಿತ್ತು.

ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಿದ ಬಳಿಕ ವಿದೇಶಕ್ಕೆ ತೆರಳಿದ್ದ ಪ್ರಜ್ವಲ್ ರೇವಣ್ಣ ಅವರನ್ನು ಭಾರತಕ್ಕೆ ಹಿಂದಿರುಗುತ್ತಿದ್ದಂತೆ 2024ರ ಮೇ 31ರಂದು ಎಸ್‌ಐಟಿ ಅಧಿಕಾರಿಗಳು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು. ತನಿಖೆ ನಡೆಸಿದ್ದ ಅಧಿಕಾರಿಗಳು 123 ಸಾಕ್ಷ್ಯಗಳನ್ನು ಸಂಗ್ರಹಿಸಿ, ಅಂದಾಜು 2 ಸಾವಿರ ಪುಟಗಳ ಆರೋಪ ಪಟ್ಟಿಯನ್ನು ಕಳೆದ ವರ್ಷಾಂತ್ಯದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಜ್ವಲ್‌ ಮೊದಲ ಬಾರಿಗೆ ಸಂತ್ರಸ್ತೆಯ ಮೇಲೆ ಹಾಸನದ ಗನ್ನಿಗಡ ತೋಟದ ಮನೆ, ಆನಂತರ ಬೆಂಗಳೂರಿನ ಬಸವನಗುಡಿಯಲ್ಲಿರುವ ರೇವಣ್ಣ ಅವರ ನಿವಾಸದಲ್ಲಿ ಬಲವಂತವಾಗಿ ಅತ್ಯಾಚಾರ ಎಸಗಿ, ಆ ಕೃತ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು ಎಂದು ಆರೋಪಿಸಿದ್ದರು.

ಪ್ರಜ್ವಲ್‌ ವಿರುದ್ದ ಒಟ್ಟು ನಾಲ್ಕು ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಒಂದು ಪ್ರಕರಣದಲ್ಲಿ ಇಂದು ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಎಲ್ಲ ನಾಲ್ಕೂ ಪ್ರಕರಣಗಳಲ್ಲಿ ಜಾಮೀನು ಕೋರಿ ಪ್ರಜ್ವಲ್ ಸಲ್ಲಿಸಿದ್ದ ಅರ್ಜಿಗಳು ವಿಚಾರಣಾ ನ್ಯಾಯಾಲಯ, ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌‌ಗಳಲ್ಲಿ ವಜಾಗೊಂಡಿವೆ. ಈ ಮಧ್ಯೆ, ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಕೋರಿ ಪ್ರಜ್ವಲ್‌ ರೇವಣ್ಣ ಸಲ್ಲಿಸಿರುವ ಅರ್ಜಿಯು ವಿಚಾರಣಾ ನ್ಯಾಯಾಲಯದಲ್ಲಿ ಬಾಕಿ ಇದೆ.

Related Articles

Comments (0)

Leave a Comment