ಅನುಕಂಪದ ಆಧಾರದ ನೇಮಕಾತಿಯಲ್ಲಿ ವಿಳಂಬ ತಡೆಗೆ ಮಾರ್ಗಸೂಚಿ ರೂಪಿಸಿದ ಹೈಕೋರ್ಟ್
- by Jagan Ramesh
- July 31, 2025
- 253 Views

ಬೆಂಗಳೂರು: ಸರ್ಕಾರಿ ನೌಕರರು ಮೃತಪಟ್ಟ ಸಂದರ್ಭದಲ್ಲಿ ಅವರ ಕುಟುಂಬದವರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವ ಪ್ರಕ್ರಿಯೆಯಲ್ಲಿ ಆಗುತ್ತಿರುವವ ವಿಳಂಬ ತಪ್ಪಿಸುವ ದೃಷ್ಟಿಯಿಂದ ಹೊಸ ಮಾರ್ಗಸೂಚಿಗಳನ್ನು ರೂಪಿಸಿರುವ ಹೈಕೋರ್ಟ್, ಅವುಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ತಹಶೀಲ್ದಾರ್ ಕಚೇರಿಯಲ್ಲಿ ಜವಾನ ಹುದ್ದೆಯಲ್ಲಿದ್ದ ವ್ಯಕ್ತಿ ಮೃತಪಟ್ಟ ಬಳಿಕ ಆತನ ಮಗನಿಗೆ ಅನುಕಂಪದ ಉದ್ಯೋಗ ನೀಡುವಂತೆ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಹೊರಡಿಸಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.
ಪ್ರಕರಣದಲ್ಲಿ ಮೃತನ ಪತ್ನಿಯ ಅರ್ಜಿಯು ಒಂದು ವರ್ಷದ ಮಿತಿಯೊಳಗೆ ಇದೆ ಮತ್ತು ಆಕೆಯ ಪುತ್ರರನ್ನು ಅನುಕಂಪದ ಉದ್ಯೋಗಕ್ಕೆ ನಾಮನಿರ್ದೇಶನ ಮಾಡಿದ್ದಾರೆ. ಕುಟುಂಬದೊಂದಿಗೆ ಮಾರ್ಗದರ್ಶನ ನೀಡಲು ಅಥವಾ ಸಂವಹನ ನಡೆಸಲು ಅಧಿಕಾರಿಗಳು ವಿಫಲರಾದ ಕಾರಣ ಇತರ ಅರ್ಹ ಅವಲಂಬಿತರಿಗೆ ನಿಯಮಗಳನ್ನು ಪಾಲಿಸಲು ನ್ಯಾಯಯುತ ಅವಕಾಶ ನಿರಾಕರಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಅಧಿಕೃತವಾಗಿ ಆರಂಭಿಕ, ಸಕಾಲಿಕ ಅರ್ಜಿಗಳನ್ನು ಸಲ್ಲಿಸಿದ ನಂತರವೂ ಅರ್ಜಿಗಳಲ್ಲಿನ ವಿಳಂಬವು ಅವಲಂಬಿತರಿಗೆ ಅನನುಕೂಲವಾಗಬಾರದು ಎಂದಿರುವ ಹೈಕೋರ್ಟ್, ಸರ್ಕಾರದ ಮೇಲ್ಮನವಿಯನ್ನು ವಜಾಗೊಳಿಸಿದೆಯಲ್ಲದೆ, ಕೆಎಟಿಯ 2017ರ ಆದೇಶದ ಪ್ರಕಾರ 8 ವಾರಗಳಲ್ಲಿ ಮೃತರ ಪುತ್ರ ಮಹಬೂಬ್ ಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.
ಅಧಿಕಾರಿಗಳು ಮಾರ್ಗದರ್ಶನ ನೀಡಬೇಕು:
ಕುಟುಂಬದವರನ್ನು ಕಳೆದುಕೊಂಡ ದುಃಖಿತರಿಗೆ ತಕ್ಷಣಕ್ಕೆ ಆರ್ಥಿಕ ಪರಿಹಾರ ಒದಗಿಸಲು ಅನುಕಂಪದ ಆಧಾರದ ಹುದ್ದೆಗಳ ಸೃಜನೆ ಮಾಡಲಾಗಿದೆ. ಈ ಹುದ್ದೆಗಳನ್ನು ಮಂಜೂರು ಮಾಡುವಲ್ಲಿ ಸರ್ಕಾರ ಹೆಚ್ಚಿನ ಜವಾಬ್ದಾರಿ ಹೊಂದಿರಲಿದೆ. ಅದರಲ್ಲಿಯೂ ವಿಶೇಷವಾಗಿ ವಿಧವೆಯರು, ಅವಿದ್ಯಾವಂತರು ಅರ್ಜಿ ಸಲ್ಲಿಸಿದಾಗ ಅಧಿಕಾರಿಗಳು ಕಟ್ಟುನಿಟ್ಟಾಗಿ, ಪಾರದರ್ಶಕವಾಗಿ ಕಾರ್ಯನಿರ್ವಹಣೆ ಮಾಡಬೇಕು. ಈ ಕಾರ್ಯದಲ್ಲಿ ವಿಫಲವಾದಲ್ಲಿ ಮೃತರ ಅವಲಂಬಿತರು ಅವಕಾಶ ವಂಚಿತರಾಗಲಿದ್ದಾರೆ ಎಂದು ಹೈಕೋರ್ಟ್ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಮಾರ್ಗಸೂಚಿಗಳು:
• ಅಧಿಕಾರಿಗಳು ಎಲ್ಲ ಅನುಕಂಪ ನೇಮಕಾತಿ ಅರ್ಜಿಗಳನ್ನು 30 ದಿನಗಳ ಒಳಗೆ ಲಿಖಿತವಾಗಿ ಸ್ವೀಕರಿಸಬೇಕು.
• ಅರ್ಜಿಗಳ ಸ್ಥಿತಿ, ಯಾವುದೇ ದಾಖಲೆಗಳ ಕೊರತೆ, ಇತರ ಅವಲಂಬಿತರ ಅರ್ಜಿ ಸಲ್ಲಿಸುವ ಹಕ್ಕುಗಳು ಮತ್ತು ಅನ್ವಯಿಸುವ ಮಿತಿ ಅವಧಿಯನ್ನು ನಿರ್ದಿಷ್ಟಪಡಿಸಬೇಕು.
• ಇಲಾಖೆಗಳು ಮೃತ ವ್ಯಕ್ತಿಯ ವಾರಸುದಾರರು ಮತ್ತು ಅನಕ್ಷರಸ್ಥ ಅರ್ಜಿದಾರರು ಸರಿಯಾದ ಅರ್ಜಿ ಸಲ್ಲಿಸುವಲ್ಲಿ ಸಕ್ರಿಯವಾಗಿ ಸಹಾಯ ಮಾಡಬೇಕು ಮತ್ತು ಅರ್ಜಿ ಪ್ರಕ್ರಿಯೆಯ ಬಗ್ಗೆ ಇತರ ಅವಲಂಬಿತರಿಗೆ ಮಾರ್ಗದರ್ಶನ ನೀಡಬೇಕು.
• ಅರ್ಜಿಗಳ ಕುರಿತ ನಿರ್ಧಾರಗಳನ್ನು ಅರ್ಜಿ ಸ್ವೀಕರಿಸಿದ 90 ದಿನಗಳೊಳಗೆ ತೆಗೆದುಕೊಳ್ಳಬೇಕು.
• ತಿರಸ್ಕರಿಸಿದ ಅರ್ಜಿಗಳಿಗೆ ಸಮಂಜಸವಾದ ಕಾರಣ ಸಹಿತ ಆದೇಶಗಳನ್ನು ಒದಗಿಸಬೇಕು.
• ಈ ಸಂಬಂಧ ಸರ್ಕಾರ ಏಕರೂಪದ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್ಒಪಿ) ಜಾರಿಗೆ ತರಬೇಕು.
• ಅನುಕಂಪದ ಆಧಾರದ ಮೇಲೆ ನೇಮಕಾತಿಗಳನ್ನು ಮಾಡುವ ಅಧಿಕಾರಿಗಳಿಗೆ ತರಬೇತಿ ನೀಡಬೇಕು.
ಪ್ರಕರಣವೇನು?
ಜೇವರ್ಗಿಯ ತಹಶೀಲ್ದಾರ್ ಕಚೇರಿಯಲ್ಲಿ ಜವಾನನಾಗಿ ಸೇವೆ ಸಲ್ಲಿಸುತ್ತಿದ್ದ ರಾಜಾ ಪಟೇಲ್ ಬಂಡಾ ಅವರು 2014ರ ಡಿಸೆಂಬರ್ 16ರಂದು ಮೃತಪಟ್ಟಿದ್ದರು. ಅವರ ಪತ್ನಿ 2015 ಜನವರಿ 2ರಂದು ಪಿಂಚಣಿ ಹಾಗೂ ತಮ್ಮ ನಾಲ್ವರು ಪುತ್ರರಲ್ಲಿ ಒಬ್ಬರಿಗೆ ಅನುಕಂಪದ ನೇಮಕಾತಿ ಕೋರಿ ಅರ್ಜಿ ಸಲ್ಲಿಸಿದ್ದರು.
ಆದರೆ, ಅಧಿಕಾರಿಗಳು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದಾದ ಬಳಿಕ ಅವರ ಮಗನಿಗೆ ವಯಸ್ಸು ಮೀರಿದೆ ಎಂಬ ಕಾರಣ ನೀಡಿ 2015ರ ಅಕ್ಟೋಬರ್ 5ರಂದು ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ನಂತರ ಅವರ ಎರಡನೇ ಮಗ ಮೆಹಬೂಬ್ 2017ರ ಫೆಬ್ರುವರಿ 23ರಂದು ತನ್ನ ತಾಯಿ ಸಲ್ಲಿಸಿದ್ದ ಮೊದಲ ಅರ್ಜಿಯನ್ನು ಉಲ್ಲೇಖಿಸಿ ಮತ್ತೊಂದು ಅರ್ಜಿ ಸಲ್ಲಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಅಧಿಕಾರಿಗಳು, ಕರ್ನಾಟಕ ನಾಗರಿಕ ಸೇವೆಗಳ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮ 1996ರ ಪ್ರಕಾರ ಸರ್ಕಾರಿ ನೌಕರ ಮೃತಪಟ್ಟ ಒಂದು ವರ್ಷದ ಒಳಗಾಗಿ ಅನುಕಂಪದ ಆಧಾರದ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬೇಕು. ಆದರೆ, ಈ ಅರ್ಜಿ ವಿಳಂಬವಾಗಿ ಸಲ್ಲಿಕೆಯಾಗಿದೆ ಎಂದು ತಿಳಿಸಿ ಅರ್ಜಿಯನ್ನು ತಿರಸ್ಕರಿಸಿತ್ತು.
ಇದನ್ನು ಪ್ರಶ್ನಿಸಿ ಮೃತರ ಪತ್ನಿ ಕಲಬುರಗಿಯ ಕೆಎಟಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಮಾನ್ಯ ಮಾಡಿದ್ದ ಕೆಎಟಿ, ಅರ್ಜಿದಾರರ ಪುತ್ರನಿಗೆ ಉದ್ಯೋಗ ನೀಡುವಂತೆ ಆದೇಶಿಸಿತ್ತು. ಆದರೆ, ಸರ್ಕಾರ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವ ಬದಲಿಗೆ ಕೆಎಟಿ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿತ್ತು.
Related Articles
Thank you for your comment. It is awaiting moderation.
Comments (0)