ಕೆ‌ಎಸ್‌ಬಿಸಿ ಅಧ್ಯಕ್ಷರ ನಾಮನಿರ್ದೇಶನ ಹಿಂಪಡೆಯಲು ಆಗ್ರಹ; ಬಿಸಿಐಗೆ ಪತ್ರ ಬರೆದ ಬೆಂಗಳೂರು ವಕೀಲರ ಸಂಘ

ಬೆಂಗಳೂರು: ಕರ್ನಾಟಕ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ಅಧ್ಯಕ್ಷರಿಗೆ ಇಂಗ್ಲಿಷ್‌ ಬರುವುದಿಲ್ಲ. ಈ ಕೂಡಲೇ ಹಾಲಿ ಅಧ್ಯಕ್ಷರನ್ನು ಬದಲಿಸಿ, ಇಂಗ್ಲಿಷ್‌ ಭಾಷಾ ಜ್ಞಾನ ಇರುವ ಬೇರೊಬ್ಬರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿ ಬೆಂಗಳೂರು ವಕೀಲರ ಸಂಘ (ಎಎಬಿ) ಭಾರತೀಯ ವಕೀಲರ ಪರಿಷತ್‌ಗೆ (ಬಿಸಿಐ) ಪತ್ರ ಬರೆದಿದೆ.

ಎಎಬಿ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಉಪಾಧ್ಯಕ್ಷ ಸಿ.ಎಸ್‌. ಗಿರೀಶ್‌ ಕುಮಾರ್, ಪ್ರಧಾನ ಕಾರ್ಯದರ್ಶಿ ಎಚ್‌.ವಿ. ಪ್ರವೀಣ್‌ ಗೌಡ ಮತ್ತು ಖಜಾಂಚಿ ಶ್ವೇತಾ ರವಿಶಂಕರ್‌ ಸಹಿ ಮಾಡಿರುವ ಅಧಿಕೃತ ಪತ್ರವನ್ನು ಬಿಸಿಐ ಅಧ್ಯಕ್ಷರಿಗೆ ರವಾನಿಸಲಾಗಿದೆ.

ಎಎಬಿ ಪತ್ರದಲ್ಲಿ ಏನಿದೆ?
ಇತ್ತೀಚೆಗೆ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ವಿಭು ಬಖ್ರು ಅವರಿಗೆ ಹೈಕೋರ್ಟ್‌ ಹಾಲ್‌ 1ರ ಪೂರ್ಣಪೀಠದ ಸಭೆಯಲ್ಲಿ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ವಾಡಿಕೆಯಿಂತೆ ಈ ಸಂದರ್ಭದಲ್ಲಿ ಸ್ವಾಗತ ಭಾಷಣ ಓದಿದ ಕೆಎಸ್‌ಬಿಸಿ ನಾಮ ನಿರ್ದೇಶಿತ ಅಧ್ಯಕ್ಷ ಎಸ್.ಎಸ್‌. ಮಿಟ್ಟಲಕೋಡ ಅವರು ತಮ್ಮ ಭಾಷಣದುದ್ದಕ್ಕೂ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಜಯಂತ್‌ ಬ್ಯಾನರ್ಜಿ ಅವರ ಹೆಸರುಗಳನ್ನೇ ತಪ್ಪು ತಪ್ಪಾಗಿ ಉಚ್ಚರಿಸಿದರು. ಅಷ್ಟೇ ಅಲ್ಲ ಸಾಕಷ್ಟು ಪದಗಳನ್ನು ತಪ್ಪುತಪ್ಪಾಗಿ ತಮ್ಮ ಛಿನ್ನ–ಭಿನ್ನ ಇಂಗ್ಲಿಷ್‌ನಲ್ಲಿ ಉಚ್ಚರಿಸುವ ಮೂಲಕ ಅಲ್ಲಿ ನೆರೆದಿದ್ದ ನ್ಯಾಯಮೂರ್ತಿಗಳು, ಹಿರಿ–ಕಿರಿಯ ವಕೀಲರು, ಅವರ ಬಂಧು ಬಳಗದವರಿಗೆ ಇನ್ನಿಲ್ಲದ ಮುಜುಗುರ ಉಂಟು ಮಾಡಿದ್ದರು ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಬಿಸಿಐ ಅಧ್ಯಕ್ಷರಿಗೆ ಎಎಬಿ ಬರೆದಿರುವ ಪತ್ರ

ಇದು ರಾಜ್ಯದ ಇಡೀ ವಕೀಲ ವೃಂದಕ್ಕೇ ಮಾಡಿರುವ ಅಪಮಾನ. ಆದ್ದರಿಂದ, ಈ ಕೂಡಲೇ ಹಾಲಿ ಅಧ್ಯಕ್ಷರನ್ನು ಬದಲಿಸಬೇಕು. ಅಲ್ಲಿಯವರೆಗೆ ಕೋರ್ಟ್‌ ಹಾಲ್‌ 1ರಲ್ಲಿ ಪರಿಷತ್‌ ಅಧ್ಯಕ್ಷರು ರಾಜ್ಯ ಪರಿಷತ್‌ ಪ್ರತಿನಿಧಿಯಾಗಿ ಮಾತನಾಡುವ ಸಂದರ್ಭದಲ್ಲಿ ಕಡೇ ಪಕ್ಷ ಮಿಟ್ಟಲಕೋಡ ಅವರ ಬದಲಿಗೆ ಬೇರೊಬ್ಬ ಪರಿಷತ್‌ ಸದಸ್ಯರು ಮಾತನಾಡುವಂತೆ, ಇಲ್ಲವೇ ಮಿಟ್ಟಲಕೋಡ ಅವರೇ ಶುದ್ಧ ಕನ್ನಡದಲ್ಲಿ ಮಾತನಾಡುವಂತೆ ನಿರ್ದೇಶಿಸಬೇಕು. ಇವರು ಶುದ್ಧ ಕನ್ನಡದಲ್ಲಿ ಮಾತನಾಡಿದ್ದನ್ನು ಇಂಗ್ಲಿಷ್‌ಗೆ ಭಾಷಾಂತರ ಮಾಡಲು ಮತ್ತೊಬ್ಬರನ್ನು ನಿಯೋಜಿಸಿರಬೇಕು.‌ ಈ ಮೂಲಕ ಕರ್ನಾಟಕ ನ್ಯಾಯಾಂಗದ ಗೌರವ, ಘನತೆಗೆ ಮುಕ್ಕಾಗದಂತೆ ನೋಡಿಕೊಳ್ಳಬೇಕು ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

ಒಂದು ವೇಳೆ, ಈ ನಿಟ್ಟಿನಲ್ಲಿ ಬಿಸಿಐ ಅಧ್ಯಕ್ಷರು ಕೂಡಲೇ ಕ್ರಮ ಕೈಗೊಳ್ಳದಿದ್ದರೆ, ನಾವು (ಎಎಬಿ) ಈ ವಿಷಯವನ್ನು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತರುತ್ತೇವೆ. ಅಡ್ವೊಕೇಟ್‌ ಜನರಲ್‌ ಅವರೇ ಕೋರ್ಟ್ ಹಾಲ್ 1ರಲ್ಲಿ ಇಂತಹ ಸಂದರ್ಭಗಳನ್ನು ನಿಭಾಯಿಸುವ ಹೊಣೆ ಹೊರುವಂತೆ ಸೂಚಿಸಲು ಕೋರುತ್ತೇವೆ. ಆದ್ದರಿಂದ, ಈ ವಿಚಾರದಲ್ಲಿ ಶೀಘ್ರ ನಿರ್ಧಾರ ಕೈಗೊಳ್ಳಬೇಕೆಂದು ಪತ್ರದಲ್ಲಿ ವಕೀಲರ ಸಂಘ ಆಗ್ರಹಿಸಿದೆ.

Related Articles

Comments (0)

Leave a Comment