ಯೊಗೀಶ ಗೌಡರ್ ಕೊಲೆ ಆರೋಪಿಯಿಂದ ಸಾಕ್ಷಿಗಳಿಗೆ ಬೆದರಿಕೆ; ಸಿಸಿ ಕ್ಯಾಮರಾ ದೃಶ್ಯ ಒದಗಿಸಲು ಸಿವಿಲ್ ಕೋರ್ಟ್ ರಿಜಿಸ್ಟ್ರಾರ್‌ಗೆ ಹೈಕೋರ್ಟ್ ಸೂಚನೆ

ಬೆಂಗಳೂರು: ಧಾರವಾಡದ ಬಿಜೆಪಿ ಮುಖಂಡ ಯೋಗೀಶ ಗೌಡರ್‌ ಕೊಲೆ ಪ್ರಕರಣದ ಆರೋಪಿ ಅಶ್ವಥ್‌ ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆಯೊಡ್ಡಿದ್ದಾರೆನ್ನಲಾದ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ನೀಡುವಂತೆ ಸಿಟಿ ಸಿವಿಲ್ ಕೋರ್ಟ್ ರಿಜಿಸ್ಟ್ರಾರ್‌ಗೆ ಹೈಕೋರ್ಟ್ ಸೂಚಿಸಿದೆ.

ಕೊಲೆ ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆಯೊಡ್ಡುತ್ತಿರುವ ಹಿನ್ನೆಲೆಯಲ್ಲಿ ಆರೋಪಿ ಅಶ್ವಥ್‌ಗೆ ಮಂಜೂರು ಮಾಡಿರುವ ಜಾಮೀನು ರದ್ದುಪಡಿಸುವಂತೆ ಕೋರಿ ಸಿಬಿಐ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಐ. ಅರುಣ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ಸಿಬಿಐ ಪರ ವಕೀಲ ಪಿ. ಪ್ರಸನ್ನಕುಮಾರ್‌ ವಾದ ಮಂಡಿಸಿ, ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿ ನುಡಿಯಲು ಮುಂದಾಗಿರುವ ಬಸವರಾಜ ಮುತ್ತಗಿಗೆ ಆರೋಪಿ ಅಶ್ವಥ್‌ ಜೀವ ಬೆದರಿಕೆ ಹಾಕಿದ್ದಾನೆ. ಜತೆಗೆ, ಮತ್ತೊಬ್ಬ ಸಾಕ್ಷಿಗೂ ಸಿಟಿ ಸಿವಿಲ್‌ ಕೋರ್ಟ್‌ ಆವರಣದಲ್ಲೇ ಅಶ್ವಥ್‌ ಬೆದರಿಕೆ ಹಾಕಿದ್ದಾನೆ. ಆ ಎಲ್ಲ ದೃಶ್ಯಗಳು ಸಿವಿಲ್‌ ಕೋರ್ಟ್‌ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದ್ದರಿಂದ, ಆ ದೃಶ್ಯಾವಳಿ ಒದಗಿಸುವಂತೆ ಸಿವಿಲ್‌ ಕೋರ್ಟ್ ರಿಜಿಸ್ಟ್ರಾರ್‌‌ಗೆ ನಿರ್ದೇಶನ ನೀಡಬೇಕೆಂದು ಕೋರಿದರು.

ವಾದ ಆಲಿಸಿದ‌ ನ್ಯಾಯಪೀಠ, ಸದ್ಯ ಜಾಮೀನಿನ ಮೇರೆಗೆ ಹೊರಗಿರುವ ಆರೋಪಿ ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಕುರಿತ ಸಿಸಿ ಕ್ಯಾಮರಾ ದೃಶ್ಯಗಳನ್ನು ನೀಡುವಂತೆ ಸಿಟಿ ಸಿವಿಲ್‌ ಕೋರ್ಟ್‌ ರಿಜಿಸ್ಟ್ರಾರ್‌ಗೆ ಸೂಚಿಸಿ, ವಿಚಾರಣೆಯನ್ನು ಆಗಸ್ಟ್ 1 ಕ್ಕೆ ಮುಂದೂಡಿತು.

ಪ್ರಕರಣದ ಹಿನ್ನೆಲೆ:
2016ರಲ್ಲಿ ಧಾರವಾಡದಲ್ಲಿ ಬಿಜೆಪಿಯ ತಾಲೂಕು ಪಂಚಾಯ್ತಿ ಸದಸ್ಯರಾಗಿದ್ದ ಯೋಗೀಶ ಗೌಡರ್ ಕೊಲೆಯಾಗಿತ್ತು. 2019ರಲ್ಲಿ ಕರ್ನಾಟಕ ಸರ್ಕಾರದ ಮನವಿ ಮೇರೆಗೆ ಸಿಬಿಐ ಪ್ರಕರಣದ ತನಿಖೆ ಕೈಗೆತ್ತಿಕೊಂಡಿತ್ತು. 2020ರ ಮಾರ್ಚ್‌ನಲ್ಲಿ ಸಿಬಿಐ ಆರೋಪಿಗಳಾದ ದಿನೇಶ್‌, ಸುನಿಲ್‌, ನೂತನ್‌, ಅಶ್ವಥ್‌, ಶಹನವಾಜ್‌ ಮತ್ತು ನಜೀರ್‌ ಆಹಮದ್‌ ಅವರುಗಳನ್ನು ಬಂಧಿಸಿತ್ತು. ಆನಂತರ ತನಿಖೆ ಪೂರ್ಣಗೊಳಿಸಿ ಆರೋಪಿಗಳ ವಿರುದ್ಧ ವಿಶೇಷ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿತ್ತು.

Related Articles

Comments (0)

Leave a Comment