ಗೋವಿಗೆ ಗುಂಡಿಟ್ಟ ವಿಡಿಯೊ ಹರಿಬಿಟ್ಟು ಗಲಭೆಗೆ ಪ್ರಚೋದಿಸಿದ ಆರೋಪ; ಕೊಡಗಿನ ವ್ಯಕ್ತಿ ವಿರುದ್ಧದ ಎಫ್‌ಐಆರ್ ರದ್ದು

ಬೆಂಗಳೂರು: ಗೋವಿಗೆ ಗುಂಡು ಹಾರಿಸುವ ವಿಡಿಯೊ ಒಳಗೊಂಡ ಸುಳ್ಳು ಸುದ್ದಿಯನ್ನು ವಾಟ್ಸ್‌ಆ್ಯಪ್‌ನಲ್ಲಿ ಹರಿ ಬಿಡುವ ಮೂಲಕ ಗಲಭೆಗೆ ಪ್ರಚೋದನೆ ನೀಡಿದ ಆರೋಪ ಸಂಬಂಧ ವ್ಯಕ್ತಿಯೊಬ್ಬರ ವಿರುದ್ಧ ದಾಖಲಾಗಿದ್ದ ಎಫ್‌ಐ‌ಆರ್ ಹಾಗೂ ಆರೋಪ ಪಟ್ಟಿಯನ್ನು ಹೈಕೋರ್ಟ್ ರದ್ದುಪಡಿಸಿದೆ.

ಉದ್ದೇಶ ಪೂರ್ವಕವಾಗಿ ಗಲಭೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ರದ್ದು ಕೋರಿ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬೀರುಗ ಗ್ರಾಮದ ವಿವೇಕ್‌ ಕಾರಿಯಪ್ಪ ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಸ್​.ಆರ್​. ಕೃಷ್ಣ ಕುಮಾರ್​ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ಹೈಕೋರ್ಟ್ ಆದೇಶವೇನು?
ಅರ್ಜಿದಾರರ ವಿರುದ್ಧ ಐಪಿಸಿ ಸೆಕ್ಷನ್‌ 153ರ (ಉದ್ದೇಶ ಪೂರ್ವಕವಾಗಿ ಗಲಭೆಗೆ ಪ್ರಚೋದನೆ) ಅಡಿಯಲ್ಲಿ ಶಿಕ್ಷೆಗೆ ಗುರಿ ಪಡಿಸುವುದಕ್ಕೆ ಅಗತ್ಯ ಸಾಕ್ಷ್ಯಾಧಾರಗಳಿಲ್ಲ. ಅವರ ವಿರುದ್ಧದ ಆರೋಪಗಳನ್ನು ಪುಷ್ಟೀಕರಿಸುವಂಥ ಅಂಶಗಳೂ ಎಫ್​ಐಆರ್​ ಮತ್ತು ಆರೋಪ ಪಟ್ಟಿಯಲ್ಲಿ ತಿಳಿಸಿಲ್ಲ. ಗೋವಿಗೆ ಗುಂಡು ಹೊಡೆಯುತ್ತಿರುವುದು ಮತ್ತು ಆ ಗುಂಡು ಹೊಡೆಯುವುದು ಸರಿಯಲ್ಲ ಎಂದು ಹೇಳುತ್ತಿರುವುದನ್ನು ಬಿಟ್ಟರೆ, ಅರ್ಜಿದಾರರ ವಿರುದ್ಧವಾಗಿ ಯಾವುದೇ ಅಂಶಗಳು ಇಲ್ಲ ಎಂದು ನ್ಯಾಯಾಲಯ ಹೇಳಿದೆ.

‘ಕೊಡಗು ಇಶ್ಯೂಸ್‌ ಆ್ಯಂಡ್‌ ಸಜೆಷನ್ಸ್‌’ ಎಂಬ ವಾಟ್ಸ್‌ಆ್ಯಪ್ ಗ್ರೂಪ್‌ಗೆ ವಿವೇಕ್‌ ಕಾರಿಯಪ್ಪ ಆಕ್ಷೇಪಾರ್ಹ ವಿಡಿಯೊ ಹಾಕಿ, ತಕ್ಷಣವೇ ಅದನ್ನು ಡಿಲೀಟ್‌ ಮಾಡಿ, ಗ್ರೂಪ್‌ನಿಂದ ಹೊರ ಹೋಗಿದ್ದಾರೆ ಎಂದು ಆರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ. ಆದ್ದರಿಂದ, ಅರ್ಜಿದಾರರನ್ನು ಪ್ರಕರಣದಲ್ಲಿ ಆರೋಪಿ ಎನ್ನಲಾಗದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಅರ್ಜಿದಾರರ ವಿರುದ್ಧದ ಎಫ್‌ಐಆರ್, ಆರೋಪಪಟ್ಟಿ ಮತ್ತದಕ್ಕೆ ಸಂಬಂಧಿಸಿದಂತೆ ಪೊನ್ನಂಪೇಟೆ ಜೆ‌ಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಿ ಆದೇಶಿಸಿದೆ.

ಪ್ರಕರಣವೇನು?
‘ಕೊಡಗು ಇಶ್ಯೂಸ್ & ಸಜೆಷನ್ಸ್’ ಎಂಬ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ವ್ಯಕ್ತಿಯೊಬ್ಬ ಗೋವಿಗೆ ಗುಂಡು ಹೊಡೆದು ಕೊಲ್ಲುವ ವಿಡಿಯೊ ಒಂದನ್ನು ನಾಥೂರಾಮ್ ಗೋಡ್ಸೆ ಹೆಸರಿನಲ್ಲಿ ಹಂಚಿಕೆ ಮಾಡಲಾಗಿತ್ತು. ಅಲ್ಲದೆ, ವಿಡಿಯೊಗೆ ಸಂಬಂಧಿಸಿದಂತೆ “ಈ ಕಿಡಿಗೇಡಿ ಮೊಹಮ್ಮದ್​ ಮುಜಾಯಿದ್​ ಇಸ್ಲಾಂ ಕೇರಳ ಕಾಂಗ್ರೆಸ್​ ಪಕ್ಷದ ಮಾದ್ಯಮ ಉಸ್ತುವಾರಿ. ರಾಹುಲ್​ ಗಾಂಧಿ ಗೆಲುವಿಗಾಗಿ ಗೋವನ್ನು ಗುಂಡಿಟ್ಟು ಬಲಿಕೊಟ್ಟಿದ್ದಾನೆ. ಇದು ಹಿಂದುಗಳ ಮೇಲಿನ ದ್ವೇಷದ ಪರಮಾವಧಿಯಾಗಿದೆ. ಈ ವಿಡಿಯೊವನ್ನು ಹೆಚ್ಚು ಕೇಂದ್ರ ಗೃಹ ಸಚಿವಾಲಯಕ್ಕೆ ತಲುಪುವವರೆಗೆ ಹಂಚಿದರೆ ಆತ ಬಂಧನಕ್ಕೆ ಒಳಗಾಗುತ್ತಾನೆ ಎಂದು ಉಲ್ಲೇಖಿಸಲಾಗಿತ್ತು.

ವಿಡಿಯೊ ಮತ್ತು ಅದನ್ನು ಹಂಚಿಕೆ ಮಾಡಿದಾತನ ಹಿನ್ನೆಲೆ ಪರಿಶೀಲಿಸಿದಾಗ ಅದು ಬೀರುಗ ಗ್ರಾಮದ ವಿವೇಕ್‌ ಕಾರಿಯಪ್ಪ ಎಂದು ತಿಳಿದು ಬಂದಿತ್ತು. ಆ ವಿಡಿಯೊ ಮಣಿಪುರ ರಾಜ್ಯದಲ್ಲಿ ನಡೆದ ಘಟನೆಗೆ ಸಂಬಂಧಿಸಿದ್ದಾಗಿದ್ದು, ವಿವೇಕ್‌ ಕಾರಿಯಪ್ಪ ಈ ಘಟನೆ ಕೇರಳದಲ್ಲಿ ನಡೆದಿದೆ ಎಂದು ಬಿಂಬಿಸುವ ಮೂಲಕ ಅನ್ಯ ಧರ್ಮಗಳ ವಿರುದ್ಧ ಉದ್ದೇಶಪೂರ್ವಕ ಸುಳ್ಳು ಸುದ್ದಿ ಹರಿಬಿಟ್ಟಿದ್ದಾನೆ ಎಂದು ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಪೊಲೀಸ್​ ಠಾಣೆಯ ಕಾನ್‌ಸ್ಟೆಬಲ್ ಶರತ್‌ ಕುಮಾರ್‌ ದೂರು ನೀಡಿದ್ದರು.

ದೂರು ಆಧರಿಸಿ ಪೊಲೀಸರು 2024ರ ಮೇ 8ರಂದು ಅರ್ಜಿದಾರರ ವಿರುದ್ಧ ಐಪಿಸಿ ಸೆಕ್ಷನ್ 505(2) (ಧರ್ಮ, ಜನಾಂಗ, ಜಾತಿ ಆಧಾರದಲ್ಲಿ ದ್ವೇಷಕ್ಕೆ ಪ್ರಚೋದನೆ) ಅಡಿಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆಯ ಬಳಿಕ ಐಪಿಸಿ ಸೆಕ್ಷನ್‌ 505(2) ಕೈಬಿಟ್ಟ ಪೊಲೀಸರು, ಐಪಿಸಿ ಸೆಕ್ಷನ್‌ 153 ಅಪರಾಧಕ್ಕೆ ಆರೋಪ ಪಟ್ಟಿ ಸಲ್ಲಿಕೆ ಮಾಡಿದ್ದರು. ಇದನ್ನು ಪ್ರಶ್ನಿಸಿ ವಿವೇಕ್‌ ಕಾರಿಯಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು.

Related Articles

Comments (0)

Leave a Comment