ಎನ್‌ಎಲ್‌ಎಸ್‌ಐಯು ಪ್ರವೇಶಕ್ಕೆ ತೃತೀಯ ಲಿಂಗಿಗಳಿಗೆ 0.5% ಮೀಸಲು; ಆಡಳಿತ ಮಂಡಳಿ ಸಭೆ ಮುಂದೆ ವಿಷಯ ಮಂಡನೆಗೆ ನಿರ್ದೇಶನ

ಬೆಂಗಳೂರು: ನಗರದ ನಾಗರಬಾವಿಯಲ್ಲಿರುವ ಭಾರತೀಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ (ಎನ್‌ಎಲ್‌ಎಸ್‌ಐಯು) ಪ್ರವೇಶಾತಿಯಲ್ಲಿ ತೃತೀಯ ಲಿಂಗಿಗಳಿಗೆ ಶೇ. 0.5 ಮೀಸಲಾತಿ ಒದಗಿಸುವ ಪ್ರಸ್ತಾವವನ್ನು ಆಗಸ್ಟ್‌-ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸಭೆಯ ಮುಂದಿಡುವಂತೆ ಹೈಕೋರ್ಟ್‌ ನಿರ್ದೇಶಿಸಿದೆ.

ತೃತೀಯ ಲಿಂಗಿಗಳಿಗೆ ಮೀಸಲು ಒದಗಿಸುವಂತೆ ಏಕಸದಸ್ಯ ನ್ಯಾಯಪೀಠ ನೀಡಿರುವ ಆದೇಶ ಪ್ರಶ್ನಿಸಿ ಎನ್‌ಎಲ್‌ಎಸ್‌ಐಯು ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಅನು ಸಿವರಾಮನ್‌ ಹಾಗೂ ನ್ಯಾಯಮೂರ್ತಿ ರಾಜೇಶ್‌ ರೈ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ.

ಮೇಲ್ಮನವಿ ಕುರಿತು ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಮೂಲ ಅರ್ಜಿದಾರರು ಕೋರಿರುವ ಮನವಿ ಮತ್ತು ಪ್ರವೇಶಾತಿ ಹಕ್ಕಿನ ಬಗ್ಗೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ತೀರ್ಮಾನ ಕೈಗೊಳ್ಳಬೇಕಿದೆ. ವಿವಿ ಪರ ವಕೀಲರು ಯಾವುದೇ ವಿಳಂಬ ಮಾಡದೆ ಬರುವ ಆಗಸ್ಟ್‌-ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ವಿವಿಯ ಆಡಳಿತ ಮಂಡಳಿ ಸಭೆಯಲ್ಲಿ ಇಡೀ ವಿಚಾರದ ಬಗ್ಗೆ ಸಮಗ್ರವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದೆಂದು ಹೇಳಿದ್ದಾರೆ. ಆದ್ದರಿಂದ, ಅರ್ಜಿದಾರರ ಮನವಿ ಮತ್ತು ಹಣಕಾಸಿನ ನೆರವು ನೀಡುವುದೂ ಸೇರಿ ಒಟ್ಟಾರೆ ಮೀಸಲು ಒದಗಿಸುವ ವಿಚಾರವನ್ನು ಆಡಳಿತ ಮಂಡಳಿಯ ಮುಂದೆ ಮಂಡಿಸಬೇಕು ಎಂದು ಸೂಚಿಸಿ, ವಿಚಾರಣೆಯನ್ನು ಅಕ್ಟೋಬರ್‌ ತಿಂಗಳಿಗೆ ಮುಂದೂಡಿತು.

ಪ್ರಕರಣವೇನು?
ಎನ್‌ಎಲ್‌ಎಸ್‌ಐಯು ಪ್ರವೇಶಾತಿಗೆ ಅವಕಾಶ ನಿರಾಕರಿಸಿದ್ದ ಕ್ರಮ ಪ್ರಶ್ನಿಸಿ ತೃತೀಯ ಲಿಂಗಿಯೊಬ್ಬರು ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ್ದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ತೃತೀಯ ಲಿಂಗಿಗಳಿಗೆ ಮೀಸಲು ಒದಗಿಸುವ ಸಂಬಂಧ ರಾಜ್ಯ ಸರ್ಕಾರ ನೀತಿ ನಿರ್ಧಾರ ಕೈಗೊಳ್ಳುವವರೆಗೆ ವಿಶ್ವವಿದ್ಯಾಲಯ ತೃತೀಯ ಲಿಂಗಿಗಳ ಪ್ರವೇಶಕ್ಕೆ ಶುಲ್ಕ ಮನ್ನಾದೊಂದಿಗೆ ಶೇ. 0.5 ಮೀಸಲಾತಿ ಒದಗಿಸಬೇಕೆಂದು ಆದೇಶ ನೀಡಿತ್ತು. ಅಲ್ಲದೆ, ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಮತ್ತು ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ ತೃತೀಯ ಲಿಂಗಿಗಳಿಗೆ ಆರ್ಥಿಕ ನೆರವು ನೀಡುವುದೂ ಸೇರಿ ಪ್ರವೇಶದಲ್ಲಿಮೀಸಲಾತಿ ಒದಗಿಸಲು ನೀತಿಯನ್ನು ರೂಪಿಸಬೇಕು ಎಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ಆದರೆ, ಎನ್‌ಎಲ್ಎಸ್‌ಐಯು, ನ್ಯಾಯಾಲಯಕ್ಕಾಗಲಿ ಅಥವಾ ರಾಜ್ಯ ಸರ್ಕಾರಕ್ಕಾಗಲೀ ವಿಶ್ವವಿದ್ಯಾಲಯಕ್ಕೆ ಮೀಸಲು ಒದಗಿಸುವಂತೆ ನಿರ್ದೇಶನ ನೀಡಲು ಅಧಿಕಾರವಿಲ್ಲ. ಜತೆಗೆ, ಶೇ. 0.5 ಮೀಸಲಾತಿ ಒದಗಿಸಬೇಕೆನ್ನುವ ಆದೇಶಕ್ಕೆ ಯಾವುದೇ ವೈಜ್ಞಾನಿಕ ತಳಹದಿ ಇಲ್ಲ ಎಂದು ಆಕ್ಷೇಪವೆತ್ತಿತ್ತು.

Related Articles

Comments (0)

Leave a Comment