ಖಾಸಗಿ ವ್ಯಕ್ತಿಗಳಿಂದ ಸಾರ್ವಜನಿಕ ಬಸ್ ನಿಲ್ದಾಣ ಧ್ವಂಸ; ವಿಜಯಪುರ ಜಿಲ್ಲಾಡಳಿತಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು: ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮುತ್ತಗಿ ಗ್ರಾಮದ ಸರ್ಕಾರಿ ಜಾಗದಲ್ಲಿರುವ ಸಾರ್ವಜನಿಕ ಬಸ್ ನಿಲ್ದಾಣವನ್ನು ಧ್ವಂಸಗೊಳಿಸಿ ಮಹಾನ್ ವ್ಯಕ್ತಿಗಳ ಪ್ರತಿಮೆ ಸ್ಥಾಪಿಸುವ ಉದ್ದೇಶದಿಂದ ಕೆಲ ಖಾಸಗಿ ವ್ಯಕ್ತಿಗಳು ಸರ್ಕಲ್ ನಿರ್ಮಾಣ ಮಾಡುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಮುತ್ತಗಿ ಗ್ರಾಮದ ವಿಮಲ್ ಗೋವಿಂದಪ್ಪ ಸುಳಿಬಾವಿ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ಗ್ರಾಮೀಣಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ವಿಜಯಪುರ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮುತ್ತಗಿ ಗ್ರಾ.ಪಂ ಪಿಡಿಒ ಹಾಗೂ ಬಸ್ ನಿಲ್ದಾಣ ನೆಲಸಮಗೊಳಿಸಿದ್ದಾರೆಂದು ಆರೋಪಿಸಲಾದ ಖಾಸಗಿ ವ್ಯಕ್ತಿಗಳಾದ ಸುರೇಶ್, ಈರಣ್ಣ, ಮಂಜುನಾಥ್ ಅವರಿಗೆ ನೋಟಿಸ್ ಜಾರಿಗೊಳಿಸಿತಲ್ಲದೆ, ಅರ್ಜಿದಾರರು ಆರೋಪಿಸಿರುವಂತೆ ವಿವಾದಿತ ಜಾಗದಲ್ಲಿ ನಿಯಮಬಾಹಿರವಾಗಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದರೆ ಸಂಬಂಧಪಟ್ಟ ಕಂದಾಯ ಅಧಿಕಾರಿಗಳು ಅದನ್ನು ತಡೆಯಬೇಕು ಎಂದು ನಿರ್ದೇಶಿಸಿ ಅರ್ಜಿ ವಿಚಾರಣೆಯನ್ನು ನವೆಂಬರ್ 3ಕ್ಕೆ ಮುಂದೂಡಿತು.

ಅರ್ಜಿದಾರರ ಆರೋಪವೇನು?
ಮುತ್ತಗಿ ಗ್ರಾ.ಪಂ.ನಿಂದ ಮಂಜೂರು ಮಾಡಲಾಗಿರುವ ಸರ್ಕಾರಿ ಜಾಗದಲ್ಲಿ ನಿರ್ಮಿಸಲಾಗಿರುವ ಸಾರ್ವಜನಿಕ ಬಸ್ ನಿಲ್ದಾಾಣವನ್ನು ಖಾಸಗಿ ವ್ಯಕ್ತಿಗಳಾದ ಸುರೇಶ್, ಈರಣ್ಣ, ಮಂಜುನಾಥ್ ಎಂಬುವರು 2024ರ ಏಪ್ರಿಲ್ ತಿಂಗಳಲ್ಲಿ ನೆಲಸಮಗೊಳಿಸಿ ಅಲ್ಲಿ ಸರ್ಕಲ್ ನಿರ್ಮಾಣ ಮಾಡುತ್ತಿದ್ದಾರೆ. ಈ ಬಗ್ಗೆ ಗ್ರಾ.ಪಂ ಪಿಡಿಒ ನೋಟಿಸ್ ಕೊಟ್ಟರೂ, ಅದನ್ನು ಲೆಕ್ಕಿಸದೆ ಕಾಮಗಾರಿ ಮುಂದುವರಿಸಿದ್ದಾರೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ವಿವಾದಿತ ಜಾಗದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆ ಸ್ಥಾಪಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ರಾಣಿ ಚನ್ನಮ್ಮ ಅಥವಾ ಬೇರೆ ಯಾವ ಗಣ್ಯ ವ್ಯಕ್ತಿಗಳು, ಮಹಾನ್ ವ್ಯಕ್ತಿಗಳ ಪ್ರತಿಮೆ ಸ್ಥಾಪನೆ ಮಾಡುವುದಕ್ಕೆ ನಮ್ಮ ವಿರೋಧವವಿಲ್ಲ. ಆದರೆ, ಸಾರ್ವಜನಿಕ ಬಸ್ ನಿಲ್ದಾಾಣ ನೆಲಸಮಗೊಳಿಸಿ, ನಿಯಮಬಾಹಿರವಾಗಿ ಈ ಕಾರ್ಯ ಮಾಡಲಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಆಗಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ, ಸ್ಥಳೀಯ ಗ್ರಾ.ಪಂ.ಗೆ ನಿರ್ದೇಶನ ನೀಡಬೇಕು. ಅಕ್ರಮವಾಗಿ ಸರ್ಕಲ್ ನಿರ್ಮಾಣ ಮಾಡುತ್ತಿರುವ ಸ್ಥಳೀಯ ಮೂವರು ವ್ಯಕ್ತಿಗಳ ವಿರುದ್ಧ ಕಾನೂನು ರೀತಿ ಕಠಿಣ ಕ್ರಮ ಜರುಗಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Related Articles

Comments (0)

Leave a Comment