ಕಾಲ್ತುಳಿತ ದುರಂತ; ಜನಸಂದಣಿ ನಿಯಂತ್ರಣ ಎಸ್ಒಪಿ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
- by Jagan Ramesh
- July 29, 2025
- 73 Views

ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಕಾಲ್ತುಳಿತದಂಥ ಘಟನೆಗಳು ಭವಿಷ್ಯದಲ್ಲಿ ಮರುಕಳಿಸದಂತೆ ತಡೆಯುವ ಸಲುವಾಗಿ ಸಾರ್ವಜನಿಕ ಸಮಾರಂಭಗಳಲ್ಲಿ ಜನಸಂದಣಿ ನಿಯಂತ್ರಣಕ್ಕೆ ಸಂಬಂಧಿಸಿದ ಪ್ರಮಾಣೀಕೃತ ಕಾರ್ಯಾಚರಣೆ ವಿಧಾನ (ಎಸ್ಒಪಿ) ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಕಾಲ್ತುಳಿತ ಪ್ರಕರಣ ಸಂಬಂಧ ಮಾಧ್ಯಮಗಳ ವರದಿ ಆಧರಿಸಿ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಅಮಾಯಕ ಜೀವಗಳು ಬಲಿಯಾಗಿರುವ ಕುರಿತ ಸ್ವಯಂಪ್ರೇರಿತ ಪಿಐಎಲ್ ಇದು. ರಾಜ್ಯ ಸರ್ಕಾರ ಏನಾದರೂ ಕ್ರಮ ಕೈಗೊಳ್ಳುತ್ತಿದೆಯೇ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಎಸ್ಒಪಿ ಅಥವಾ ಶಿಷ್ಟಾಚಾರ ಏನಾದರೂ ಇದೆಯೇ ಎಂಬ ಎರಡು ವಿಷಯಗಳ ಬಗ್ಗೆ ಮಾತ್ರ ಗಮನ ಹರಿಸುತ್ತೇವೆ ಎಂದು ಮೌಖಿಕವಾಗಿ ಹೇಳಿತು.
ಅದಕ್ಕೆ ಪ್ರತಿಕ್ರಿಯಿಸಿದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ಶೀಘ್ರವೇ ಎಸ್ಒಪಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದರು. ಆ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 1ಕ್ಕೆ ಮುಂದೂಡಿತು.
ವಾದ-ಪ್ರತಿವಾದ:
ವಿಚಾರಣೆ ವೇಳೆ ಅಡ್ವೊಕೇಟ್ ಜನರಲ್ ವಾದ ಮಂಡಿಸಿ, ಕ್ರೀಡಾಂಗಣದ ಸಾಮರ್ಥ್ಯ ಇರುವುದು 35 ಸಾವಿರ ಪ್ರೇಕ್ಷಕರಿಗೆ ಮಾತ್ರ. ಆದರೆ, 3 ಲಕ್ಷ ಜನ ಜಮಾಯಿಸಿದ್ದರಿಂದ ಘಟನೆ ಸಂಭವಿಸಿದೆ. ಉಚಿತ ಪ್ರವೇಶ ನೀಡಲಾಗಿತ್ತು, ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಜನ ಎಲ್ಲರೂ ಒಳಗೆ ನುಗ್ಗಲು ಯತ್ನಿಸಿದಾಗ ಘಟನೆ ಜರುಗಿದೆ. ಇಂತಹ ಘಟನೆಗಳನ್ನು ತಡೆಯಲು ಎಸ್ಒಪಿ ರೂಪಿಸಲಾಗುತ್ತಿದೆ. ಅದನ್ನು ಎಲ್ಲರ ಸಲಹೆಗಳನ್ನು ಪಡೆಯಲು ಶೀಘ್ರವೇ ಹಂಚಿಕೆ ಮಾಡಲಾಗುವುದು ಎಂದರು.
ಡಿಎನ್ಎ ಎಂಟರ್ಟೇನ್ಮೆಂಟ್ ಪರ ವಾದ ಮಂಡಿಸಿದ ಹಿರಿಯ ವಕೀಲ ಬಿ.ಕೆ. ಸಂಪತ್ ಕುಮಾರ್, ನ್ಯಾಯಮೂರ್ತಿ ಕುನ್ಹಾ ನೇತೃತ್ವದ ಆಯೋಗ 15 ದಿನಗಳ ಹಿಂದೆಯೇ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರೂ ಈವರೆಗೂ ನಮಗೆ ವರದಿಯ ಪ್ರತಿ ನೀಡಿಲ್ಲ. ಪ್ರತಿದಿನ ಮಾಧ್ಯಮಗಳು ನಮ್ಮ ವರ್ಚಸ್ಸನ್ನು ಹಾಳು ಮಾಡುತ್ತಿವೆ. ಆಯೋಗದ ವರದಿ ಪ್ರಶ್ನಿಸಿರುವ ಅರ್ಜಿ ಮತ್ತೊಂದು ನ್ಯಾಯಪೀಠದ ಮುಂದೆ ಬಾಕಿ ಇದೆ. ಪಿಐಎಲ್ ಬಾಕಿ ಇರುವುದರಿಂದ ಅದರ ವಿಚಾರಣೆಗೆ ಅಡ್ಡಿಯಾಗುತ್ತದೆಯೇ ಎನ್ನುವ ಬಗ್ಗೆ ನ್ಯಾಯಾಲಯವೇ ಸ್ಪಷ್ಟನೆ ನೀಡಬೇಕು ಎಂದು ಕೋರಿದರು.
ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಕಾರ ನೀಡಲು ಅಮಿಕಸ್ ಕ್ಯೂರಿಯಾಗಿ ನೇಮಕಗೊಂಡಿರುವ ಹಿರಿಯ ವಕೀಲೆ ಎಸ್. ಸುಶೀಲಾ, ದೊಡ್ಡ ಪ್ರಮಾಣದಲ್ಲಿ ಜನಸಂದಣಿ ಇದ್ದಲ್ಲಿ ಅಂತಹ ಸಂದರ್ಭಗಳನ್ನು ನಿಭಾಯಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ 2014ರಲ್ಲಿಯೇ ಮಾರ್ಗಸೂಚಿ ಹೊರಡಿಸಿದ್ದು, ಅದು ಪ್ರಸ್ತುತ ಜಾರಿಯಲ್ಲಿದೆ. ರಾಜ್ಯ ಸರ್ಕಾರ ಆ ಮಾರ್ಗಸೂಚಿಗಳನ್ನು ಸುಧಾರಿಸಿ ಮತ್ತಷ್ಟು ಉತ್ತಮಗೊಳಿಸುವುದಾದರೆ ಒಳ್ಳೆಯದು. ನಮ್ಮ ಕಾಳಜಿ ಮುಂದೆ ಅಂತಹ ಘಟನೆಗಳು ನಡೆಯಬಾರದು ಎಂಬುದಾಗಿದೆ ಎಂದು ತಿಳಿಸಿದರು.
ವಿಚಾರಣಾ ವರದಿ ಪ್ರತಿ ನೀಡದ್ದಕ್ಕೆ ಡಿಎನ್ಎ ಆಕ್ಷೇಪ:
ಕಾಲ್ತುಳಿತ ಪ್ರಕರಣ ಸಂಬಂಧ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರ ಆಯೋಗ ನೀಡಿರುವ ವರದಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಲಾಗುತ್ತಿದೆ. ಆದರೆ, ನಮಗೆ ಮಾತ್ರ ನೀಡುತ್ತಿಲ್ಲ ಎಂದು ಡಿಎನ್ಎ ಸಂಸ್ಥೆಯ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಕುನ್ಹಾ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗ ಜುಲೈ 11ರಂದು ಸರ್ಕಾರಕ್ಕೆಸಲ್ಲಿಸಿರುವ ವರದಿ ರದ್ದುಕೋರಿ ಡಿಎನ್ಎ ಎಂಟರ್ಟೇನ್ಮೆಂಟ್ ನೆಟ್ವರ್ಕ್ಸ್ನ ನಿರ್ದೇಶಕ ಸುನೀಲ್ ಮ್ಯಾಥ್ಯೂ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಜಯಂತ್ ಬ್ಯಾನರ್ಜಿ ಹಾಗೂ ನ್ಯಾಯಮೂರ್ತಿ ಉಮೇಶ್ ಎಂ. ಅಡಿಗ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನನಡೆಸಿತು.
ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಹಾಜರಾಗಿ, ಸಿಜೆ ನೇತೃತ್ವದ ವಿಭಾಗೀಯ ಪೀಠದ ಮುಂದೆ ಸ್ವಯಂಪ್ರೇರಿತ ಪಿಐಎಲ್ ವಿಚಾರಣೆಗೆ ನಿಗದಿಯಾಗಿದೆ. ನ್ಯಾಯಮೂರ್ತಿ ಮೈಕಲ್ ಕುನ್ಹಾ ವಿಚಾರಣಾ ಆಯೋಗದ ವರದಿಯ ಬಗ್ಗೆ ಮಾಹಿತಿಯನ್ನೂ ನೀಡಲಾಗುವುದು. ಆದ್ದರಿಂದ, ವಿಚಾರಣೆ ಮುಂದೂಡಬೇಕು ಎಂದು ಕೋರಿದರು.
ಅರ್ಜಿದಾರರ ಪರ ಹಿರಿಯ ವಕೀಲ ಬಿ.ಕೆ. ಸಂಪತ್ ಕುಮಾರ್, ಡಿಎನ್ಎ ಅಧಿಕಾರಿಗಳು ನೀಡಿರುವ ಹೇಳಿಕೆಯನ್ನು ನ್ಯಾ. ಕುನ್ಹಾ ಆಯೋಗ ತಪ್ಪಾಗಿ ದಾಖಲಿಸಿದೆ. ಅದಕ್ಕಾಗಿ ಅದರ ಪ್ರತಿ ನೀಡಬೇಕು ಎಂದು ಕೋರಿದ್ದೇವೆ. ಇದರ ಜತೆಗೆ ಡಿಎನ್ಎ ವಿರುದ್ಧ ಸಾಕ್ಷಿ ನುಡಿದಿರುವವರ ಪಾಟೀ ಸವಾಲಿಗೆ ವಿಚಾರಣಾ ಆಯೋಗದ ಕಾಯ್ದೆಯಲ್ಲಿ ಅವಕಾಶವಿದೆ. ಅದಕ್ಕೂ ಅನುಮತಿ ಕೋರಿದ್ದೇವೆ. ಈ ಎರಡು ಮನವಿಗಳನ್ನು ನ್ಯಾ. ಕುನ್ಹಾ ಪರಿಗಣಿಸಿಲ್ಲ. ಅದಕ್ಕೆ ಪೂರಕವಾಗಿ ಇಡೀ ಪ್ರಕ್ರಿಯೆ ವಿಡಿಯೊ ರೆಕಾರ್ಡ್ ಮಾಡಲಾಗಿದೆ. ಅದನ್ನು ತರಿಸಿ ನ್ಯಾಯಾಲಯ ಪರಿಶೀಲಿಸಬಹುದು ಎಂದು ಕೋರಿದರು.
ನ್ಯಾಯಮೂರ್ತಿ ಕುನ್ಹಾ ವರದಿ ಆಧರಿಸಿ ಮಾಧ್ಯಮಗಳು ಡಿಎನ್ಎ ಅಧಿಕಾರಿಗಳ ಫೋಟೊ ಸಹಿತ ಸುದ್ದಿ ಪ್ರಕಟಿಸಿವೆ. ಇದರಿಂದ, ಅವರ ಘನತೆಗೆ ಧಕ್ಕೆಯಾಗಿದೆ. ಮಾಧ್ಯಮಗಳಿಗೆ ವಿಚಾರಣಾ ಆಯೋಗದ ವರದಿ ಸಿಗಬಹುದಾದರೆ ನಮಗೇಕೆ ನೀಡಲಾಗುತ್ತಿಲ್ಲ ಎಂದು ಪ್ರಶ್ನಿಸಿದರಲ್ಲದೆ, ಆರ್ಟಿಐ ಅಡಿಯೂ ಎರಡು ಅರ್ಜಿ ಹಾಕಿದ್ದು, ಅದಕ್ಕೂ ಉತ್ತರ ಸಿಕ್ಕಿಲ್ಲ ಎಂದು ಆಕ್ಷೇಪವೆತ್ತಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಸ್ವಯಂಪ್ರೇರಿತ ಅರ್ಜಿಯಲ್ಲಿ ನ್ಯಾಯಾಲಯ ಹೊರಡಿಸುವ ಆದೇಶವನ್ನು ಮುಂದಿನ ವಿಚಾರಣೆಯಲ್ಲಿ ತಿಳಿಸುವಂತೆ ಸೂಚಿಸಿ, ವಿಚಾರಣೆಯನ್ನು ಆಗಸ್ಟ್ 5ಕ್ಕೆ ಮುಂದೂಡಿತು.
Related Articles
Thank you for your comment. It is awaiting moderation.
Comments (0)