ಪೋಕ್ಸೋ ಪ್ರಕರಣದ ಗೌಪ್ಯ ವಿಚಾರಣೆ: ಸ್ವಇಚ್ಛೆಯಿಂದ ಮದುವೆಯಾಗಿದ್ದೇನೆಂದ ಸಂತ್ರಸ್ತೆ; ಮುಂದೇನಾಯ್ತು?
- by Prashanth Basavapatna
- July 25, 2025
- 70 Views

ಬೆಂಗಳೂರು: ಅಪ್ರಾಪ್ತಳನ್ನು ಅಪಹರಿಸಿದ ಆರೋಪದಲ್ಲಿ ಪೋಕ್ಸೊ ಕಾಯ್ದೆಯಡಿ ಬಂಧನಕ್ಕೊಳಗಾಗಿದ್ದ ಯುವಕನೊಬ್ಬನ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ತಾನು ವಯಸ್ಕಳಾಗಿದ್ದು, ಆರೋಪಿತನನ್ನು ಸ್ವಇಚ್ಛೆಯಿಂದ ಮದುವೆಯಾಗಿರುವುದಾಗಿ ಗೌಪ್ಯ ವಿಚಾರಣೆ ವೇಳೆ ಸಂತ್ರಸ್ತೆ ನೀಡಿದ ಹೇಳಿಕೆ ಪರಿಗಣಿಸಿ ಈ ಆದೇಶ ಮಾಡಿರುವ ನ್ಯಾಯಾಲಯ, ದಂಪತಿಗೆ ಒಟ್ಟಾಗಿ ಬದುಕಲು ಅವಕಾಶ ಕಲ್ಪಿಸಿದೆ.
ಪ್ರಕರಣ ರದ್ದುಕೋರಿ ಆರೋಪಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯ ಭಾಗವಾಗಿ ಬೆಂಗಳೂರಿನ ನಿಮ್ಹಾನ್ಸ್ ಸಮೀಪದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬಾಲಕಿಯರ ಬಾಲಮಂದಿರದಲ್ಲಿದ್ದ ಸಂತ್ರಸ್ತೆ ಮತ್ತು ಆಕೆಯ ಚಿಕ್ಕಪ್ಪನನ್ನು ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರ ಕೊಠಡಿಗೆ ಕರೆಸಿ ಗೌಪ್ಯ ವಿಚಾರಣೆ ನಡೆಸಲಾಯಿತು.
ಸಂತ್ರಸ್ತ ಯುವತಿ ಮತ್ತು ದೂರುದಾರರಾದ ಆಕೆಯ ಚಿಕ್ಕಪ್ಪನೊಂದಿಗೆ ಸಮಾಲೋಚನೆ ನಡೆಸಿದಾಗ, ಯುವತಿಯು ಮೇ 26ರಂದು ಆರೋಪಿ ಯುವಕನೊಂದಿಗೆ ಧರ್ಮಸ್ಥಳದಲ್ಲಿ ವಿವಾಹವಾಗಿದ್ದೇನೆ. 2006ರ ಏಪ್ರಿಲ್ 15ರಂದು ಜನಿಸಿರುವ ತಾನು ವಯಸ್ಕಳಾಗಿದ್ದೇನೆ. ಸದ್ಯ ಬೆಂಗಳೂರಿನ ಕಾಲೇಜೊಂದರಲ್ಲಿ ಅಂತಿಮ ವರ್ಷದ ಬಿ.ಕಾಂ ಓದುತ್ತಿದ್ದೇನೆ ಎಂದು ತಿಳಿಸಿದ್ದಾಳೆ. ಆದ್ದರಿಂದ, ತಕ್ಷಣ ಆಕೆಯನ್ನು ಬಾಲಕಿಯರ ಬಾಲ ಮಂದಿರದಿಂದ ಬಿಡುಗಡೆ ಮಾಡಬೇಕು. ಆಕೆ ಇಚ್ಛಿಸಿದ ಹಾಸ್ಟೆಲ್‌ನಲ್ಲಿ ಉಳಿಯಬಹುದಾಗಿದೆ ಎಂದು ನ್ಯಾಯಪೀಠ ಆದೇಶಿಸಿದೆ.
ಅರ್ಜಿದಾರ ಯುವಕ ಅಥವಾ ದೂರುದಾರ ಚಿಕ್ಕಪ್ಪ ಸಂತ್ರಸ್ತೆಗೆ ಯಾವುದೇ ರೀತಿಯಲ್ಲಿ ತೊಂದರೆ ಮಾಡುವಂತಿಲ್ಲ. ಮುಂದಿನ ವಿಚಾರಣೆವರೆಗೆ ಸಂತ್ರಸ್ತೆ ತನ್ನ ಊರಿಗೆ ಭೇಟಿ ನೀಡುವಂತಿಲ್ಲ ಮತ್ತು ಸೆಪ್ಟೆಂಬರ್ 1ರಂದು ವಿಚಾರಣಾ ನ್ಯಾಯಾಲಯದಲ್ಲಿ ಅರ್ಜಿದಾರ ಯುವಕ ಮತ್ತು ಸಂತ್ರಸ್ತೆ ಒಟ್ಟಾಗಿ ಭಾಗಿಯಾಗಬೇಕು ಎಂಬ ಷರತ್ತಿಗೆ ಒಳಪಟ್ಟಂತೆ ಯುವಕನ ಜತೆ ಸಂತ್ರಸ್ತೆ ತೆರಳಲು ಪೊಲೀಸರು ವ್ಯವಸ್ಥೆ ಮಾಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಪ್ರಕರಣದ ದೂರುದಾರರಾದ ಚಿಕ್ಕಪ್ಪ ತಮ್ಮ ವಕೀಲರು ಮತ್ತು ಪೊಲೀಸರ ಸಮ್ಮುಖದಲ್ಲಿ ಸಂತ್ರಸ್ತೆಯನ್ನು ಭೇಟಿ ಮಾಡಬಹುದು ಎಂದಿರುವ ನ್ಯಾಯಾಲಯ, ಯುವಕ ಮತ್ತು ಯುವತಿಯನ್ನು ಸೆಪ್ಟೆಂಬರ್ 3ರಂದು ನಡೆಯುವ ಅರ್ಜಿ ವಿಚಾರಣೆಗೆ ಖುದ್ದು ಹಾಜರಾಗಲು ನಿರ್ದೇಶಿಸಿ, ವಿಚಾರಣೆ ಮುಂದೂಡಿದೆ.
ಪ್ರಕರಣವೇನು?
ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ ಆರೋಪದಲ್ಲಿ 26 ವರ್ಷದ ಯುವಕನ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದ ಬೆಂಗಳೂರಿನ ಯಲಹಂಕ ನ್ಯೂಟೌನ್ ಪೊಲೀಸರು ಆತನನ್ನು ಬಂಧಿಸಿದ್ದರು. ಅಪ್ರಾಪ್ತಳಾಗಿದ್ದ ಸಂತ್ರಸ್ತೆ ತನ್ನ ಚಿಕ್ಕಪ್ಪನ ಜತೆ ತೆರಳಲು ನಿರಾಕರಿಸಿದ್ದರಿಂದ, ಆಕೆಯನ್ನು ಬಾಲ ಮಂದಿರಕ್ಕೆ ಕಳುಹಿಸಲಾಗಿತ್ತು. ಗುರುವಾರ ನ್ಯಾಯಾಲಯದ ನಿರ್ದೇಶನದಂತೆ ನಡೆದ ಗೌಪ್ಯ ವಿಚಾರಣೆಯಲ್ಲಿ ಸಂತ್ರಸ್ತೆ ತಾನು ವಯಸ್ಕಳಾಗಿದ್ದು, ಸ್ವಇಚ್ಛೆಯಿಂದ ಯುವಕನನ್ನು ವರಿಸಿದ್ದಾಗಿ ತಿಳಿಸಿದ್ದಳು. ಇದನ್ನು ಪರಿಗಣಿಸಿದ ನ್ಯಾಯಾಲಯ ದಂಪತಿಗೆ ಸಹಜೀವನ ನಡೆಸಲು ಅನುಮತಿಸಿದೆ. ಅರ್ಜಿದಾರ ಯುವಕನ ಪರವಾಗಿ ವಕೀಲ ರಜತ್ ವಾದ ಮಂಡಿಸಿದ್ದರು.
Related Articles
Thank you for your comment. It is awaiting moderation.
Comments (0)