ಕರ್ನಾಟಕ ರಾಜ್ಯ ವಕೀಲರ ಪರಿಷತ್ ಚುನಾವಣೆ; ಬಿಸಿಐ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್

ಬೆಂಗಳೂರು: ಕರ್ನಾಟಕ ರಾಜ್ಯ ವಕೀಲರ ಪರಿಷತ್‌ನ (ಕೆ‌ಎಸ್‌ಬಿಸಿ) ಆಡಳಿತ ಮಂಡಳಿಯ ನಿಗದಿತ 5 ವರ್ಷದ ಅವಧಿ 2023ರ ಜೂನ್‌‌ನಲ್ಲೇ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಹಾಲಿ ಆಡಳಿತ ಮಂಡಳಿಯನ್ನು ಪದಚ್ಯುತಗೊಳಿಸಿ ಹೊಸದಾಗಿ ಚುನಾವಣೆ ನಡೆಸುವ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಭಾರತೀಯ ವಕೀಲರ ಪರಿಷತ್‌‌ಗೆ (ಬಿಸಿಐ) ಹೈಕೋರ್ಟ್ ನಿರ್ದೇಶಿಸಿದೆ.

ವಕೀಲ ರೆಹಮತ್‌ ಉಲ್ಲಾ ಕೊತ್ವಾಲ್‌ ಸಲ್ಲಿಸಿರುವ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌. ಸುನೀಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ವಕೀಲರ ಕಾಯ್ದೆ ಸೆಕ್ಷನ್‌ 8ರ ಅನ್ವಯ ಕೆಎಸ್‌ಬಿಸಿಗೆ ಹೊಸದಾಗಿ ಚುನಾವಣೆ ನಡೆಸುವ ಸಂಬಂಧ ಬಿಸಿಐ ತನ್ನ ನಿಲುವು ತಿಳಿಸಬೇಕು ಎಂದು ಆದೇಶಿಸಿತು.

ವಕೀಲರ ಕಾಯ್ದೆ ಸೆಕ್ಷನ್‌ 8ರಂತೆ ಅವಧಿ ಮುಗಿಯುವ ಮುನ್ನವೇ ರಾಜ್ಯ ವಕೀಲರ ಪರಿಷತ್‌ಗೆ ಚುನಾವಣೆಯನ್ನು ನಡೆಸದಿದ್ದರೆ, ಬಿಸಿಐ ವಿಶೇಷ ಸಮಿತಿಯನ್ನು ರಚಿಸಿ ಅದಕ್ಕೆ ಅಧಿಕಾರವನ್ನು ನೀಡಬೇಕು ಮತ್ತು ಆದಷ್ಟು ಶೀಘ್ರ ಪರಿಷತ್‌ಗೆ ಚುನಾವಣೆಯನ್ನು ನಡೆಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ಚುನಾವಣೆ ನಡೆಸುವ ಸಂಬಂಧ ಪ್ರತಿಕ್ರಿಯಿಸುವಂತೆ ಬಿಸಿಐಗೆ ನಿರ್ದೇಶಿಸಿ ವಿಚಾರಣೆಯನ್ನು ಜುಲೈ 31ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ಕೆಎಸ್‌ಬಿಸಿ ಪರ ವಾದ ಮಂಡಿಸಿದ ವಕೀಲ ಟಿ.ಪಿ. ವಿವೇಕಾನಂದ, ಭಾರತೀಯ ವಕೀಲರ ಪರಿಷತ್‌ನ ನಿಯಮ (ಪ್ರಮಾಣಪತ್ರ ಮತ್ತು ವೃತ್ತಿ ಸ್ಥಳ ಪರಿಶೀಲನೆ) ಅಧಿನಿಯಮ -2015ರ ನಿಯಮ 32ಕ್ಕೆ ತಿದ್ದುಪಡಿ ಮಾಡಲಾಗಿದೆ. ಅದರಂತೆ, ಪರಿಷತ್‌ನ ಆಡಳಿತ ಮಂಡಳಿಯ ಅಧಿಕಾರಾವಧಿ ಮುಗಿದ 18 ತಿಂಗಳವರೆಗೆ ಪರಿಶೀಲನೆಗೆ ಅವಕಾಶವಿರಲಿದೆ. ಆ ಅವಧಿಯು 2025ರ ಮೇ ತಿಂಗಳಿನಲ್ಲೇ ಮುಕ್ತಾಯಗೊಂಡಿದೆ. ಆ ನಂತರ 6 ತಿಂಗಳಲ್ಲಿ ಚುನಾವಣೆ ನಡೆಸಲು ಅವಕಾಶವಿದೆ. ಜತೆಗೆ, ನಿಯಮ 32ರಲ್ಲಿ ಉಲ್ಲೇಖಿಸಿರುವಂತೆ ಎಲ್ಲ ಮತದಾರರ ಪರಿಶೀಲನಾ ಪ್ರಕ್ರಿಯೆ ಕೈಗೊಳ್ಳಲು 6 ತಿಂಗಳು ಹೆಚ್ಚುವರಿ ಅವಕಾಶವಿದ್ದು, ಅದು 2025ರ ನವೆಂಬರ್‌ಗೆ ಮುಕ್ತಾಯವಾಗಲಿದ್ದು, ಅಲ್ಲಿಯವರೆಗೆ ಚುನಾವಣೆಗಳನ್ನು ನಡೆಸಲು ಕಷ್ಟಕರ ಎಂದು ವಿವರಿಸಿದರು.

ಅರ್ಜಿದಾರರ ಮನವಿ ಏನು?
ವಕೀಲರ ಕಾಯ್ದೆ 1961ರ ಸೆಕ್ಷನ್‌ 8ರಡಿ ಕೆಎಸ್‌ಬಿಸಿಯಲ್ಲಿ ಕಾನೂನು, ಪಾರದರ್ಶಕತೆ ಮತ್ತು ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಕೂಡಲೇ ಚುನಾವಣೆ ನಡೆಸಬೇಕು. ಅದಕ್ಕೆ ವೇಳಾಪಟ್ಟಿಯನ್ನು ಪ್ರಕಟಿಸುವಂತೆ ಕೋರಿ 2025ರ ಜನವರಿ 7ರಂದು ನೀಡಿರುವ ಮನವಿಯನ್ನು ಪರಿಗಣಿಸುವಂತೆ ಬಿಸಿಐಗೆ ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಕೋರಿದ್ದಾರೆ. ಅವಧಿ ಮುಗಿದ ನಂತರ ಚುನಾವಣೆ ನಡೆಸುವ ಬದಲು ಹಾಲಿ ಆಡಳಿತ ಮಂಡಳಿಯ ಅವಧಿಯನ್ನು ಮುಂದುವರಿಸುವ ಏಕಪಕ್ಷೀಯ ನಿರ್ಧಾರವನ್ನು ಕೈಗೊಂಡಿದ್ದು, ಅದು ವಕೀಲರ ಕಾಯ್ದೆಗೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

Related Articles

Comments (0)

Leave a Comment