ಜಿಬಿಎ ರಚನೆ ಪ್ರಶ್ನಿಸಿ ಹೈಕೋರ್ಟ್‌ಗೆ ಪಿಐಎಲ್; ರಾಜ್ಯ ಸರ್ಕಾರ, ಪಾಲಿಕೆಗೆ ನೋಟಿಸ್ ಜಾರಿ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ಗ್ರೇಟರ್‌ ಬೆಂಗಳೂರು ಪ್ರಾಧಿಕಾರವನ್ನಾಗಿ (ಜಿಬಿಎ) ಬದಲಾಯಿಸುವ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ರಾಜ್ಯ ಸರ್ಕಾರ 2025ರ ಮೇ 15ರಂದು ಹೊರಡಿಸಿರುವ ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆಯನ್ನು ಪ್ರಶ್ನಿಸಿ ಚಲನಚಿತ್ರ ನಿರ್ದೇಶಕ ಟಿ.ಎಸ್‌. ನಾಗಾಭರಣ ಮತ್ತಿತರರು ಸಲ್ಲಿಸಿರುವ ಅರ್ಜಿ ಕುರಿತು ಸೋಮವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠ, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

ಅರ್ಜಿಯಲ್ಲೇನಿದೆ?
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಯು ಸಂವಿಧಾನದ 74ನೇ ತಿದ್ದುಪಡಿಗೆ (ಸ್ಥಳೀಯ ಸಂಸ್ಥೆಗಳಿಗೆ ಸಮಾನ ಸ್ಥಾನಮಾನ ನೀಡಿ ಅಧಿಕಾರ ವಿಕೇಂದ್ರಿಕರಣಕ್ಕೆ ಅವಕಾಶ ಕಲ್ಪಿಸಿರುವುದು) ತದ್ವಿರುದ್ಧವಾಗಿದೆ. ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ವಿಕೇಂದ್ರೀಕರಣದ ಉದ್ದೇಶದಿಂದ ಸಂವಿಧಾನಕ್ಕೆ 74ನೇ ತಿದ್ದುಪಡಿ ಮಾಡಲಾಗಿದೆ. ಇದೀಗ ರಾಜ್ಯ ಸರ್ಕಾರ ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆ ಜಾರಿಗೆ ತರುವ ಮೂಲಕ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಅಲ್ಲದೆ, ಪಾಲಿಕೆಯ ಆಡಳಿತದಲ್ಲಿ ಸರ್ಕಾರ ನೇರವಾಗಿ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದೆ. ಆದ್ದರಿಂದ, ಕಾಯ್ದೆ ಅಸಾಂವಿಧಾನಿಕ ಎಂದು ಘೋಷಣೆ ಮಾಡಬೇಕು ಹಾಗೂ ಬಿಬಿಎಂಪಿಗೆ ಮುಂದಿನ 3 ತಿಂಗಳಲ್ಲಿ ಚುನಾವಣೆ ನಡೆಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ದೇಶದಲ್ಲಿ ಈಗಾಗಲೇ ನಗರ ಪಾಲಿಕೆಗಳನ್ನು ವಿಭಜನೆ ಮಾಡಿರುವ ನಗರಗಳಲ್ಲಿ ಆಡಳಿತ ವಿಫಲವಾಗಿದೆ. ಬೆಂಗಳೂರು ನಗರಕ್ಕೆ ಈವರೆಗೂ ಸರಿಯಾದ ರೀತಿಯಲ್ಲಿ ಗಡಿಗಳನ್ನು ಗುರುತಿಸಲಾಗಿಲ್ಲ. ಇನ್ನು ಏಳು ನಗರ ಪಾಲಿಕೆಗಳಿಗೆ ಗಡಿಗಳನ್ನು ಗುರುತಿಸುವ ಸಂಬಂಧ ಈವರೆಗೂ ಅಧಿಸೂಚನೆ ಹೊರಡಿಸಿಲ್ಲ. ಗಡಿಗಳನ್ನು ಗುರುತಿಸುವ ಪ್ರಕ್ರಿಯೆಯು ಚುನಾವಣೆಗಳನ್ನು ಮುಂದೂಡುವ ಹುನ್ನಾರವಾಗಿದೆ. ಜಿಬಿಎಗೆ ಒಬ್ಬರು ಮುಖ್ಯ ಆಯುಕ್ತರು ಮತ್ತು ಇತರ ಪಾಲಿಕೆಗಳಿಗೆ ಆಯುಕ್ತರನ್ನು ನೇಮಕ ಮಾಡಲಾಗುತ್ತಿದೆ. ಆದರೆ, ಜನರಿಂದ ಆಯ್ಕೆಯಾಗುವ ಮೇಯರ್‌ಗಳು ಹಾಗೂ ಸದಸ್ಯ ಮುಖ್ಯ ಆಯುಕ್ತರ ಅಧೀನ ಸ್ಥಾನದಲ್ಲಿರಲಿದ್ದು, ತಮ್ಮ ಅಧಿಕಾರವನ್ನು ಚಲಾಯಿಸುವುದಕ್ಕೆ ಅವಕಾಶವಿರುವುದಿಲ್ಲ. ಇದರಿಂದ, ಮುಖ್ಯ ಆಯುಕ್ತರ ನೇಮಕ ಅಸಾಂವಿಧಾನಿಕವಾಗಿರಲಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಅರ್ಜಿದಾರರ ಆಕ್ಷೇಪವೇನು?
• ಸ್ಥಳೀಯ ಸಂಸ್ಥೆಗೆ ಇದ್ದಂತಹ ತೆರಿಗೆ ವಿಧಿಸುವ ಪ್ರಾಧಿಕಾರದ ಸ್ಥಾನಮಾನವನ್ನೂ ಸರ್ಕಾರ ಕಸಿದುಕೊಳ್ಳುತ್ತಿದೆ. ಇದರಿಂದ, ಸ್ಥಳೀಯ ಸಂಸ್ಥೆ ಆರ್ಥಿಕ ಸ್ವಾತಂತ್ರ್ಯ ಕಳೆದುಕೊಂಡು ದುರ್ಬಲಗೊಳ್ಳಲಿದೆ.

• ಪಾಲಿಕೆ ಸದಸ್ಯರನ್ನು ಪಾಲಿಕೆಯ ಅಭಿವೃದ್ಧಿಯ ಉದ್ದೇಶಕ್ಕಾಗಿ ಆಯ್ಕೆ ಮಾಡಲಾಗುತ್ತದೆ. ಆದರೆ, ದೇಶ ಮತ್ತು ರಾಜ್ಯಕ್ಕೆ ಸಂಬಂಧಿಸಿದ ಶಾಸನಗಳನ್ನು ರಚನೆ ಮಾಡುವುದಕ್ಕೆ ಆಯ್ಕೆ ಯಾದಂತಹ ಶಾಸಕರ ಮತ್ತು ಸಂಸದರರನ್ನು ಜಿಬಿಎ ಕಾರ್ಯಚಟುವಟಿಕೆಗಳಲ್ಲಿ ಸೇರಿಸಿ ಅಧಿಕಾರ ನೀಡಲಾಗುತ್ತಿದೆ.

• ಪಾಲಿಕೆ ಯಾವುದೇ ಯೋಜನೆ ರೂಪಿಸಬೇಕಾದರೂ, ಸರ್ಕಾರ ಮತ್ತು ಜಿಬಿಎ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ. ಈ ಬೆಳವಣಿಗೆ ಪ್ರಜಾಪ್ರಭುತ್ವ ತತ್ವಗಳಿಗೆ ತದ್ವಿರುದ್ಧವಾಗಿರಲಿದ್ದು, ಹಲ್ಲು ಕಿತ್ತಂತಾಗಲಿದೆ.

• ಕೆಎಂಸಿ ಕಾಯ್ದೆ ಪ್ರಕಾರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಸದಸ್ಯರು ಮಾತ್ರ ಪಾಲಿಕೆ ಸದಸ್ಯರಾಗುವುದಕ್ಕೆ ಅರ್ಹರಾಗಿರುತ್ತಾರೆ. ಆದರೆ, ಜಿಬಿಎಗೆ ಈ ಮಿತಿ ಇರುವುದಿಲ್ಲ.

• ಪದನಿಮಿತ್ತ ಸದಸ್ಯರು ಸ್ಥಳೀಯರೇ ಇರಬೇಕು ಎಂದೇನಿಲ್ಲ. ಬೆಂಗಳೂರಿನ ಹೊರ ಭಾಗದ ಜನ ಪ್ರತಿನಿಧಿಗಳು ಇಲ್ಲಿ ಸದಸ್ಯರಾಗಲಿದ್ದು, ಬಿಬಿಎಂಪಿ ಕಾಯ್ದೆಯ ಉಲ್ಲಂಘನೆಯಾಗಲಿದೆ.

• ಜಿಬಿಎ ವ್ಯಾಪ್ತಿಯಲ್ಲಿ ದೊಡ್ಡ ದೊಡ್ಡ ಮೂಲ ಸೌಲಭ್ಯ ಯೋಜನೆಗಳು ಜಾರಿಗೆ ಸದಸ್ಯರು ಮತ್ತು ಮೇಯರ್‌ಗಳ ಅಭಿಪ್ರಾಯ ಇಲ್ಲವಾಗಲಿದೆ. ಬದಲಿಗೆ ಜಿಬಿಎ ನಿರ್ಧಾರ ತೆಗೆದುಕೊಳ್ಳಲಿದ್ದು, ಸ್ಥಳೀಯರ ಅಭಿಪ್ರಾಯಕ್ಕೆ ಬೆಲೆ ಇಲ್ಲದಂತಾಗಲಿದೆ. ಇದರಿಂದ, ಕಳಪೆ ಮೂಲ ಸೌಲಭ್ಯಕ್ಕೆ ಕಾರಣವಾಗಲಿದ್ದು, ಮುಂದೆ ಅನಾಹುತಗಳು ಎದುರಿಸಬೇಕಾಗುತ್ತದೆ.

• ಜಿಬಿಎ ಪ್ರಕಾರ ಬೆಂಗಳೂರು ನಗರವನ್ನು ಏಳು ನಗರ ಪಾಲಿಕೆಗಳನ್ನಾಗಿ ಮಾಡುವ ಉದ್ದೇಶವನ್ನು ಹೊಂದಿದ್ದು, ಇವುಗಳನ್ನು ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ದಿ ಉಸ್ತುವಾರಿ ಹೊಂದಿರುವ ಸಚಿವರ ಅಧ್ಯಕ್ಷತೆಯಲ್ಲಿ ನಿರ್ವಹಣೆ ಆಗಲಿದೆ.

Related Articles

Comments (0)

Leave a Comment