‘ಸುಪ್ರೀಂಕೋರ್ಟ್ ಆಫ್ ಕರ್ನಾಟಕ’ ನಕಲಿ ಖಾತೆ; ಸಾಮಾಜಿಕ ಮಾಧ್ಯಮಗಳ ದುರ್ಬಳಕೆ ತೋರಿಸಿದ ಎಸ್ಜಿ ತುಷಾರ್ ಮೆಹ್ತಾ
- by Ramya B T
- July 19, 2025
- 77 Views

ಬೆಂಗಳೂರು: ‘ಸುಪ್ರೀಂಕೋರ್ಟ್ ಆಫ್ ಕರ್ನಾಟಕ’ ಹೆಸರಿನಲ್ಲಿ ನಕಲಿ ಖಾತೆ ತೆರೆಯಲು ಎಕ್ಸ್ ಕಾರ್ಪ್ (ಟ್ವಿಟರ್) ಅನುಮತಿ ನೀಡಿದೆ ಎಂಬ ಉದಾಹರಣೆ ನೀಡುವ ಮೂಲಕ ಸಾಮಾಜಿಕ ಮಾಧ್ಯಮ ಹೇಗೆ ದುರುಪಯೋಗವಾಗುತ್ತಿದೆ ಎಂಬುದನ್ನು ಹೈಕೋರ್ಟ್ಗೆ ಮನವರಿಕೆ ಮಾಡಿಕೊಡಲು ಯತ್ನಿಸಿದ ಸಾಲಿಸಿಟರ್ ಜನರಲ್ (ಎಸ್ಜಿ) ತುಷಾರ್ ಮೆಹ್ತಾ, ಈ ರೀತಿ ಸಾಮಾಜಿಕ ಮಾಧ್ಯಮ ದುರ್ಬಳಕೆಯಾಗುವುದನ್ನು ನಿಯಂತ್ರಿಸುವುದು ಅತ್ಯಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
ಮಾಹಿತಿ ನಿರ್ಬಂಧಿಸುವ ಸಂಬಂಧ ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ಆದೇಶಿಸಲು ಕೇಂದ್ರ ಸರ್ಕಾರ ಸಹಯೋಗ್ ಪೋರ್ಟಲ್ ಆರಂಭಿಸಿರುವ ಕ್ರಮ ಹಾಗೂ ಅದನ್ನು ಬಳಸುತ್ತಿರುವುದನ್ನು ಪ್ರಶ್ನಿಸಿ ಎಕ್ಸ್ ಕಾರ್ಪ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಅನಾಮಧೇಯತೆಯ ಅಪಾಯಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸಂಪಾದಕೀಯ ಹೊಣೆಗಾರಿಕೆಯ ಕೊರತೆ ಇದೆ. ಆಡಳಿತಾತ್ಮಕ ಅನುಕೂಲಕ್ಕಾಗಿ ಸಹಯೋಗ್ ಪೋರ್ಟಲ್ ಸ್ಥಾಪಿಸಲಾಗಿದೆ. ಇದರಿಂದ, ಎಲ್ಲ ಆನ್ಲೈನ್ ಮಧ್ಯಸ್ಥಿಕೆ ಸಂಸ್ಥೆಗಳು ತಮ್ಮ ವೇದಿಕೆಗಳಲ್ಲಿ ಯಾವುದೇ ಕಾನೂನುಬಾಹಿರ ವಿಷಯದ ಕುರಿತು ಅಧಿಕೃತ ಅಧಿಕಾರಿಗಳಿಂದ ಬರುವ ಸೂಚನೆಗಳ ಮೇಲೆ ಸುಲಭವಾಗಿ ನಿಗಾ ಇಡಬಹುದು. ಆದರೆ, ಈ ಕಾರ್ಯವಿಧಾನವನ್ನು ಎಕ್ಸ್ ಕಾರ್ಪ್ ಏಕೆ ಪ್ರಶ್ನಿಸುತ್ತಿದೆ ಎಂದು ಆಕ್ಷೇಪವೆತ್ತಿದರು.
ಸಂವಿಧಾನದ ಪರಿಚ್ಛೇದ 19(2)ರ ಅಡಿಯಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಸಮಂಜಸವಾದ ನಿರ್ಬಂಧಗಳು ‘ಸ್ಥಿತಿಸ್ಥಾಪಕ’ ಪರಿಕಲ್ಪನೆಯಾಗಿದ್ದು, ತಾಂತ್ರಿಕವಾಗಿ ಮುಂದುವರಿದ ಇಂದಿನ ಯುಗದಲ್ಲಿ 19(1)(ಎ) ಪರಿಚ್ಛೇದದ ವ್ಯಾಪ್ತಿಯೊಂದಿಗೆ ಇದು ವಿಕಸನಗೊಳ್ಳಬೇಕು ಎಂದು ಮೆಹ್ತಾ ಹೇಳಿದರು.
ಎಕ್ಸ್ನಲ್ಲಿತ್ತು ‘ಸುಪ್ರೀಂಕೋರ್ಟ್ ಆಫ್ ಕರ್ನಾಟಕ’ ಖಾತೆ:
ಕಾನೂನುಬಾಹಿರ ವಿಷಯವನ್ನು ಪರಿಶೀಲಿಸಲು ಸಹಯೋಗ್ ಪೋರ್ಟಲ್ ಕನಿಷ್ಠ ಕ್ರಮವಾಗಿದೆ. ಅಂತರ್ಜಾಲದ ವಿಕಸನದೊಂದಿಗೆ ಪ್ರಸ್ತುತಪಡಿಸಲಾದ ಹೊಸ ಸಮಸ್ಯೆಗಳನ್ನು ನಿಭಾಯಿಸಲು ಇಂತಹ ಹೊಸ ಪರಿಹಾರ ಅತ್ಯಗತ್ಯವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಖಾತೆ ಸೃಷ್ಟಿಸುವುದು ಅತ್ಯಂತ ಸುಲಭವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ ಮೆಹ್ತಾ, ಅದಕ್ಕೆ ಉದಾಹರಣೆಯಾಗಿ ಎಕ್ಸ್ ಜಾಲತಾಣದಲ್ಲಿ ‘ಸುಪ್ರೀಂಕೋರ್ಟ್ ಆಫ್ ಕರ್ನಾಟಕ’ ಎಂಬ ನಕಲಿ ಖಾತೆ ಇರುವ ಸ್ಕ್ರೀನ್ ಶಾಟ್ ತೋರಿಸಿದರು. ಎಕ್ಸ್ ಕಾರ್ಪ್ ಪರ ವಾದ ಮಂಡಿಸಿದ ಹಿರಿಯ ವಕೀಲ ಕೆ.ಜಿ. ರಾಘವನ್, ಸುಪ್ರೀಂಕೋರ್ಟ್ ಆಫ್ ಕರ್ನಾಟಕ ಹೆಸರಿನ ಖಾತೆಯನ್ನು ಪರಿಶೀಲನೆ ನಡೆಸಿ, ಬಳಿಕ ಅದನ್ನು ಅಮಾನತುಗೊಳಿಸಲಾಗಿದೆ ಎಂದರು.
ವಾದ ಮುಂದುವರಿಸಿದ ತುಷಾರ್ ಮೆಹ್ತಾ, ಎಕ್ಸ್ ಕಾರ್ಪ್ ಒಂದು ವಿದೇಶಿ ಸಂಸ್ಥೆಯಾಗಿದೆ. ಅದು ಸಂವಿಧಾನದ 19(1)(ಎ) ಮತ್ತು 21ನೇ ಪರಿಚ್ಛೇದ ಅನುಸಾರ ಹಕ್ಕು ಚಲಾಯಿಸಲಾಗದು. ಆದ್ದರಿಂದ, ಎಕ್ಸ್ ಕಾರ್ಪ್ ಸಲ್ಲಿಸಿರುವ ಈ ಅರ್ಜಿಯು ಊರ್ಜಿತವಾಗುವುದಿಲ್ಲ. ಕಾನೂನುಬಾಹಿರ ವಿಚಾರದ ಮಾಹಿತಿಯನ್ನು ಮಧ್ಯಸ್ಥ ವೇದಿಕೆ ಸಂಸ್ಥೆಗೆ ಒದಗಿಸಲು ಸಹಯೋಗ್ ಪೋರ್ಟಲ್ ರೂಪಿಸಲಾಗಿದೆ. ಅದನ್ನು ತೆಗೆಯಬೇಕೆ ಅಥವಾ ಬೇಡವೇ ಎಂಬುದು ಮಧ್ಯಸ್ಥ ಸಂಸ್ಥೆಗೆ ಬಿಟ್ಟ ವಿಚಾರ ಎಂದು ತಿಳಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಜುಲೈ 25ಕ್ಕೆ ಮುಂದೂಡಿತು.
Related Articles
Thank you for your comment. It is awaiting moderation.
Comments (0)