ಚುನಾವಣೆ ಟಿಕೆಟ್ ಆಮಿಷವೊಡ್ಡಿ ವಂಚಿಸಿದ ಆರೋಪ; ಜು.21ರೊಳಗೆ ₹25 ಲಕ್ಷ ಪಾವತಿಸಲು ಗೋಪಾಲ ಜೋಶಿಗೆ ಹೈಕೋರ್ಟ್ ಗಡುವು

ಬೆಂಗಳೂರು: ಕಳೆದ ಲೋಕಸಭೆ ಚುನಾವಣೆಯಲ್ಲಿ ವಿಜಯಪುರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ 2 ಕೋಟಿ ರೂ. ಹಣ ಪಡೆದು ವಂಚಿಸಿದ ಪ್ರಕರಣದಲ್ಲಿ ವಾಪಸ್ ಕೊಡಬೇಕಾದ ಹಣದಲ್ಲಿ 25 ಲಕ್ಷ ರೂ.ಗಳನ್ನು ಸೋಮವಾರದೊಳಗೆ (ಜುಲೈ 21) ದೂರುದಾರರ ಖಾತೆಗೆ ಜಮೆ ಮಾಡುವಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಸಹೋದರ ಗೋಪಾಲ್ ಜೋಶಿಗೆ ಹೈಕೋರ್ಟ್ ಗಡುವು ನೀಡಿದೆ.

ಪ್ರಕರಣ ಸಂಬಂಧ ವಿಜಯಪುರದ ಮಾಜಿ ಶಾಸಕ ದೇವಾನಂದ ಚವ್ಹಾಣ್ ಪತ್ನಿ ಸುನೀತಾ ಚವ್ಹಾಣ್ ನೀಡಿದ ದೂರು ಆಧರಿಸಿ ದಾಖಲಾಗಿರುವ ಎಫ್‌ಐಆರ್ ಹಾಗೂ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದು ಕೋರಿ ಆರೋಪಿಗಳಾದ ಗೋಪಾಲ್ ಜೋಶಿ, ಪತ್ನಿ ವಿಜಯಲಕ್ಷ್ಮೀ ಜೋಶಿ, ಪುತ್ರ ಅಜಯ್ ಜೋಶಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಒಟ್ಟು 2 ಕೋಟಿ ರೂ. ಹಣದಲ್ಲಿ 50 ಲಕ್ಷ ರೂ. ವಾಪಸ್ ಕೊಡಲಾಗಿದ್ದು, ಬಾಕಿ 1.50 ಕೋಟಿ ರೂ.ಗಳಲ್ಲಿ 25 ಲಕ್ಷ ರೂ.ಗಳನ್ನು 2025ರ ಮಾರ್ಚ್ 25ರೊಳಗೆ ಪಾವತಿಸುವಂತೆ ಅರ್ಜಿದಾರರಿಗೆ ಹೇಳಲಾಗಿತ್ತು. ಇದನ್ನು ಒಪ್ಪಿಕೊಂಡು ಅರ್ಜಿದಾರರ ಪರ ವಕೀಲರು ಪ್ರಮಾಣಪತ್ರ ಸಹ ಸಲ್ಲಿಸಿದ್ದರು. ಇದೇ ಆಧಾರದಲ್ಲಿ ಪ್ರಕರಣಕ್ಕೆ ತಡೆ ನೀಡಿ ಹೊರಡಿಸಲಾಗಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸಲಾಗಿತ್ತು. ಆದರೆ, ಈವರೆಗೆ 25 ಲಕ್ಷ ರೂ. ಪಾವತಿ ಮಾಡಲಾಗಿಲ್ಲ. ಕೋರ್ಟ್ ಆದೇಶ ಪಾಲಿಸಿಲ್ಲ ಎಂದಾದರೆ ಅರ್ಜಿಯನ್ನು ವಜಾಗೊಳಿಸುವುದಾಗಿ ನ್ಯಾಯಪೀಠ ಹೇಳಿತು.

ಬಳಿಕ, ವಕೀಲರ ಮನವಿ ಹಿನ್ನೆಲೆಯಲ್ಲಿ 25 ಲಕ್ಷ ರೂ. ಪಾವತಿಸಲು ಸೋಮವಾರದವರೆಗೆ ಅವಕಾಶ ನೀಡಿದ ನ್ಯಾಯಪೀಠ ಅರ್ಜಿ ವಿಚಾರಣೆ ಮುಂದೂಡಿತು.

Related Articles

Comments (0)

Leave a Comment