ಅಕ್ರಮ ಆಸ್ತಿಗಳಿಕೆ ಆರೋಪ; ಈಶ್ವರಪ್ಪ ವಿರುದ್ಧದ ಎಫ್‌ಐಆರ್‌ಗೆ ತಡೆ ನೀಡಿದ ಹೈಕೋರ್ಟ್

ಬೆಂಗಳೂರು: ಆದಾಯ ಮೀರಿದ ಆಸ್ತಿ ಗಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಪ್ರಕರಣ ರದ್ದು ಕೋರಿ ಕೆ.ಎಸ್‌. ಈಶ್ವರಪ್ಪ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಆರ್‌. ಕೃಷ್ಣ ಕುಮಾರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರಕರಣದ ಎಫ್ಐಆರ್ ಹಾಗೂ ಅದರ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆ ನೀಡಿತು. ಜತೆಗೆ, ಪ್ರತಿವಾದಿಗಳಾದ ಲೋಕಾಯುಕ್ತ ಪೊಲೀಸರು ಹಾಗೂ ಮೂಲ ದೂರುದಾರ ವಕೀಲ ಬಿ. ವಿನೋದ್‌‌ಗೆ ನೋಟಿಸ್‌ ಜಾರಿಗೊಳಿಸಿ, ಅರ್ಜಿ ವಿಚಾರಣೆ ಮುಂದೂಡಿತು.

ಇದಕ್ಕೂ ಮುನ್ನ ಈಶ್ವರಪ್ಪ ಪರ ವಾದ ಮಂಡಿಸಿದ ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ, ಸುಪ್ರೀಂಕೋರ್ಟ್‌ ಆದೇಶದಂತೆ ಪ್ರಾಥಮಿಕ ತನಿಖೆ ನಡೆಸದೇ ಅರ್ಜಿದಾರರ ವಿರುದ್ಧ ಶಿವಮೊಗ್ಗ ಲೋಕಾಯುಕ್ತ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಇದರಿಂದ, ಅರ್ಜಿದಾರರಿಗೆ ಪ್ರಕರಣದಲ್ಲಿ ಬಂಧನದ ಭೀತಿ ಇದೆ. ಆದ್ದರಿಂದ, ಎಫ್‌ಐಆರ್‌ಗೆ ತಡೆ ನೀಡಬೇಕೆಂದು ಕೋರಿದರು.

ಪ್ರಕರಣವೇನು?
ಮಾಜಿ ಸಚಿವ ಈಶ್ವರಪ್ಪ, ಅವರ ಪುತ್ರ ಕೆ.ಇ. ಕಾಂತೇಶ್‌ ಹಾಗೂ ಕಾಂತೇಶ್‌ ಪತ್ನಿ ಶಾಲಿನಿ ವಿರುದ್ಧ ಆದಾಯಕ್ಕೂ ಮೀರಿದ ಅಕ್ರಮ ಆಸ್ತಿಗಳಿಕೆ ಆರೋಪ ಹೊರಿಸಿ ಶಿವಮೊಗ್ಗ ಮೂಲದ ವಕೀಲ ಬಿ. ವಿನೋದ್‌ ಲೋಕಾಯುಕ್ತ ಪೊಲೀಸರ ಮುಂದೆ ದೂರು ದಾಖಲಿಸಿದ್ದರು. ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್‌ ಸಲ್ಲಿಸಿದ್ದರು. ಅದನ್ನು ಪ್ರಶ್ನಿಸಿ ವಿನೋದ್‌ ನ್ಯಾಯಾಲಯದ ಮೊರೆ ಹೋಗಿದ್ದರು.

ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಮರು ತನಿಖೆ ಮಾಡಿ ವರದಿ ಸಲ್ಲಿಸುವಂತೆ 2025ರ ಏಪ್ರಿಲ್ 5ರಂದು ಆದೇಶಿಸಿತ್ತು. ಆ ಆದೇಶ ಆಧರಿಸಿ ಶಿವಮೊಗ್ಗ ಲೋಕಾಯುಕ್ತ ಪೊಲೀಸರು ಜುಲೈ 2ರಂದು ಹೊಸದಾಗಿ ಎಫ್‌ಐಆರ್‌ ದಾಖಲಿಸಿದ್ದರು. ಇದರಿಂದ, ಎಫ್ಐಆರ್ ರದ್ದು ಕೋರಿ ಈಶ್ವರಪ್ಪ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

Related Articles

Comments (0)

Leave a Comment