ವಕೀಲರ ಸಂಘಕ್ಕೆ ₹5 ಕೋಟಿ ಅನುದಾನ, ಇಬ್ಬರು ವಕೀಲರಿಗೆ ಕೆಂಪೇಗೌಡ ಪ್ರಶಸ್ತಿ; ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ಬೆಂಗಳೂರು ವಕೀಲರ ಸಂಘದ (ಎಎಬಿ) ಉಪಯೋಗಕ್ಕಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ (ಜಿಬಿಎ) 5 ಕೋಟಿ ರೂ. ಅನುದಾನ ನೀಡಲಾಗುವುದು. ಕೆಂಪೇಗೌಡ ಜಯಂತಿ ಆಚರಣೆಗಾಗಿ ಪ್ರತಿ ವರ್ಷ 5 ಲಕ್ಷ ರೂ. ಬಿಡುಗಡೆ ಮಾಡುವ ಜತೆಗೆ, ಪ್ರತಿ ವರ್ಷ ಕೆಂಪೇಗೌಡ ಪ್ರಶಸ್ತಿಯನ್ನು ಕಡ್ಡಾಯವಾಗಿ ಇಬ್ಬರು ವಕೀಲರಿಗೆ ನೀಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಘೋಷಿಸಿದರು.

ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿರುವ ವಕೀಲರ ಭವನದಲ್ಲಿ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ನಾಡಪ್ರಭು ಕೆಂಪೇಗೌಡ ಜಯಂತಿ’ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ವಕೀಲರ ಸಂಘದ ಕಟ್ಟಡಕ್ಕೆ ಒಂದು ವಾರದೊಳಗೆ ಸೋಲಾರ್ ಗ್ರಿಡ್ ವ್ಯವಸ್ಥೆಗೆ ಪರಿಶೀಲನೆ ನಡೆಸಲಾಗುವುದು. ಇದರ ಬಗ್ಗೆ ಹಿಂದೆಯೇ ಮಾತುಕಥೆಯಾಗಿತ್ತು. ಅಧಿಕಾರಿಗಳ ಹಿಂದೆ ಬಿದ್ದು ನೀವು ಕೆಲಸ ಮಾಡಿಸಿಕೊಳ್ಳಬೇಕು. ಜತೆಗೆ, ಈ ಸಂಸ್ಥೆಗೆ ಭೂಮಿ ಬೇಕು ಎಂಬ ಬೇಡಿಕೆ ಇಟ್ಟಿದ್ದೀರಿ. ಅದಕ್ಕಾಗಿ 10 ಎಕರೆ ಕಂದಾಯ ಭೂಮಿಯ ಲಭ್ಯತೆ ನೋಡಿಕೊಂಡು ನೀಡಲಾಗುವುದು. ನಗರದ 20 ಕಿ.ಮೀ. ವ್ಯಾಪ್ತಿಯಲ್ಲಿ ಭೂಮಿ ಇದ್ದರೆ ನೀವೇ ಹುಡುಕಿ, ನಾವು ನೀಡುವ ಹಣವನ್ನು ನಿಮಗೆ ಉಪಯೋಗವಾಗುವ ಉತ್ತಮ ಕೆಲಸಗಳಿಗೆ ವಿನಿಯೋಗಿಸಿ ಎಂದರು.

ಕೆಂಪೇಗೌಡರ ವಿಚಾರಧಾರೆ ಉಳಿವಿಗೆ ಜಿಬಿಎ:
ಬೆಂಗಳೂರು ಯೋಜಿತ ನಗರವಲ್ಲ. ಆದರೆ, ಕೆಂಪೇಗೌಡರು ಅಂದೇ ಯೋಜಿತವಾಗಿ ನಗರ ಕಟ್ಟಿದವರು. ಕೃಷ್ಣದೇವರಾಯ ಅವರ ಚಿಂತನೆಗಳನ್ನು ಇಲ್ಲಿ ಅಳವಡಿಸಿದರು. ವ್ಯಾಪಾರ ವಹಿವಾಟುಗಳನ್ನು ಬೆಳೆಸಲು ಈ ಊರನ್ನು ಕಟ್ಟಿದರು. ಅವರ ಆಚಾರ-ವಿಚಾರಗಳನ್ನು ಉಳಿಸಲು ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ದ ಮೂಲಕ ಮುಂದಡಿ ಇಟ್ಟಿದ್ದೇವೆ. ಮುಂದಿನ ದಿನಗಳಲ್ಲಿ 1 ಲಕ್ಷ ಕೋಟಿ ರೂ. ಯೋಜನೆಗಳನ್ನು ಬೆಂಗಳೂರಿನ ಅಭಿವೃದ್ದಿಗೆ ಖರ್ಚು ಮಾಡುವ ಆಲೋಚನೆ ಇದೆ ಎಂದು ಉಪಮುಖ್ಯಮಂತ್ರಿಗಳು ಹೇಳಿದರು.

ಕೆಂಪೇಗೌಡ ಜಯಂತಿ ಹಾಗೂ ಪ್ರಾಧಿಕಾರ ಆರಂಭಿಸಿದವರೇ ನಾವು. ಪ್ರತಿ ಊರಿನಲ್ಲೂ ಕೆಂಪೇಗೌಡ ಜಯಂತಿ ಮಾಡಬೇಕು ಎಂದು ಹೇಳಿದವರೂ ನಾವೇ. ಬೆಂಗಳೂರು ನಗರ ಅಭಿವೃದ್ದಿ ಇಲಾಖೆಯನ್ನು ಛಲದಿಂದ ತೆಗೆದುಕೊಂಡಿದ್ದೇನೆ. ಈ ನಗರದ ಬಗ್ಗೆ ನನ್ನದೇ ಆದ ಕನಸುಗಳಿವೆ. ನಾನು ಹುಟ್ಟುತ್ತಾ ಕೃಷಿಕ, ನಂತರ ಉದ್ಯಮಿ, ಆಕಸ್ಮಿಕವಾಗಿ ಶಿಕ್ಷಣ ಪ್ರೇಮಿ, ಆಯ್ಕೆಯಿಂದ ರಾಜಕಾರಣಿ. ರಾಜಕಾರಣಿ ಆಗಲೇ ಬೇಕು ಎಂದು ಶಾಲಾ ದಿನಗಳಲ್ಲೇ ಕನಸು ಕಂಡವನು. ಅಲ್ಲಿಂದ ಸಂಘಟನೆ ಮಾಡಿಕೊಂಡು ಬೆಳೆಸಿದ್ದೇನೆ ಎಂದರು.

ಅಮೆರಿಕ, ಚೀನಾದಲ್ಲಿ ಐಫೋನ್ ತಯಾರು ಮಾಡಲು ಅಧಿಕ ವೆಚ್ಚವಾಗುತ್ತದೆ. ಆದ ಕಾರಣಕ್ಕೆ ಇಲ್ಲಿಗೆ ಬಂದು ತಯಾರು ಮಾಡುತ್ತಿದ್ದಾರೆ. ಇದರಿಂದ, 50 ಸಾವಿರ ಜನರಿಗೆ ಉದ್ಯೋಗ ದೊರೆತಿದೆ. ಇಲ್ಲಿನ ತಾಂತ್ರಿಕ ನೈಪುಣ್ಯತೆಯೂ ಚೆನ್ನಾಗಿ ಇರುವ ಕಾರಣಕ್ಕೆ ಅವರು ಬಂದಿದ್ದಾರೆ ಎಂದು ತಿಳಿಸಿದರು.

ಬೆಂಗಳೂರಿನ ಜನಸಂಖ್ಯೆ 1.40 ಕೋಟಿ ದಾಟಿದೆ. ವಾಹನಗಳ ಸಂಖ್ಯೆಯೂ ಹೆಚ್ಚಾಗಿದೆ. ಆದರೆ, ರಸ್ತೆಯ ಸಾಮರ್ಥ್ಯ ಮಾತ್ರ ಅಷ್ಟೇ ಇದೆ. ಇತ್ತೀಚೆಗೆ ಯಾರೋ ಮೆಟ್ರೋ ಹಳದಿ ಮಾರ್ಗ ಆಗಿಲ್ಲ ಎಂದು ಪ್ರತಿಭಟನೆ ಮಾಡುತ್ತಿದ್ದರು. ಅದರ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಕೆಲವರು ಚಟಕ್ಕೆ ಮಾಧ್ಯಮಗಳಲ್ಲಿ ಬರುತ್ತೇವೆ ಎಂದು ಏನೋ ಮಾಡುತ್ತಾರೆ ಎಂದು ಹೇಳಿದರು.

ಖುರ್ಚಿ ಸಿಗುವುದೇ ಕಷ್ಟ, ಸಿಕ್ಕಾಗ ತೆಪ್ಪಗೆ ಕುಳಿತುಕೊಳ್ಳಬೇಕು:
ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ವೇಳೆ ಸಭಾಂಗಣದ ಇಕ್ಕೆಲಗಳಲ್ಲಿ ನಿಂತಿದ್ದ ವಕೀಲರನ್ನು ಉದ್ದೇಶಿಸಿ, ಇಷ್ಟೊಂದು ಖುರ್ಚಿಗಳಿವೆ ಬನ್ನಿ ಕುಳಿತುಕೊಳ್ಳಿ. ಖುರ್ಚಿ ಸಿಗುವುದೇ ಕಷ್ಟ, ಸಿಕ್ಕಾಗ ತೆಪ್ಪಗೆ ಬಂದು ಕುಳಿತುಕೊಳ್ಳಬೇಕು. ನಿಮ್ಮನ್ನು ನೋಡಿದರೆ ತ್ಯಾಗಿಗಳ ರೀತಿ ಕಾಣುತ್ತಿದ್ದೀರಿ ಎಂದು ಡಿಸಿಎಂ ಚಟಾಕಿ ಹಾರಿಸಿದರು.

ವಕೀಲರ ಬಳಿ ನ್ಯಾಯ ಕೊಡಿಸಿ ಎಂದು ಜನ ಬರುತ್ತಾರೆ. ನಿಮ್ಮ ಆತ್ಮತೃಪ್ತಿಗೆ ಕೆಲಸ ಮಾಡಬೇಕು. ನಿಮ್ಮ ಬಳಿ ಬಂದ ಕಕ್ಷಿದಾರನಿಗೆ ಸಂತೋಷವಾಗುವಂತೆ ಕೆಲಸ ಮಾಡಬೇಕು. ಕಪ್ಪು ಕೋಟು ಹಾಕಿದ್ದೇನೆ ಎಂದು ಕಾನೂನನ್ನು ಕೈಗೆತ್ತಿಕೊಳ್ಳಬೇಡಿ. ನಿಮ್ಮ ಹಾಗೂ ಪೊಲೀಸರ ನಡುವೆ ಆಗಾಗ್ಗೆ ಸಂಘರ್ಷವಾಗುತ್ತಾ ಇರುತ್ತದೆ. ಈ ಪೋಲೀಸರು ಮೈಮೇಲೆ ಖಾಕಿ ಬಂದ ತಕ್ಷಣ ದೇವರು ಬಂದಂತೆ ಆಡುತ್ತಾರೆ ಎಂದರು.

ಬೆಂಗಳೂರು ವಕೀಲರ ಸಂಘ 25 ಸಾವಿರ ಸದಸ್ಯತ್ವ ಹೊಂದಿದೆ ಎಂದು ಕೇಳಲ್ಪಟ್ಟೆ. ನೀವು ಮನಸ್ಸು ಮಾಡಿದರೆ ಬೆಂಗಳೂರಿನಲ್ಲಿ ಯಾವ ಪಕ್ಷವನ್ನು ಕೂಡ ಅಧಿಕಾರಕ್ಕೆ ತರಬಹುದು ಅಥವಾ ಬೀಳಿಸಬಹುದು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ವಕೀಲನಾಗಲು ಸಾಧ್ಯವಾಗಲಿಲ್ಲ, ಮಗನಿಂದ ಆಸೆ ಈಡೇರಿಸಿಕೊಂಡೆ:
ನನ್ನ ತಂದೆಗೆ ನನ್ನನ್ನು ಇಂಜಿನಿಯರ್ ಮಾಡಬೇಕು ಎನ್ನುವ ಆಸೆ. ಆದರೆ, ನನಗೆ ವಕೀಲನಾಗುವ ಆಸೆ. ಚಿನ್ನ, ಬೆಳ್ಳಿ ಮನೆಯಲ್ಲಿಯೇ ಇರುವುದು ಸಾಮಾನ್ಯ. ತುರ್ತು ಪರಿಸ್ಥಿತಿ ಸಮಯದಲ್ಲಿ ನಮ್ಮ ಮನೆ ಮೇಲೆ ಅಧಿಕಾರಿಗಳು ರೈಡ್ ಮಾಡಿದ್ದರು. ರೈಡ್ ಮಾಡಿದ ಅಧಿಕಾರಿ ಇಂಜಿನಿಯರ್. ಅದಕ್ಕೆ ನಮ್ಮ ತಂದೆಗೆ ಓದಿಸಬೇಕು ಎನ್ನುವ ಛಲ. ಆದರೆ, ಅವರ ಆಸೆ ಕೈಗೂಡಲಿಲ್ಲ ಎಂದರು.

ನಾನು ಕೊನೆಯ ವರ್ಷದ ಪದವಿ ಓದುವಾಗಲೇ ದೇವೇಗೌಡರ ವಿರುದ್ದ ಚುನಾವಣೆಗೆ ನಿಲ್ಲುವ ಅವಕಾಶ ಬಂದಿತು. ನಾನು ಇಂಜಿನಿಯರ್ ಆಗಲು ಸಾಧ್ಯವಾಗಲಿಲ್ಲ. ಆದರೆ, ಗ್ಲೋಬಲ್ ಅಕಾಡೆಮಿ ಎನ್ನುವ ತಾಂತ್ರಿಕ ವಿದ್ಯಾಲಯ ಪ್ರಾರಂಭ ಮಾಡಿದ್ದೇನೆ. ನೂರಾರು ಜನ ಇಂಜಿನಿಯರ್‌ಗಳನ್ನು ತಯಾರು ಮಾಡುತ್ತಿದ್ದೇನೆ. ನನಗೆ ವಕೀಲನಾಗುವ ಅವಕಾಶ ಸಿಗಲಿಲ್ಲ. ಅದಕ್ಕೆ ಮಗನನ್ನು ವಕೀಲನನ್ನಾಗಿ ಮಾಡಿದ್ದೇನೆ ಎಂದರು.

ನಾಲ್ಕು ‘ಕೆ’ಗಳನ್ನು ಸದಾ ನೆನಪಿಸಿಕೊಳ್ಳಬೇಕು:
ಉದಾರ ಮನಸ್ಸಿನಿಂದ ಬೆಂಗಳೂರನ್ನು ಕಟ್ಟಿದವರು ಕೆಂಪೇಗೌಡರು. ನಮ್ಮ ಮೂಲವನ್ನು ಮರೆತರೆ ಎತ್ತರಕ್ಕೆ ಬೆಳೆಯಲು ಸಾಧ್ಯವಿಲ್ಲ. ಬೆಂಗಳೂರು ಕಟ್ಟಿದ ಕೆಂಪೇಗೌಡರು, ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ ಅವರು, ಕನ್ನಡ ಸಾಹಿತ್ಯವನ್ನು ಬೆಳಗಿದ ಕುವೆಂಪು ಅವರು ಹಾಗೂ ವಿಕಾಸಸೌಧ ಕಟ್ಟಿದ ಎಸ್.ಎಂ ಕೃಷ್ಣ ಅವರು. ಈ ನಾಲ್ಕೂ ‘ಕೆ’ಗಳನ್ನು ನಾವು ಮರೆಯಬಾರದು ಎಂದರು.

ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ಚಿತ್ರನಟಿ ಪ್ರೇಮಾ, ಪ್ರೊ. ಎಂ. ಕೃಷ್ಣೇಗೌಡ, ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಚ್.ವಿ. ಪ್ರವೀಣ್ ಗೌಡ, ಉಪಾಧ್ಯಕ್ಷ ಸಿ.ಎಸ್. ಗಿರೀಶ್ ಕುಮಾರ್, ಖಜಾಂಚಿ ಶ್ವೇತಾ ರವಿಶಂಕರ್ ಮತ್ತಿತರರು ಉಪಸ್ಥಿತರಿದ್ದರು.

Related Articles

Comments (0)

Leave a Comment