ದೇವರ ಪೂಜೆ ಮಾಡದಂತೆ ತಡೆದು, ಎಸ್‌ಸಿ ಸಮುದಾಯದವರ ಮೇಲೆ ಹಲ್ಲೆ; 9 ಅಪರಾಧಿಗಳ ಶಿಕ್ಷೆ ಎತ್ತಿ ಹಿಡಿದ ಹೈಕೋರ್ಟ್

ಬೆಂಗಳೂರು: ಊರ ಜಾತ್ರೆಯ ವೇಳೆ ದೇವಾಲಯದ ಬಳಿ ತಂಬಿಟ್ಟಿನಾರತಿ ಬೆಳಗಲು ಬಂದಿದ್ದ ಪರಿಶಿಷ್ಟ ಜಾತಿಗೆ ಸೇರಿದ ಜನರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಲ್ಲದೇ, ಇಡೀ ಹರಿಜನ ಕಾಲನಿಯನ್ನು ಪೆಟ್ರೋಲ್ ಸುರಿದು ಭಸ್ಮ ಮಾಡುವುದಾಗಿ ಬೆದರಿಕೆ ಹಾಕಿದ್ದ 9 ಮಂದಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ 6 ತಿಂಗಳ ಕಠಿಣ ಜೈಲು ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ಎಸ್‌ಸಿ ಸಮುದಾಯಕ್ಕೆ ಸೇರಿದವರ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದ ಆರೋಪದಲ್ಲಿ ವಿಚಾರಣಾ ನ್ಯಾಯಾಲಯ ವಿಧಿಸಿರುವ ಶಿಕ್ಷೆ ರದ್ದು ಕೋರಿ ಮದ್ದೂರು ತಾಲೂಕಿನ ಬಾಣಗಹಳ್ಳಿಯ ಕೆಂಚೇಗೌಡ, ಮಹಾದೇವ, ನಾಗರಾಜು, ಹೊನ್ನಲಗೆರೆ ಗ್ರಾಮದ ಆನಂದ್, ದೇವರಾಜು, ರವಿ, ಕೆಂಪೇಗೌಡ, ರವಿಕುಮಾರ್ ಮತ್ತು ನಂದೀಶ್ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ಇತ್ತೀಚೆಗೆ ವಜಾಗೊಳಿಸಿರುವ ನ್ಯಾಯಮೂರ್ತಿ ಎಂ.ಜಿ. ಉಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಆದೇಶ ಮಾಡಿದೆ.

ಹೈಕೋರ್ಟ್ ಹೇಳಿದ್ದೇನು?
ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಗಳನ್ನು ಮೇಲ್ಮನವಿದಾರರು ಅಶ್ಲೀಲ ಭಾಷೆಯಲ್ಲಿ ನಿಂದಿಸಿದ್ದಾರೆ. ಉದ್ದೇಶಪೂರ್ವಕವಾಗಿ ಅವಮಾನ ಮಾಡಿದ್ದಾರೆ. ಪೂಜೆ ಮಾಡಲು ದೇವಾಲಯ ಪ್ರವೇಶಿಸುವುದನ್ನು ತಡೆದಿದ್ದಲ್ಲದೆ ಅವರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ. ಇದಕ್ಕೆ ಪ್ರತ್ಯಕ್ಷದರ್ಶಿಗಳ ಸಾಕ್ಷ್ಯಗಳಿವೆ. ಘಟನೆಯ ಬಳಿಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ವೈದ್ಯರು ಗಾಯದ ಪ್ರಮಾಣಪತ್ರವನ್ನೂ ನೀಡಿದ್ದಾರೆ. ಆರೋಪಿಗಳೇ ಕೃತ್ಯವೆಸಗಿದ್ದು, ಅವರೇ ದೋಷಿಗಳೆಂದು ಪ್ರಾಸಿಕ್ಯೂಷನ್ ಸಂಶಯಾತೀತವಾಗಿ ಸಾಬೀತುಪಡಿಸಿದೆ. ಪ್ರಕರಣದ ಸಾಕ್ಷಾಧಾರಗಳನ್ನು ಪರಿಗಣಿಸಿ ವಿಚಾರಣಾ ನ್ಯಾಯಾಲಯ ಮೇಲ್ಮನವಿದಾರರಿಗೆ ಸೂಕ್ತ ರೀತಿಯಲ್ಲಿ ಶಿಕ್ಷೆ ವಿಧಿಸಿ, ಆದೇಶಿಸಿದೆ. ಈ ಆದೇಶದಲ್ಲಿ ಮಧ್ಯಪ್ರವೇಶಿಸುವ ಅವಶ್ಯಕತೆ ಕಂಡುಬರುತ್ತಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.

ಪ್ರಕರಣವೇನು?
ಮದ್ದೂರು ತಾಲೂಕಿನ ಕೆ.ಎಂ. ದೊಡ್ಡಿಯ ಎಸ್​.ಐ ಹೊನಲಗೆರೆಯ ಬೇವಿನಮ್ಮ ದೇವಸ್ಥಾನದ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆದಿತ್ತು. ಈ ಸಂದರ್ಭದಲ್ಲಿ ಗ್ರಾಮದಲ್ಲಿ ಹಿಂದಿನಿಂದ ನಡೆದು ಬಂದ ಪದ್ದತಿಯಂತೆ ಮೆಟ್ಟಿಲುಗಳ ಮೇಲೆ ತಂಬಿಟ್ಟಿನ ಆರತಿ ತಟ್ಟೆ ಇಟ್ಟು ಪೂಜೆ ಮಾಡುವುದು ವಾಡಿಕೆಯಾಗಿತ್ತು.‌ 2010ರ ಜನವರಿ 21ರಂದು ಅದೇ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಜನ ಪೂಜೆ ಮಾಡುವುದಕ್ಕೆ ಮುಂದಾಗಿದ್ದರು.

ಈ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಮೇಲ್ಮನವಿದಾರರು, ನೀವು ಪರಿಶಿಷ್ಟ ಜಾತಿಗೆ ಸೇರಿದವರು, ಮೆಟ್ಟಿಲುಗಳ ಮೇಲೆ ಆರತಿಗಳನ್ನಿಟ್ಟು ಪೂಜೆ ಮಾಡಬೇಡಿ ಎಂದು ತಡೆದಿದ್ದರು. ಜಾತಿಯ ಹೆಸರು ಹೇಳಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಆರತಿಗಳನ್ನು ಚೆಲ್ಲಾಡಿದ್ದಲ್ಲದೆ, ದೊಣ್ಣೆಗಳಿಂದ ಹೊಡೆದಾಟ ನಡೆಸಿ, ಹರಿಜನ ಕಾಲನಿಯನ್ನು ಪೆಟ್ರೋಲ್​ ಹಾಕಿ ಭಸ್ಮ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿತ್ತು. ಈ ಸಂಬಂಧ ದಾಖಲಾಗಿದ್ದ ದೂರಿನ ತನಿಖೆ ನಡೆಸಿದ್ದ ಕೆ.ಎಂ. ದೊಡ್ಡಿ ಪೊಲೀಸರು ಮೇಲ್ಮನವಿದಾರರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ್ದ ಮಂಡ್ಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್​ ನ್ಯಾಯಾಲಯ ಆರೋಪಿಗಳಿಗೆ ತಲಾ 9 ಸಾವಿರ ರೂ. ದಂಡ ಹಾಗೂ ಗರಿಷ್ಠ 6 ತಿಂಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ 2012ರ ಆಗಸ್ಟ್ 24ರಂದು ಆದೇಶಿಸಿತ್ತು. ಜತೆಗೆ, ದಂಡದ ರೂಪದಲ್ಲಿ ವಸೂಲಿ ಮಾಡಿದ ಮೊತ್ತದಲ್ಲಿ ತೊಂದರೆ ಅನುಭವಿಸಿದ್ದ ನಾಲ್ಕು ಮಂದಿಗೆ ತಲಾ 5 ಸಾವಿರ ರೂ. ಪರಿಹಾರ ಪಾವತಿಸಬೇಕು. ಇನ್ನುಳಿದ ಮೊತ್ತವನ್ನು ಸರ್ಕಾರದ ಖಜಾನೆಗೆ ಜಮೆ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಿತ್ತು. ಆ ಆದೇಶವನ್ನು ಅಪರಾಧಿಗಳು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

Related Articles

Comments (0)

Leave a Comment