ಆರ್‌ಸಿಬಿಯೇ ಕಾಲ್ತುಳಿತಕ್ಕೆ ಕಾರಣವೆಂಬ ಸಿಎಟಿ ಅಭಿಪ್ರಾಯ ತೆಗೆಯಲು ಕೋರಿದ ಅರ್ಜಿ; ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು: ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಮುಂದೆ ಸಂಭವಿಸಿದ್ದ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ಅಮಾನತು ರದ್ದುಪಡಿಸಿ ಹೊರಡಿಸಲಾದ ಆದೇಶದಲ್ಲಿ ಕೇಂದ್ರ ಆಡಳಿತಾತ್ಮಕ ನ್ಯಾಯಾಧಿಕರಣ (ಸಿಎಟಿ) ತನ್ನ ವಿರುದ್ಧ ವ್ಯಕ್ತಪಡಿಸಿರುವ ಕೆಲ ಅಭಿಪ್ರಾಯಗಳನ್ನು ಆದೇಶದಿಂದ ತೆಗೆದುಹಾಕಲು ನಿರ್ದೇಶಿಸುವಂತೆ ಕೋರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ವಿಕಾಸ್ ಕುಮಾರ್ ವಿಕಾಸ್ ಅಮಾನತು ರದ್ದುಪಡಿಸಿ ಸಿಎಟಿ ಹೊರಡಿಸಿರುವ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯು ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಹಾಗೂ ನ್ಯಾಯಮೂರ್ತಿ ಟಿ.ಎಂ. ನದಾಫ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ನಿಗದಿಯಾಗಿತ್ತು. ಇದೇ ವೇಳೆ ಆರ್‌ಸಿಬಿ ಸಲ್ಲಿಸಿರುವ ಅರ್ಜಿಯನ್ನೂ ವಿಚಾರಣೆಗೆ ಪರಿಗಣಿಸಲಾಯಿತು.

ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ ಆರ್‌ಸಿಬಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ವಿಕಾಸ್‌ಗೆ ನೋಟಿಸ್ ಜಾರಿಗೊಳಿಸಿತು. ಜತೆಗೆ, ಸಿಎಟಿ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯಲ್ಲಿ ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ವಿಕಾಸ್‌ಗೆ ಮಾತ್ರ ನೋಟಿಸ್ ಜಾರಿಗೊಳಿಸಿದ ಪೀಠ, ಎರಡೂ ಅರ್ಜಿಗಳ ವಿಚಾರಣೆಯನ್ನು ಜುಲೈ 17ಕ್ಕೆ ಮುಂದೂಡಿತು.

ಆರ್‌ಸಿಬಿ ಮನವಿ ಏನು?
ವಿಕಾಸ್ ಕುಮಾರ್ ವಿಕಾಸ್ ಅಮಾನತು ಆದೇಶ ರದ್ದುಪಡಿಸಿದ್ದ ಸಿಎಟಿ, ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಅತಿ ಹೆಚ್ಚು ಜನ ಆಗಮಿಸಲು, ಕ್ರೀಡಾಂಗಣದ ಮುಂದೆ ಕಾಲ್ತುಳಿತ ಸಂಭವಿಸಲು ಮೇಲ್ನೋಟಕ್ಕೆ ಆರ್‌ಸಿಬಿಯೇ ಕಾರಣ ಎಂಬ ಅಭಿಪ್ರಾಯವನ್ನು ಸಿಎಟಿ ಆದೇಶದಲ್ಲಿ ಉಲ್ಲೇಖಿಸಿದೆ. ವಿಕಾಸ್ ಕುಮಾರ್ ಅವರ ಪ್ರಕರಣದಲ್ಲಿ ಆರ್‌ಸಿಬಿ ಪಕ್ಷಗಾರನಲ್ಲ. ಜತೆಗೆ, ಸಿಎಟಿ ನಮ್ಮ ವಾದ ಆಲಿಸಿದೆ ಏಕಪಕ್ಷೀಯವಾಗಿ ಈ ಆದೇಶ ಮಾಡಿದೆ. ಸಿಎಟಿ ನಡೆ ಸಹಜ ನ್ಯಾಯದ ತತ್ವಕ್ಕೆ ವಿರುದ್ಧವಾಗಿದೆ. ಆದ್ದರಿಂದ, ಐಪಿಎಸ್ ಅಧಿಕಾರಿ ಅಮಾನತು ಆದೇಶ ವಜಾಗೊಳಿಸಿ ಜುಲೈ 1ರಂದು ಹೊರಡಿಸಿರುವ ಆದೇಶದಲ್ಲಿ ಆರ್‌ಸಿಬಿ ಕುರಿತು ವ್ಯಕ್ತಪಡಿಸಲಾಗಿರುವ ಅಭಿಪ್ರಾಯ, ಆರೋಪಗಳನ್ನು ತೆಗೆದು ಹಾಕುವಂತೆ ನಿರ್ದೇಶಿಸಬೇಕೆಂದು ಆರ್‌ಸಿಬಿ ಮನವಿ ಮಾಡಿದೆ.

Related Articles

Comments (0)

Leave a Comment