ಶಾಂತಿ ಭಂಗ ತರಲು ಪ್ರಚೋದನೆ ಆರೋಪ; ನವೀನ್ ನೆರಿಯ ವಿರುದ್ಧದ ಎಫ್‌‌ಐಆರ್‌ಗೆ ಹೈಕೋರ್ಟ್ ತಡೆ

ಬೆಂಗಳೂರು: ರಾತ್ರಿ ಸಮಯದಲ್ಲಿ ಹಿಂದು ಮುಖಂಡರ ‌ಮನೆಗಳಿಗೆ ತೆರಳಿ ಪರಿಶೀಲನೆ ನಡೆಸುತ್ತಿರುವುದು ಏಕೆ ಎಂದು ಪ್ರಶ್ನಿಸಿ ದ್ವೇಷ ಭಾಷಣ ಮಾಡಿದ ಹಾಗೂ ಶಾಂತಿಭಂಗ ಉಂಟು ಮಾಡಲು ಪ್ರಚೋದನೆ ನೀಡುವ ಉದ್ದೇಶದಿಂದ ಅವಮಾನ ಮಾಡಿದ ಆರೋಪದಡಿ ವಿಶ್ವ ಹಿಂದು ಪರಿಷತ್‌ (ವಿಎಚ್‌ಪಿ) ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಜಿ. ನವೀನ್ ಕುಮಾರ್ (ನವೀನ್ ನೆರಿಯ) ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದು ಕೋರಿ ಜಿ. ನವೀನ್‌ ಕುಮಾರ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಆರ್. ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿತು. ಜತೆಗೆ, ಪ್ರತಿವಾದಿ ಕಡಬ ಠಾಣೆ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಎಂ. ಅರುಣ್‌ ಶ್ಯಾಮ್‌ ವಾದ ಮಂಡಿಸಿ, ಪೊಲೀಸರು ಅರ್ಜಿದಾರರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ದುರುದ್ದೇಶದಿಂದ ಅವರ ಮಾತುಗಳಿಗೆ ಕೋಮು ಬಣ್ಣ ಬಳಿಯುವ ಪ್ರಯತ್ನ ಮಾಡಿದ್ದಾರೆ. ಆದ್ದರಿಂದ, ದುರುದ್ದೇಶಪೂರಿತವಾಗಿ ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಪ್ರಕರಣವೇನು?
ಕಡಬ ಪೊಲೀಸ್ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಎಂ.ಎಸ್‌. ಅಭಿನಂದನ್ 2025ರ ಜೂನ್ 4ರಂದು ದೂರು ನೀಡಿ, ಜೂನ್ 4ರ ಸಂಜೆ 6.20ರ ಸಮಯದಲ್ಲಿ ಠಾಣೆಯ ಮುಂದೆ ನಿಂತಿದ್ದ ನನ್ನ ಬಳಿಗೆ ಬಂದಿದ್ದ ನವೀನ್‌, ರಾತ್ರಿ ಸಮಯದಲ್ಲಿ ಹಿಂದು ಮುಖಂಡರ ಮನೆಗೆ ಮಾತ್ರ ಹೋಗಿ ಪರಿಶೀಲನೆ ಮಾಡುತ್ತಾ, ಅವರಿಗೆ ತೊಂದರೆ ನೀಡುತ್ತಿರುವುದು ಏಕೆ? ಎಂದು ಪ್ರಶ್ನಿಸಿದ್ದಾರೆ. ಆ ಮೂಲಕ ಧ್ವೇಷ ಭಾಷಣ ಮಾಡಿದ್ದಾರೆ ಮತ್ತು ಸ್ಥಳದಲ್ಲಿ ಸೇರಿದ್ದ ಸಾರ್ವಜನಿಕರಿಗೆ ಅನ್ಯಧರ್ಮದದ ವಿರುದ್ಧ ದ್ವೇಷ ಭಾಷನೆ ಹುಟ್ಟುವಂತೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು. ಇದರಿಂದ, ನವೀನ್‌ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್‌ 353(2) ಅಡಿಯಲ್ಲಿ ಶಾಂತಿಭಂಗ ಉಂಟು ಮಾಡಲು ಪ್ರಚೋದನೆ ನೀಡುವ ಉದ್ದೇಶದಿಂದ ಅವಮಾನ ಮಾಡಿದ ಆರೋಪದಡಿ ಎಫ್‌ಐಆರ್‌ ದಾಖಲಿಸಲಾಗಿತ್ತು. ಈ ಎಫ್‌ಐಆರ್ ರದ್ದುಕೋರಿ ನವೀನ್ ಹೈಕೋರ್ಟ್ ಮೊರೆ ಹೋಗಿದ್ದಾರೆ.

Related Articles

Comments (0)

Leave a Comment