ಸರ್ಕಾರಿ ಆಸ್ಪತ್ರೆ ಆವರಣದ ಜನೌಷಧ ಕೇಂದ್ರ ಮುಚ್ಚಲು ಸರ್ಕಾರದ ಆದೇಶ; ಮತ್ತೈದು ಕೇಂದ್ರಗಳ ಸ್ಥಗಿತಕ್ಕೆ ಹೈಕೋರ್ಟ್ ತಡೆ
- by Ramya B T
- July 9, 2025
- 15 Views

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಜನೌಷಧ ಕೇಂದ್ರಗಳನ್ನು ಮುಚ್ಚುವಂತೆ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಮತ್ತೆ 5 ಜನೌಷಧ ಕೇಂದ್ರಗಳ ಮಾಲೀಕರಿಗೆ ಸೀಮಿತವಾಗಿ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಮಂಗಳವಾರವಷ್ಟೇ 16 ಜನೌಷಧ ಕೇಂದ್ರಗಳ ಸ್ಥಗಿತ ಆದೇಶಕ್ಕೆ ತಡೆ ನೀಡಿದ್ದ ಹೈಕೋರ್ಟ್, ಇದೀಗ ಸರ್ಕಾರದ ಆದೇಶ ಪ್ರಶ್ನಿಸಿ ಅರ್ಜಿ ಸಲ್ಲಿಸಿರುವ ಐವರು ಮಾಲೀಕರ ಜನೌಷಧ ಕೇಂದ್ರಗಳನ್ನು ಮುಂದಿನ ವಿಚಾರಣೆವರೆಗೆ ಸ್ಥಗಿತಗೊಳಿಸಬಾರದು ಎಂದು ಸರ್ಕಾರಕ್ಕೆ ನಿರ್ದೇಶಿಸಿದೆ.
ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಬೆಂಗಳೂರು ಗ್ರಾಮಾಂತರದ ತ್ಯಾಮಗೊಂಡ್ಲು ಸರ್ಕಾರಿ ಆಸ್ಪತ್ರೆ, ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರ, ಸುಳ್ಯ ತಾಲೂಕು ಆಸ್ಪತ್ರೆ, ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪದ ಸಮುದಾಯ ಆರೋಗ್ಯ ಕೇಂದ್ರ, ಚಿಕ್ಕಮಗಳೂರು ಜಿಲ್ಲೆ ಕಡೂರಿನ ಸಮುದಾಯ ಆರೋಗ್ಯ ಕೇಂದ್ರದ ಆವರಣಗಳಲ್ಲಿರುವ ಜನೌಷಧ ಕೇಂದ್ರಗಳ ಮಾಲೀಕರು ಪ್ರತ್ಯೇಕವಾಗಿ ಸಲ್ಲಿಸಿರುವ ಅರ್ಜಿಗಳನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿದೆ.
ಜನೌಷಧ ಕೇಂದ್ರ ತೆರೆಯಲು, ಅವುಗಳಿಗೆ ಮೂಲಸೌಕರ್ಯ ಕಲ್ಪಿಸಲು ಸಾಕಷ್ಟು ಹಣ ವೆಚ್ಚ ಮಾಡಲಾಗಿದೆ. ಜನರಿಗೆ ಶೇ. 50ರಿಂದ 90 ರಿಯಾಯಿತಿ ದರದಲ್ಲಿ ಔಷಧಗಳನ್ನು ನೀಡಲಾಗುತ್ತಿದೆ. ಸರ್ಕಾರದ ಆದೇಶದಿಂದ ನಮ್ಮ ಮೂಲಭೂತ ಹಕ್ಕಿಗೆ ಧಕ್ಕೆಯಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
Related Articles
Thank you for your comment. It is awaiting moderation.
Comments (0)