ಸರ್ಕಾರಿ ಆಸ್ಪತ್ರೆ ಆವರಣದ ಜನೌಷಧ ಕೇಂದ್ರ ಸ್ಥಗಿತಕ್ಕೆ ಸರ್ಕಾರದ ಆದೇಶ; 16 ಮಾಲೀಕರಿಗೆ ಹೈಕೋರ್ಟ್‌ನಿಂದ ರಿಲೀಫ್
- by Prashanth Basavapatna
- July 8, 2025
- 175 Views

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲ ಜನೌಷಧ ಕೇಂದ್ರಗಳನ್ನು ಮುಚ್ಚುವಂತೆ ರಾಜ್ಯ ಆರೋಗ್ಯ ಇಲಾಖೆ ಹೊರಡಿಸಿರುವ ಆದೇಶ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದ 16 ಜನೌಷಧ ಕೇಂದ್ರಗಳ ಮಾಲೀಕರಿಗೆ ಅಭಯ ಹಸ್ತ ತೋರಿರುವ ಹೈಕೋರ್ಟ್, ಅರ್ಜಿದಾರರಿಗೆ ಸೀಮಿತವಾಗಿ ಆರೋಗ್ಯ ಇಲಾಖೆಯ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ.
ಬಾಲ್ಕಿ ಮೂಲದ ಶ್ರೀಕಾಂತ್ ಅನಂತಾಚಾರ್ಯ ಜೋಶಿ ಸೇರಿ 16 ಜನೌಷಧ ಕೇಂದ್ರಗಳ ಮಾಲೀಕರು ಸಲ್ಲಿಸಿದ್ದ ಅರ್ಜಿಗಳ ಕುರಿತು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಮಧ್ಯಂತರ ಆದೇಶ ಮಾಡಿತು.
ಜತೆಗೆ, ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ವೈದ್ಯಕೀಯ ಆಡಳಿತಾಧಿಕಾರಿಗಳು ಆಸ್ಪತ್ರೆಗಳಲ್ಲಿ ಔಷಧಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುವುದಕ್ಕೆ ನೀಡಿರುವ ಅನುಮತಿ ರದ್ದುಗೊಳಿಸುವುದಕ್ಕೆ ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.
ವಿಚಾರಣೆ ವೇಳೆ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು, ಸರ್ಕಾರ ನಮ್ಮ ವಾದ ಆಲಿಸದೆ, ನಮ್ಮ ಗಮನಕ್ಕೆ ತಾರದೆ, ತರಾತುರಿಯಲ್ಲಿ ಜನೌಷಧ ಕೇಂದ್ರಗಳನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿದೆ. ಈ ಬೆಳವಣಿಗೆ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿದರು.
ಅರ್ಜಿದಾರರು ಈ ಔಷಧ ಮಳಿಗೆಗಳಿಗೆ ಮೂಲಸೌಕರ್ಯ, ಸಿಬ್ಬಂದಿ ವೇತನ, ಪೀಠೋಪಕರಣಗಳು, ಔಷಧಗಳ ದಾಸ್ತಾನು, ಮಳಿಗೆ ಕಾರ್ಯಚರಣೆಗೆ ಸಾಕಷ್ಟು ಬಂದವಾಳ ಹೂಡಿಕೆ ಮಾಡಿದ್ದು, ಕಾನೂನುಬದ್ಧವಾಗಿ ಪರವಾನಗಿ ಪಡೆದುಕೊಳ್ಳಲಾಗಿದೆ. ಜನೌಷಧ ಕೇಂದ್ರಗಳನ್ನು ಸ್ಥಗಿತಗೊಳಿಸಲು ಹೊರಡಿಸಿರುವ ಆದೇಶ ಸಂವಿಧಾನ ಪರಿಚ್ಛೇದ 19(1)(ಜಿ) ಅಡಿಯಲ್ಲಿ ಲಭ್ಯವಿರುವ ಜೀವಿಸುವ ಹಕ್ಕು, ಪರಿಚ್ಚೇದ 19ರ ಅಡಿಯಲ್ಲಿ ಬದುಕುವ ಹಕ್ಕುಗಳಿಗೆ ಧಕ್ಕೆಯುಂಟುಮಾಡಲಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ವಾದ ಆಲಿಸಿದ ನ್ಯಾಯಪೀಠ, ಮುಂದಿನ ವಿಚಾರಣೆವರೆಗೆ ಅರ್ಜಿದಾರರ ಜನೌಷಧ ಕೇಂದ್ರಗಳನ್ನು ಸ್ಥಗಿತಗೊಳಿಸದಂತೆ ಮಧ್ಯಂತರ ಆದೇಶ ನೀಡಿ, ಅರ್ಜಿ ವಿಚಾರಣೆ ಮುಂದೂಡಿತು.
ಅರ್ಜಿಯಲ್ಲೇನಿದೆ?
ಆಸ್ಪತ್ರೆಗಳಲ್ಲಿ ವೈದ್ಯರು ಹೊರ ಭಾಗದ ಮಳಿಗೆಗಳಿಂದ ಔಷಧಗಳನ್ನು ಖರೀದಿ ಮಾಡುವಂತೆ ರೊಗಿಗಳಿಗೆ ಸೂಚಿಸುವುದನ್ನು ನಿರ್ಬಂಧಿಸುವ ಸಲುವಾಗಿ ಆಸ್ಪತ್ರೆಗಳ ಆವರಣದಲ್ಲಿ ಜನೌಷಧ ಕೇಂದ್ರ ತೆರೆಯಲಾಗಿದೆ. ಈ ಕೇಂದ್ರಗಳು ಗುಣಮಟ್ಟದ ಜೆನೆರಿಕ್ ಔಷಧಗಳನ್ನು ಒದಗಿಸುವ ಗುರಿ ಹೊಂದಿವೆ. ಜನೌಷಧ ಕೇಂದ್ರಗಳು ಶೇ.50ರಿಂದ 90ರವರೆಗೂ ರಿಯಾಯಿತಿ ದರದಲ್ಲಿ ಔಷಧಗಳನ್ನು ಒದಗಿಸುತ್ತವೆ. ಇದರಿಂದ, ಬಡತನ ರೇಖೆಗಿಂತ ಕೆಳಗಿರುವವರು, ಹಿರಿಯ ನಾಗರಿಕರು, ದಿನಗೂಲಿ ನೌಕರು ಹಾಗೂ ದಿನನಿತ್ಯ ಔಷಧಗಳ ಅಗತ್ಯವಿರುವ ದೀರ್ಘಕಾಲದ ರೋಗಗಳಿಂದ ಬಳಲುತ್ತಿರುವವರಿಗೆ ಈ ಸೇವೆ ಅತ್ಯಂತ ಸಹಕಾರಿಯಾಗಿದೆ. ಅಂತಹ ಔಷಧ ಮಳಿಗೆಗಳನ್ನು ಸ್ಥಗಿತಗೊಳಿಸಿರುವುದು ಸಾರ್ವಜನಿಕರ ಆರೋಗ್ಯ ಹಕ್ಕಿನ ಮೇಲೆ ಪರಿಣಾಮ ಬೀರಲಿದೆ ಎಂಬುದಾಗಿ ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
Related Articles
Thank you for your comment. It is awaiting moderation.
Comments (0)