ಪತ್ನಿ ಕೊಲೆ ಆರೋಪದಡಿ ಪೊಲೀಸರಿಂದ ಸುಳ್ಳು ಕೇಸ್; 5 ಕೋಟಿ ಪರಿಹಾರ ಕೋರಿ ಕೋರ್ಟ್ ಕದ ತಟ್ಟಿದ ಸಂತ್ರಸ್ತ ಪತಿ

ಬೆಂಗಳೂರು: ಪತ್ನಿಯನ್ನು ಹತ್ಯೆಗೈದ ಆರೋಪದಡಿ ಪೊಲೀಸರು ದಾಖಲಿಸಿದ್ದ ಪ್ರಕರಣ ಸುಳ್ಳೆಂದು ಸಾಬೀತಾಗಿ, ಕೊಲೆ ಆರೋಪದಿಂದ ಮುಕ್ತನಾಗಿರುವ ಪತಿ ತನಗಾದ ಅನ್ಯಾಯಕ್ಕೆ 5 ಕೋಟಿ ರೂ. ಪರಿಹಾರ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಕೊಲೆ ಪ್ರಕರಣದಿಂದ ತನ್ನನ್ನು ಖುಲಾಸೆಗೊಳಿಸಿ, 1 ಕೋಟಿ ರೂ. ಪರಿಹಾರ ಪಾವತಿಸುವಂತೆ ವಿಚಾರಣಾ‌ ನ್ಯಾಯಾಲಯ ನೀಡಿರುವ ಆದೇಶ ಮಾರ್ಪಡಿಸಿ ಪರಿಹಾರದ ಮೊತ್ತವನ್ನು 5 ಕೋಟಿ ರೂ. ಗೆ ಹೆಚ್ಚಳ ಮಾಡುವಂತೆ ಕೋರಿ ಮೈಸೂರಿನ ಸುರೇಶ್ ಅಲಿಯಾಸ್ ಕುರುಬರ ಸುರೇಶ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ 231 (ನಕಲಿ ಸಾಕ್ಷ್ಯಗಳ ಸೃಷ್ಟಿ) ಮತ್ತು ಸೆಕ್ಷನ್‌ 229 (ನಕಲಿ ಸಾಕ್ಷ್ಯ ಸಲ್ಲಿಸಿದ್ದಕ್ಕೆ ಶಿಕ್ಷೆ) ಅಡಿ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಲು ಆದೇಶ ನೀಡಬೇಕು ಮತ್ತು ಸೆಷನ್ಸ್ ನ್ಯಾಯಾಲಯದ ತೀರ್ಪಿನ ಪ್ರತಿಯಲ್ಲಿ ತನ್ನನ್ನು ‘ಆರೋಪಿ’ ಎಂದು ಹೆಸರಿಸಲಾಗಿದ್ದು, ಆ ಪದ ತೆಗೆದು ‘ಸಂತ್ರಸ್ತ’ ಎಂಬ ಪದ ಸೇರ್ಪಡೆ ಮಾಡಬೇಕೆಂದು ಸುರೇಶ್ ತಮ್ಮ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಪ್ರಕರಣವೇನು?
ಅನೈತಿಕ ಸಂಬಂಧದ ಶಂಕೆಯಿಂದ ಪತ್ನಿಯನ್ನು ಹತ್ಯೆಗೈದ ಆರೋಪದಲ್ಲಿ ಸುರೇಶ್ ವಿರುದ್ಧ ಬೆಟ್ಟದಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪೊಲೀಸರ ಪ್ರಕಾರ, ಸುರೇಶ್ ತನ್ನ ಮಡದಿಯನ್ನು ನಾಲೆ ಬಳಿ ಕರೆದುಕೊಂಡು ಹೋಗಿ, ಜಗಳ ತೆಗೆದು ಪಕ್ಕದಲ್ಲೇ ಇದ್ದ ದೊಣ್ಣೆಯಿಂದ ಹೊಡೆದು ಕೊಂದು, ಮೃತದೇಹ ಹಾಗೂ ದೊಣ್ಣೆಯನ್ನು ಪೊದೆಯೊಂದರಲ್ಲಿ ಮುಚ್ಚಿಟ್ಟಿದ್ದಾನೆಂದು ಆರೋಪಿಸಲಾಗಿತ್ತು. ಸುರೇಶ್ ಸಹ ಪತ್ನಿ ನಾಪತ್ತೆಯಾಗಿದ್ದಾರೆಂದು ದೂರು ನೀಡಿದ್ದರು. ಅದೇ ದಿನ ಅಪರಿಚಿತ ಮಹಿಳೆಯ ಶವ ದೊರೆತಿದ್ದು, ಅದು ಸುರೇಶ್ ಪತ್ನಿಯದ್ದೇ ಎಂದು ಅಪಾದಿಸಿದ್ದರು.

ವಿಚಾರಣೆ ಸಂದರ್ಭದಲ್ಲಿ ಸುರೇಶ್ ಪತ್ನಿ ಜೀವಂತವಾಗಿರುವುದು ತಿಳಿದುಬಂದಿತ್ತು. ಆಕೆಯನ್ನು ವಿಚಾರಣಾ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಪ್ರಕರಣದಲ್ಲಿ ಪೊಲೀಸರು ಕತೆ ಕಟ್ಟಿದ್ದಾರೆ. ಸುರೇಶ್ ವಿರುದ್ಧ ಮೇಲ್ನೋಟಕ್ಕೆ ಯಾವುದೇ ಸಾಕ್ಷ್ಯ ಇಲ್ಲ, ಸುಮ್ಮನೆ ಕೊಲೆ ಪ್ರಕರಣ ಹುಟ್ಟುಹಾಕಿ ಅದರಲ್ಲಿ ಅವರನ್ನು ಸಿಲುಕಿಸಿದ್ದಾರೆಂಬುದನ್ನು ನ್ಯಾಯಾಲಯ ಗಮನಿಸಿತ್ತು.

ಪೊಲೀಸರು ಅತ್ಯಂತ ಚಾಣಾಕ್ಷ ರೀತಿಯಲ್ಲಿ ತನಿಖೆಯ ಕತೆ ಕಟ್ಟಿದ್ದಾರೆ. ತನಿಖೆಯಲ್ಲಿ ದೋಷವಾಗಿದೆ ಎಂಬ ಪೊಲೀಸರ ಹೇಳಿಕೆ ಒಪ್ಪಲಾಗದು. ಉದ್ದೇಶಪೂರ್ವಕವಾಗಿಯೇ ಸುರೇಶ್ ಅವರನ್ನು ಕೊಲೆ ಪ್ರಕರಣದಲ್ಲಿ ಸಿಲುಕಿಸಲು ಪೊಲೀಸರು ಸಂಚು ರೂಪಿಸಿ ಕಾರ್ಯಗತಗೊಳಿಸಿದ್ದಾರೆ. ಪ್ರಕರಣದಲ್ಲಿ ನ್ಯಾಯ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದ ನ್ಯಾಯಾಲಯ ಸುರೇಶ್ ಅವರನ್ನು ಆರೋಪಮುಕ್ತಗೊಳಿಸಿ, ಅಪರಿಚಿತ ಶವದ ಕುರಿತು ತನಿಖೆ ಮುಂದುವರಿಸುವಂತೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ 2025ರ ಏಪ್ರಿಲ್‌‌ನಲ್ಲಿ ಆದೇಶ ನೀಡಿತ್ತು.

ಒಂದು ಕೋಟಿ ಪರಿಹಾರ:
ಉದ್ದೇಶಪೂರ್ವಕವಾಗಿ ಸುಳ್ಳು ಕೇಸ್ ದಾಖಲಿಸಿದ್ದಕ್ಕೆ ಸುರೇಶ್‌ಗೆ 1 ಕೋಟಿ ರೂ. ಪರಿಹಾರ ನೀಡುವಂತೆ ಸರ್ಕಾರಕ್ಕೆ ಆದೇಶಿಸಿದ್ದ ನ್ಯಾಯಾಲಯ, ಬೆಟ್ಟದಪುರ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್‌ ಬಿ.ಜಿ. ಪ್ರಕಾಶ್‌ ಇತರ ಮೂವರು ಪೊಲೀಸ್ ಅಧಿಕಾರಿಗಳಾದ ಜಿತೇಂದ್ರಕುಮಾರ್, ಪ್ರಕಾಶ್ ಎಂ.ಯತ್ತಿನಮನಿ ಮತ್ತು ಬಿ.ಕೆ.ಮಹೇಶ್ ವಿರುದ್ಧ ಇಲಾಖಾ ತನಿಖೆ ನಡೆಸಿ ಶಿಸ್ತು ಕ್ರಮ ಜರುಗಿಸುವಂತೆ ಐಜಿಪಿಗೆ (ಮೈಸೂರು ವಲಯ) ನಿರ್ದೇಶನ ನೀಡಿತ್ತು.

Related Articles

Comments (0)

Leave a Comment