ಭೂಸ್ವಾಧೀನ ಪ್ರಕ್ರಿಯೆಯೆಗಳಿಗೆ ತಂತ್ರಜ್ಞಾನ ಆಧಾರಿತ ಎಸ್‌ಒಪಿ ರಚಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
- by Jagan Ramesh
- June 24, 2025
- 318 Views

ಬೆಂಗಳೂರು: ಭೂ ಸ್ವಾಧೀನ ಪ್ರಕ್ರಿಯೆಗಳಲ್ಲಿ ಭೂ ಮಾಲೀಕರ ಹಿತಾಸಕ್ತಿ ಕಾಯ್ದುಕೊಳ್ಳಲು ಹಾಗೂ ಪಾರದರ್ಶಕತೆ ಮತ್ತು ದಕ್ಷತೆ ಕಾಯ್ದುಕೊಳ್ಳಲು ತಂತ್ರಜ್ಞಾನ ಸಂಯೋಜನೆ ಮೂಲಕ ಪ್ರಮಾಣೀಕೃತ ಕಾರ್ಯಚರಣೆ ಕಾರ್ಯವಿಧಾನ (ಎಸ್‌ಒಪಿ) ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಹಾವೇರಿಯಲ್ಲಿ ತುಂಗಾ ಮೇಲ್ಡಂಡೆ ಯೋಜನೆ ಮತ್ತು ಕಾರವಾರದಲ್ಲಿ ಕೊಂಕಣ ರೈಲ್ವೆ ಯೋಜನೆಗಳಿಗೆ ನಡೆಸಿರುವ ಭೂ ಸ್ವಾಧೀನಕ್ಕೆ ಪರಿಹಾರ ನಿಗದಿಯಲ್ಲಿ ಆಗಿರುವ ವಿಳಂಬ ಗಮನಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಎಲ್ಲ ಭೂಸ್ವಾಧೀನ ಪ್ರಕರಣಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಸ್ವಾಧೀನ ಪ್ರಕ್ರಿಯೆ, ಪರಿಹಾರ ನಿಗದಿ, ಪರಿಹಾರದ ಮರುನಿಗದಿ ಮತ್ತಿತರ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಜತೆಗೆ, ನ್ಯಾಯಾಲಯದ ಮುಂದಿರುವ ಪ್ರಕರಣಗಳಲ್ಲಿಪರಿಹಾರ ನಿಗದಿ ಪ್ರಕ್ರಿಯೆಯಲ್ಲಿನ ವಿಳಂಬದ ಬಗ್ಗೆ ತನಿಖೆ ನಡೆಸಿ ಆರು ವಾರಗಳಲ್ಲಿ ವರದಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ.
ಎಸ್‌ಒಪಿ ರಚನೆಗೆ ಆದೇಶ:
ಭೂಸ್ವಾಧೀನ ಪ್ರಕರಣಗಳಲ್ಲಿ ಪರಿಹಾರ ನೀಡುವ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ತರಲು ಇ-ಗೌವರ್ನೆನ್ಸ್ ಇಲಾಖೆಯ ಸಹಾಯದಿಂದ ಎಸ್‌ಒಪಿಗಳನ್ನು ರೂಪಿಸಬೇಕು ಎಂದು ಮುಖ್ಯ ಕಾರ್ಯದರ್ಶಿಗೆ ಆದೇಶಿಸಿರುವ ಹೈಕೋರ್ಟ್, ಹಾಗೆ ಮಾಡುವಾಗ ಭೂಸ್ವಾಧೀನದಲ್ಲಿ ಧ್ವನಿರಹಿತರಾಗಿರುವ ಭೂಮಾಲೀಕರ ಹಿತಾಸಕ್ತಿ ರಕ್ಷಿಸಲು ಸಾಧ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದೆ.
ಒಟ್ಟಾರೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ಸುಗಮಗೊಳಿಸಲು ಬಳಸಬೇಕಾದ ಮಾಹಿತಿ ತಂತ್ರಜ್ಞಾನ ಸಾಧನವು ಭೂ ಸ್ವಾಧೀನ ಅಧಿಸೂಚನೆ, ಆಕ್ಷೇಪಣೆಗಳ ವಿಚಾರಣೆ, ವಿಶೇಷ ಭೂಸ್ವಾಧೀನ ಅಧಿಕಾರಿಗಳ (ಎಸ್‌ಎಲ್‌ಒ) ವರದಿ, ಅಂತಿಮ ಅಧಿಸೂಚನೆ, ನ್ಯಾಯಾಲಯದ ನಡಾವಳಿಗಳು, ನ್ಯಾಯಾಲಯಗಳಿಗೆ ನೀಡಲಾದ ತೀರ್ಪಿನ ಉಲ್ಲೇಖ ಮತ್ತು ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ಸಮಯದಿಂದ ಅಂತಿಮ ಅಧಿಸೂಚನೆವರೆಗಿನ ನೋಟಿಸ್‌ಗಳು, ಫೈಲ್ ಟಿಪ್ಪಣಿಗಳು ಸೇರಿ ಎಲ್ಲ ಸಂಬಂಧಿತ ವಿಚಾರಣೆಗಳು ಮತ್ತು ದಾಖಲೆಗಳನ್ನು ಎಲೆಕ್ಟ್ರಾನಿಕ್ ರಿಜಿಸ್ಟರ್ ಮೂಲಕ ಸಂಗ್ರಹಿಸಿಡುವ ಸಾಮರ್ಥ್ಯ ಹೊಂದಿರಬೇಕು ಎಂದು ಹೈಕೋರ್ಟ್ ಹೇಳಿದೆ.
Related Articles
Thank you for your comment. It is awaiting moderation.
Comments (1)
[…] […]
Reply