- ಪ್ರಮುಖ ಸಮಾಚಾರಗಳು
- Like this post: 21
ರಾಜ್ಯ ಭದ್ರತಾ ಆಯೋಗದ ಸದಸ್ಯರಾಗಿ ನ್ಯಾ. ಕುನ್ಹಾ ನೇಮಕ; ಹೈಕೋರ್ಟ್ ಆದೇಶದಂತೆ ಸರ್ಕಾರದ ಕ್ರಮ
- by Jagan Ramesh
- June 18, 2025
- 128 Views

ಬೆಂಗಳೂರು: ರಾಜ್ಯ ಭದ್ರತಾ ಆಯೋಗಕ್ಕೆ (ಎಸ್‌ಎಸ್‌ಸಿ) ಸದಸ್ಯರನ್ನು ನೇಮಕ ಮಾಡುವಂತೆ ಹೈಕೋರ್ಟ್ ನೀಡಿದ್ದ ಆದೇಶದಂತೆ ಕ್ರಮ ಕೈಗೊಂಡಿರುವ ಸರ್ಕಾರ, ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರನ್ನು ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಿದೆ.
ಎಸ್ಎಸ್‌ಸಿಯ ಎಲ್ಲ ಸದಸ್ಯರನ್ನು ನೇಮಕ ಮಾಡಬೇಕು ಹಾಗೂ ಕರ್ನಾಟಕ ಪೊಲೀಸ್ (ಕೆಪಿ) ಕಾಯ್ದೆ – 1963 ಮತ್ತು 2006ರಲ್ಲಿ ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನದಂತೆ ರಾಜ್ಯ ಆಯೋಗ ತನ್ನ ಕಾರ್ಯ ನಿರ್ವಹಿಸುವಂತಾಗಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿ 2021ರಲ್ಲಿ ವಕೀಲ ಎಸ್. ಉಮಾಪತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಎಸ್‌ಎಸ್‌ಸಿ ಸದಸ್ಯರ ನೇಮಕಾತಿ ಸಂಬಂಧ 2021ರ ಜೂನ್ 22ರಂದು ಮಧ್ಯಂತರ ಆದೇಶ ಮಾಡಿತ್ತು.
ಹೈಕೋರ್ಟ್ ಆದೇಶದಂತೆ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರನ್ನು ಭದ್ರತಾ ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಿರುವ ಬಗ್ಗೆ ಜೂನ್ 12ರಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಸದಸ್ಯರ ನೇಮಕಾತಿ ಬಗ್ಗೆ 2021ರಲ್ಲಿ ಹೈಕೋರ್ಟ್ ಮಧ್ಯಂತರ ಆದೇಶ ಮಾಡಿತ್ತು. ಹೈಕೋರ್ಟ್ ಮುಖ್ಯ ನ್ಯಾಾಯಮೂರ್ತಿಗಳು ಶಿಫಾರಸು ಮಾಡುವ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯೊಬ್ಬರನ್ನು ಸದಸ್ಯರನ್ನಾಾಗಿ ನೇಮಕ ಮಾಡಬೇಕು. ಅದರಂತೆ, 2021ರ ಆಗಸ್ಟ್ 21ರಂದು ಮುಖ್ಯ ನ್ಯಾಯಮೂರ್ತಿಗಳು ನ್ಯಾಯಮೂರ್ತಿ ಕುನ್ಹಾ ಅವರ ಹೆಸರು ಶಿಫಾರಸು ಮಾಡಿದ್ದರು. ಇದೀಗ, ಸುಮಾರು ನಾಲ್ಕು ವರ್ಷಗಳ ಬಳಿಕ ಸದಸ್ಯರ ನೇಮಕ ಆಗಿದೆ.
ಏನಿದು ಎಸ್‌ಎಸ್‌ಸಿ?
ರಾಜ್ಯ ಭದ್ರತಾ ಆಯೋಗ ರಚಿಸುವ ಸಂಬಂಧ ಸುಪ್ರೀಂಕೋರ್ಟ್ 2006ರಲ್ಲಿ ಎಲ್ಲ ರಾಜ್ಯಗಳಿಗೆ ನಿರ್ದೇಶನ ನೀಡಿತ್ತು. ಪೊಲೀಸ್ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ತರುವುದು, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ಕಾರ್ಯವೈಖರಿ ಹಾಗೂ ಕಾರ್ಯಕ್ಷಮತೆಯ ಮೌಲ್ಯಮಾಪನ ಮಾಡಿ ಅಗತ್ಯ ನೀತಿಗಳನ್ನು ರೂಪಿಸುವುದು ಭದ್ರತಾ ಆಯೋಗದ ಮುಖ್ಯ ಉದ್ದೇಶವಾಗಿದೆ. 2012ರಲ್ಲೇ ಕರ್ನಾಟಕದಲ್ಲಿ ಭದ್ರತಾ ಆಯೋಗ ರಚನೆ ಆಗಿದೆಯಾದರೂ, ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ.
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುವ ಭದ್ರತಾ ಆಯೋಗಕ್ಕೆ ಗೃಹ ಸಚಿವರು ಉಪಾಧ್ಯಕ್ಷರಾಗಿದ್ದಾರೆ. ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಶಿಫಾರಸು ಮಾಡುವ ನಿವತ್ತ ನ್ಯಾಯಮೂರ್ತಿಯೊಬ್ಬರು ಸೇರಿ ವಿಧಾನಸಭೆಯ ವಿರೋಧ ಪಕ್ಷದ ನಾಯಕರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಒಳಾಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಆಯೋಗದ ಸದಸ್ಯರಾಗಿರುತ್ತಾರೆ.
Related Articles
Thank you for your comment. It is awaiting moderation.
Comments (0)