ಗ್ರಾಹಕ ವ್ಯಾಜ್ಯ ಇತ್ಯರ್ಥದಲ್ಲಿ ರಾಜ್ಯವನ್ನು ಮೊದಲ ಸ್ಥಾನಕ್ಕೇರಿಸಲು ಶ್ರಮ; ನ್ಯಾ. ಶಿವಶಂಕರೇಗೌಡ ಭರವಸೆ

ಬೆಂಗಳೂರು: ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಬಾಕಿ ಇರುವ ಅಂದಾಜು 7 ಸಾವಿರ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳುವ ಮೂಲಕ ಕರ್ನಾಟಕವನ್ನು ಗ್ರಾಹಕರ ವ್ಯಾಜ್ಯ ಪರಿಹಾರದ ವಿಚಾರದಲ್ಲಿ ದೇಶದಲ್ಲೇ ಮೊದಲ ಸ್ಥಾನಕ್ಕೆ‌ ತರಲು ಶ್ರಮಿಸಲಾಗುವುದು ಎಂದು ಕರ್ನಾಟಕ ರಾಜ್ಯ ಪರಿಹಾರ ಆಯೋಗದ ನೂತನ ಅಧ್ಯಕ್ಷರಾದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ಭರವಸೆ ನೀಡಿದರು.

ರಾಜ್ಯ ಗ್ರಾಹಕರ ಹಕ್ಕುಗಳ ಪರಿಹಾರ ಆಯೋಗದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಜಿಲ್ಲಾ ಗ್ರಾಹಕರ ಪರಿಹಾರ ವೇದಿಕೆಗಳೂ ಸೇರಿ ಸುಮಾರು ಏಳು ಸಾವಿರ ಪ್ರಕರಣಗಳು‌ ಇತ್ಯರ್ಥಕ್ಕೆ ಬಾಕಿ ಇವೆ. ಆದರೂ ಗ್ರಾಹಕರಿಗೆ ಪರಿಹಾರ ಕಲ್ಪಿಸುವಲ್ಲಿ ಕರ್ನಾಟಕ ದೇಶದಲ್ಲಿ ಮೂರನೇ ಸ್ಥಾನದಲ್ಲಿದ್ದು, ಮುಂದಿನ‌ ದಿನಗಳಲ್ಲಿ ಮೊದಲ ಸ್ಥಾನಕ್ಕೆ ತರಲು ಶ್ರಮಿಸಲಾಗುವುದು. ಗ್ರಾಹಕ ಪರಿಹಾರ ವೇದಿಕೆಗಳಲ್ಲಿನ ಆಡಳಿತಕ್ಕೆ ಚುರುಕು ತರುವ ಜತೆಗೆ, ಖಾಲಿ‌ ಹುದ್ದೆಗಳ ಭರ್ತಿಗೆ ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ನಿಯಮಗಳನ್ನು ಜಾರಿ ಮಾಡಲಾಗುವುದು ಎಂದರು.

ಕರ್ನಾಟಕ ಹೈಕೋರ್ಟ್‌ನಲ್ಲಿ ನಾನು ಕಂಪ್ಯೂಟರ್ ರಿಜಿಸ್ಟ್ರಾರ್ ಆಗಿದ್ದ ಸಂದರ್ಭದಲ್ಲಿ ಡಿಜಿಟಲೀಕರಣಕ್ಕೆ ಹೆಚ್ಚು ಒತ್ತು ನೀಡಿ ಕಾರ್ಯನಿರ್ವಹಿಸಲಾಗಿದೆ. ಅದೇ ರೀತಿ ಗ್ರಾಹಕರ ವೇದಿಕೆಗಳನ್ನು ಡಿಜಿಟಲೀಕರಣ ಮಾಡಲು ಕ್ರಮ ವಹಿಸಲಾಗುವುದು. ಅರ್ಜಿಗಳ ಸಲ್ಲಿಕೆಯನ್ನು ಕಂಪ್ಯೂಟರೀಕರಣಗೊಳಿಸುವ ಜತೆಗೆ, ವಿಡಿಯೋ ಕಾನ್ಫೆರೆನ್ಸ್‌ಗೂ ಒತ್ತು ನೀಡಲಾಗುವುದು. ಮೊಬೈಲ್ ಆ್ಯಪ್ ಮೂಲಕ ಇಡೀ ಗ್ರಾಹಕರ ವೇದಿಕೆಗಳ ಕಾರ್ಯಚಟುವಟಿಕೆಯನ್ನು ಬೆರಳ ತುದಿಯಲ್ಲಿ ಲಭ್ಯವಾಗುವಂತೆ ಮಾಡಲಾಗುವುದು. ಇದಕ್ಕೆ ವಕೀಲರು, ಕಕ್ಷಿದಾರರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

Related Articles

Comments (0)

Leave a Comment