ರೈಲು ಅಪಘಾತದ ಸಾವು ಸಾಬೀತಿಗೆ ಟಿಕೆಟ್ ಅಗತ್ಯವಿಲ್ಲ; ಮೃತನ ಕುಟುಂಬಕ್ಕೆ ಪರಿಹಾರ ನೀಡಲು ಹೈಕೋರ್ಟ್ ಆದೇಶ
- by Jagan Ramesh
- May 21, 2025
- 111 Views

ಬೆಂಗಳೂರು: ಚಲಿಸುತ್ತಿದ್ದ ರೈಲಿನಿಂದ ಬಿದ್ದು ಮೃತಪಟ್ಟ ವ್ಯಕ್ತಿಯ ಬಳಿ ರೈಲು ಪ್ರಯಾಣದ ಟಿಕೆಟ್ ದೊರಕಲಿಲ್ಲ ಎಂದ ಮಾತ್ರಕ್ಕೆ ರೈಲು ಅಪಘಾತದಿಂದ ಸಾವು ಸಂಭವಿಸಿಲ್ಲವೆಂದು ಹೇಳಲಾಗದು ಎಂದಿರುವ ಹೈಕೋರ್ಟ್, ಮೃತ ವ್ಯಕ್ತಿಯ ಕುಟುಂಬದವರಿಗೆ 8 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದೆ.
ಹತ್ತು ವರ್ಷಗಳ ಹಿಂದೆ ರೈಲು ಅಪಘಾತದಲ್ಲಿ ಮೃತಪಟ್ಟಿದ್ದ ವಿಜಯಪುರದ ಅಮೀನಸಾಬ್ ಮುಲ್ಲಾ ಎಂಬಾತನ ಪತ್ನಿ ಫಜಲನಬಿ ಹಾಗೂ ಮಕ್ಕಳು ಸಲ್ಲಿಸಿದ್ದ ಮೇಲ್ಮನವಿ ಮಾನ್ಯ ಮಾಡಿರುವ ನ್ಯಾಯಮೂರ್ತಿ ಹಂಚಾಟೆ ಸಂಜೀವ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಪ್ರಕರಣವೇನು?
ಅಮೀನಸಾಬ್ ಮುಲ್ಲಾ 2015ರ ಏಪ್ರಿಲ್ 6ರಂದು ವಿಜಯಪುರ ರೈಲು ನಿಲ್ದಾಣದಲ್ಲಿ ಮಹಾರಾಷ್ಟ್ರದ ಲಿಂಬಾಲಾಗೆ ತೆರಳಲು ಟಿಕೆಟ್ ಖರೀದಿಸಿ, ಅಲ್ಲಿಯೇ ರೈಲು ಏರಿದ್ದರು. ಆದರೆ, ಚಲಿಸುವ ರೈಲಿನಿಂದ ಆಕಸ್ಮಿಕವಾಗಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದರು. ಮೃತನ ಕುಟುಂಬ ಸದಸ್ಯರು ಪರಿಹಾರ ಕೋರಿ ಬೆಂಗಳೂರಿನ ಆರ್‌ಸಿಟಿಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಧಿಕರಣ, ಅಪಘಾತದಲ್ಲಿ ಅಮೀನಸಾಬ್ ಮೃತಪಟ್ಟಿರುವ ಬಗ್ಗೆ ಯಾವುದೇ ಮಾಹಿತಿಯನ್ನು ರೈಲ್ವೇ ಇಲಾಖೆಗೆ ನೀಡಿಲ್ಲ ಮತ್ತು ಮೃತ ಪ್ರಯಾಣಿಕನ ಬಳಿ ರೈಲು ಟಿಕೆಟ್ ದೊರೆತಿಲ್ಲ. ಆದ್ದರಿಂದ, ಮೃತನ ಕುಟುಂಬದವರು ಪರಿಹಾರಕ್ಕೆ ಅರ್ಹರಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿತ್ತು. ಇದರಿಂದ, ಮೃತನ ಪತ್ನಿ ಹಾಗೂ ಮಕ್ಕಳು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಹೈಕೋರ್ಟ್ ಹೇಳಿದ್ದೇನು?
ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ಬೆಂಗಳೂರು ವಿಭಾಗದ ರೈಲ್ವೇ ಪರಿಹಾರ ನ್ಯಾಯಾಧಿಕರಣದ (ಆರ್‌ಸಿಟಿ) ಆದೇಶ ಪರಿಶೀಲಿಸಿದ ನ್ಯಾಯಪೀಠ, 2015ರ ಏಪ್ರಿಲ್ 6ರಂದು ವಿಜಯಪುರ ಮತ್ತು ಮಿಂಚಿನಹಾಳ ರೈಲು ನಿಲ್ದಾಣಗಳ ಮಧ್ಯೆ ರೈಲು ಟ್ರ್ಯಾಕ್‌ನಲ್ಲಿ ಪುರುಷನೊಬ್ಬನ ಮೃತದೇಹ ಪತ್ತೆಯಾಗಿದೆ ಎಂದು ರೈಲ್ವೇ ಲೋಕೋ ಪೈಲಟ್ ವಾಕಿಟಾಕಿ ಮೂಲಕ ಸಂದೇಶ ನೀಡಿದ್ದು, ಆ ಸಂಬಂಧ ಎಫ್ಐಆರ್ ಕೂಡ ದಾಖಲಾಗಿದೆ. ದೇಹದ ಪ್ರಮುಖ ಅಂಗಾಂಗಗಳಿಗೆ ಆದ ಗಾಯಗಳಿಂದ ಆಘಾತಕ್ಕೊಳಗಾಗಿ ಆತ ಮೃತಪಟ್ಟಿರುವುದಾಗಿ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಹೇಳಲಾಗಿದೆ. ಈ ಎಲ್ಲ ದಾಖಲೆಗಳು ಆ ವ್ಯಕ್ತಿ ರೈಲು ಅಪಘಾತದಲ್ಲೇ ಸಾವಿಗೀಡಾಗಿರುವುದನ್ನು ಖಚಿತಪಡಿಸುತ್ತವೆ ಎಂದು ನ್ಯಾಯಾಲಯ ತಿಳಿಸಿದೆ.
ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದ ವ್ಯಕ್ತಿಯ ಕೈಕಾಲುಗಳು ತುಂಡಾಗಿ, ತಲೆಗೆ ಗಂಭೀರ ಗಾಯವಾಗಿ, ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತನಿಖಾವರದಿಯಲ್ಲಿ ಹೇಳಲಾಗಿದೆ. ಕೂಡಲೇ ಶವವನ್ನು ಆಸ್ಪತ್ರೆಗೆ ಸಾಗಿಸಿ, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಬಹುಶಃ ಶವ ಪರೀಕ್ಷೆ ಸಂದರ್ಭದಲ್ಲಿ ಟಿಕೆಟ್ ಕಳೆದುಹೋಗಿರಬಹುದು. ಸಹಜವಾಗಿ ಮೃತನ ಕುಟುಂಬದವರು, ಆಘಾತಕ್ಕೆ ಒಳಗಾಗಿದ್ದರಿಂದ ಆ ಸಂದರ್ಭದಲ್ಲಿ ಅವರು ಟಿಕೆಟ್ ಬಗ್ಗೆ ಆಲೋಚಿಸದಿರಬಹುದು. ಹೀಗಿರುವಾಗ, ಮೃತನ ಕುಟುಂಬ ಸದಸ್ಯರ ಅರ್ಜಿ ವಜಾಗೊಳಿಸಿರುವ ಆರ್‌ಸಿಟಿ ಕ್ರಮ ಸರಿಯಲ್ಲ ಎಂದು ಅಭಿಪ್ರಾಯ ಪಟ್ಟಿರುವ ಹೈಕೋರ್ಟ್, ನ್ಯಾಯಾಧಿಕರಣದ ಆದೇಶ ರದ್ದುಪಡಿಸಿ, ಅಮೀನಸಾಬ್ ಕುಟುಂಬದವರು ಗರಿಷ್ಠ 8 ಲಕ್ಷ ರೂ. ವರೆಗೆ ಪರಿಹಾರಕ್ಕೆ ಅರ್ಹರು ಎಂದು ಆದೇಶಿಸಿದೆ.
Related Articles
Thank you for your comment. It is awaiting moderation.
Comments (0)