ಅಭಿವೃದ್ಧಿ ಯೋಜನೆಗೆ ಭೂಮಿ ನೀಡುವ ರೈತರು ಪಡೆಯುವ ಪರಿಹಾರಕ್ಕೆ ಜಿಎಸ್‌ಟಿ ವಿಧಿಸುವಂತಿಲ್ಲ; ಹೈಕೋರ್ಟ್

ಬೆಂಗಳೂರು: ಅಭಿವೃದ್ಧಿ ಯೋಜನೆಗಳಿಗೆ ಭೂಮಿ ಕಳೆದುಕೊಳ್ಳುವ ರೈತರಿಗೆ ಪರಿಹಾರ ರೂಪದಲ್ಲಿ ನೀಡುವ ಮೊತ್ತಕ್ಕೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸುವಂತಿಲ್ಲ ಎಂದು ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ.

ಪರಿಹಾರ ಧನಕ್ಕೆ ಜಿಎಸ್‌ಟಿ ಪಾವತಿಸುವಂತೆ ಸೂಚಿಸಿ ವಾಣಿಜ್ಯ ತೆರಿಗೆ ಇಲಾಖೆಯ ಶೋಕಾಸ್ ನೋಟಿಸ್‌ಗಳನ್ನು ಪ್ರಶ್ನಿಸಿ ಬೆಂಗಳೂರಿನ ನಿವಾಸಿಗಳಾದ ಆರ್‌. ಆಶಾ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಸ್‌.ಆರ್‌. ಕೃಷ್ಣಕುಮಾರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ಇಷ್ಟವಿಲ್ಲದಿದ್ದರೂ ಭೂಮಿಯನ್ನು ಕಳೆದುಕೊಂಡಿರುವ ಮತ್ತು ಅದರ ಜತೆ ಭಾವನಾತ್ಮಕ ಸಂಬಂಧ ಹೊಂದಿರುವ ರೈತರು ಕಳೆದುಕೊಳ್ಳುವ ಭೂಮಿಗೆ ಪರ್ಯಾಯವಾಗಿ ನಷ್ಟ ತುಂಬಿಕೊಡಲು ಪರಿಹಾರ ಪಡೆಯುತ್ತಾರೆ. ಅದಕ್ಕೆ ಜಿಎಸ್‌ಟಿ ಅಡಿ ತೆರಿಗೆ ವಿಧಿಸುವಂತಿಲ್ಲ ಎಂದು ಆದೇಶಿಸಿದೆ.

ವಾಣಿಜ್ಯ ತೆರಿಗೆ ನೋಟಿಸ್ ರದ್ದು:
ಅರ್ಜಿದಾರರು ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ನಡುವೆ ಆಗಿರುವ ಒಪ್ಪಂದದಲ್ಲಿ ಹಲವು ಷರತ್ತುಗಳು ಒಳಗೊಂಡಿರಬಹುದು. ಆದರೆ, ಅದಕ್ಕೂ ಅರ್ಜಿದಾರರಿಗೆ ನೀಡುವ ಪರಿಹಾರ ಮೊತ್ತಕ್ಕೂ ಸಂಬಂಧವಿಲ್ಲ. ಅದನ್ನು ಸಿಜಿಎಸ್‌ಟಿ/ಕೆಜಿಎಸ್‌ಟಿ ಷೆಡ್ಯೂಲ್‌-2ರ ಎಂಟ್ರಿ 5(ಇ) ಅಡಿ ಸೇವೆ ಎಂದು ಪರಿಗಣಿಸಲಾಗದು. ಒಪ್ಪಂದದ ವಿಚಾರದಲ್ಲಿ ಜಿಎಸ್‌ಟಿ ಕಾಯ್ದೆ ಒಪ್ಪಿಕೊಳ್ಳಬೇಕೆಂದೇನೂ ಇಲ್ಲ. ಸರ್ಕಾರ ಅರ್ಜಿದಾರರಿಂದ ಭೂಮಿ ಸ್ವಾಧೀನಪಡಿಸಿಕೊಂಡಿದೆ. ಅದಕ್ಕೆ ಪರ್ಯಾಯವಾಗಿ ಪರಿಹಾರ ನೀಡುತ್ತಿದೆ. ಅದರಲ್ಲಿ ತೆರಿಗೆ ವಿಧಿಸುವ ಅಗತ್ಯವಿಲ್ಲ ಎಂದಿರುವ ಹೈಕೋರ್ಟ್, ಅರ್ಜಿದಾರರಿಗೆ ವಾಣಿಜ್ಯ ತೆರಿಗೆ ಇಲಾಖೆ ನೀಡಿದ್ದ ನೋಟಿಸ್‌ಗಳನ್ನು ರದ್ದುಗೊಳಿಸಿದೆ.

ಪ್ರಕರಣವೇನು?
ಬೆಂಗಳೂರು ಮೆಟ್ರೋ ರೈಲು ಯೋಜನೆಗಾಗಿ ಬೆಂಗಳೂರು ನಗರದ ಸುತ್ತಮುತ್ತಲ ಹಲವು ರೈತರಿಂದ ಕೆಐಎಡಿಬಿ ಭೂಮಿ ಸ್ವಾಧೀನಪಡಿಸಿಕೊಂಡಿತ್ತು. ಅದಕ್ಕೆ ಪರ್ಯಾಯವಾಗಿ ಮಂಡಳಿ ನಿಗದಿಪಡಿಸಿದ್ದ ಪರಿಹಾರ ಧನವನ್ನು ಅರ್ಜಿದಾರರು ಪಡೆದುಕೊಂಡಿದ್ದರು. ಆದರೆ, ವಾಣಿಜ್ಯ ತೆರಿಗೆ ಇಲಾಖೆ ಆ ಪರಿಹಾರ ಧನಕ್ಕೆ ಜಿಎಸ್‌ಟಿ ಪಾವತಿಸುವಂತೆ ರೈತರಿಗೆ ಶೋಕಾಸ್‌ ನೋಟಿಸ್‌ ನೀಡಿತ್ತು. ರೈತರು ತಮ್ಮ ಪರಿಹಾರ ಧನಕ್ಕೆ ಜಿಎಸ್‌ಟಿ ಅನ್ವಯಿಸುವುದು ಸರಿಯಲ್ಲ ಎಂದು ಮನವಿ ಸಲ್ಲಿಸಿದ್ದರೂ ಅದನ್ನು ಪರಿಗಣಿಸಿರಲಿಲ್ಲ. ಬದಲಿಗೆ ಮೊದಲು ನೀಡಿದ್ದ ತೆರಿಗೆ ಬೇಡಿಕೆ ನೋಟಿಸ್‌ ಅನ್ನು ಕಾಯಂಗೊಳಿಸಲಾಗಿತ್ತು.

ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರರು, ಮೆಟ್ರೋ ಯೋಜನೆಗಾಗಿ ಕೆಎಐಡಿಬಿ ಭೂಮಿ ಸ್ವಾಧೀನಪಡಿಸಿಕೊಂಡು, ಆಗುವ ನಷ್ಟಕ್ಕೆ ಪರಿಹಾರ ನೀಡಿತ್ತು. ಆ ಭೂಮಿ ವರ್ಗಾವಣೆ ಮತ್ತು ಮಾರಾಟ ಜಿಸಿಎಸ್‌ಟಿ/ಕೆಜಿಎಸ್‌ಟಿ ಅಡಿ ಬಂದರೂ ಸಹ ಅದಕ್ಕೆ ಜಿಎಸ್‌ಟಿ ವಿಧಿಸಲು ವಿನಾಯ್ತಿ ಇದೆ. ಆದರೆ, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರವಿಲ್ಲದಿದ್ದರೂ ಸಹ ಪರಿಹಾರ ಧನಕ್ಕೆ ಜಿಎಸ್‌ಟಿ ಪಾವತಿಸುವಂತೆ ನೋಟಿಸ್‌ ನೀಡಿರುವುದು ಕಾನೂನುಬಾಹಿರವಾಗಿದೆ. ಆದ್ದರಿಂದ, ಆ ತೆರಿಗೆ ನೋಟಿಸ್‌ಗಳನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದರು.

Related Articles

Comments (0)

Leave a Comment