ಬ್ಯಾಂಕ್ ಸಾಲ ಮರುಪಾವತಿಸದೆ ವಂಚಿಸಿದ ಆರೋಪ: ರಮೇಶ್‌ ಜಾರಕಿಹೊಳಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆಗೆ ಹೈ ಅನುಮತಿ

ಬೆಂಗಳೂರು: ಸಕ್ಕರೆ ಕಾರ್ಖಾನೆ ಅಭಿವೃದ್ಧಿಗಾಗಿ ಸಹಕಾರಿ ಬ್ಯಾಂಕ್‌ನಿಂದ ಪಡೆದಿರುವ ಸಾಲ ಮತ್ತು ಬಡ್ಡಿ ಸೇರಿ 439 ಕೋಟಿ ರೂ. ಮರುಪಾವತಿಸದೇ ವಂಚಿಸಿದ ಆರೋಪ ಸಂಬಂಧ ಬಿಜೆಪಿ ಶಾಸಕ ರಮೇಶ್‌ ಜಾರಕಿಹೊಳಿ ಮತ್ತಿತರರ ವಿರುದ್ಧ ದಾಖಲಾಗಿರುವ ಪ್ರಕರಣ ಕುರಿತು ಸಕ್ಷಮ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲು ಹೈಕೋರ್ಟ್‌ ಸಿಐಡಿಗೆ ಅನುಮತಿ ನೀಡಿದೆ.

ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್‌ ಬ್ಯಾಂಕ್‌ ಲಿಮಿಟೆಡ್‌ಗೆ 439 ಕೋಟಿ ರೂ. ಸಾಲ ಮರುಪಾವತಿಸದೇ ವಂಚಿಸಿದ ಆರೋಪಕ್ಕೆ ಗುರಿಯಾಗಿರುವ ಸೌಭಾಗ್ಯಲಕ್ಷ್ಮೀ ಶುಗರ್ಸ್‌ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ರಮೇಶ್‌ ಜಾರಕಿಹೊಳಿ, ಮತ್ತಿಬ್ಬರು ನಿರ್ದೇಶಕರಾಗಿದ್ದ ವಸಂತ್‌ ಪಾಟೀಲ್‌ ಮತ್ತು ಶಂಕರ್‌ ಪವಾಡೆ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಪ್ರದೀಪ್‌ ಸಿಂಗ್‌ ಯೆರೂರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಪ್ರಕರಣ‌ ಸಂಬಂಧ ಸಿಐಡಿ ಪೊಲೀಸರು ನಡೆಸಿರುವ ತನಿಖೆಗೆ ಅರ್ಜಿದಾರರು ಸಹಕರಿಸಿದ್ದು, ತನಿಖೆ ಪೂರ್ಣಗೊಂಡಿದೆ. ತನಿಖಾಧಿಕಾರಿಗಳು ಆರೋಪಪಟ್ಟಿ ಸಲ್ಲಿಕೆಗೆ ಸಿದ್ದವಾಗಿದ್ದು, ಅದನ್ನು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಬಹುದು. ಆದರೆ, ಹೈಕೋರ್ಟ್‌ ಆದೇಶ ಮಾಡುವವರೆಗೆ ವಿಶೇಷ ನ್ಯಾಯಾಲಯ ಆರೋಪ ಪಟ್ಟಿ ಸಂಬಂಧ ಆತುರದ ಕ್ರಮಕೈಗೊಳ್ಳಬಾರದು ಎಂದು ನಿರ್ದೇಶಿಸಿ, ಅರ್ಜಿ ವಿಚಾರಣೆಯನ್ನು ಜೂನ್‌ 3ಕ್ಕೆ ಮುಂದೂಡಿತು.

ಅರ್ಜಿದಾರರ ಆಕ್ಷೇಪವೇನು?
ಇದಕ್ಕೂ ಮುನ್ನ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ರವಿ ಬಿ. ನಾಯಕ್‌, ಹಾಲಿ ಅರ್ಜಿ ಇತ್ಯರ್ಥವಾಗುವವರೆಗೆ ಸಕ್ಷಮ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲು ಅನುಮತಿಸಬಾರದು. ಆರೋಪ ಪಟ್ಟಿ ಸಲ್ಲಿಸಿದರೆ ಈ ಅರ್ಜಿ ಅನೂರ್ಜಿತವಾಗಲಿದೆ. ನಮ್ಮ ಪ್ರಕಾರ ಎಫ್‌ಐಆರ್‌ ಮತ್ತು ಆರೋಪ ಪಟ್ಟಿಯೂ ಊರ್ಜಿತವಾಗುವುದಿಲ್ಲ. ಇದು ರಾಜಕೀಯ ಪ್ರೇರಿತ ಪ್ರಕರಣವಾಗಿದ್ದು, 16 ವರ್ಷಗಳ ಬಳಿಕ ಪ್ರಕರಣ ದಾಖಲಿಸಲಾಗಿದೆ ಎಂದು ಆಕ್ಷೇಪಿಸಿದರು.

ಪ್ರಕರಣ ಸಂಬಂಧ ಸಲ್ಲಿಕೆಯಾಗಿರುವ ಆರೋಪ ಪಟ್ಟಿಯಲ್ಲಿ ಅರ್ಜಿದಾರರನ್ನು ದೋಷಮುಕ್ತಗೊಳಿಸಲಾಗಿದೆಯೇ ಅಥವಾ ಆರೋಪಿಯನ್ನಾಗಿಸಲಾಗಿದೆಯೇ ಎಂದು ಸರ್ಕಾರದ ಪರ ವಕೀಲರನ್ನು ನ್ಯಾಯಪೀಠ ಪ್ರಶ್ನಿಸಿತು.

ಅದಕ್ಕುತ್ತರಿಸಿದ ಸಿಐಡಿ ಪರ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್‌. ಜಗದೀಶ್‌, 2024ರ ಮಾರ್ಚ್ 15ರಂದು ರಮೇಶ್‌ ಜಾರಕಿಹೊಳಿ ಅವರಿಗೆ ಸಿಐಡಿ ತನಿಖೆಗೆ ಸಹಕರಿಸುವಂತೆ ಹೈಕೋರ್ಟ್ ಆದೇಶಿಸಿತ್ತು. ಈಗ, 2 ಸಾವಿರ ಪುಟಗಳ ಆರೋಪ ಪಟ್ಟಿ ಸಿದ್ಧವಾಗಿದ್ದು, ವಾರಾಂತ್ಯದಲ್ಲಿ ಸಕ್ಷಮ ಕೋರ್ಟ್‌ಗೆ ಆರೋಪ ಪಟ್ಟಿ ಸಲ್ಲಿಸಲಾಗುವುದು. ಪ್ರಕರಣದಲ್ಲಿ ಜಾರಕಿಹೊಳಿ ಪಾತ್ರವಿದೆ. ಅವರು ಆರೋಪ ಪಟ್ಟಿಯನ್ನು ಪ್ರಶ್ನಿಸಬಹುದಾಗಿದೆ. ಸಂಜ್ಞೇ (ಕಾಗ್ನಿಜೆನ್ಸ್) ಪರಿಗಣಿಸದ ಹೊರತು ಅರ್ಜಿದಾರರಿಗೆ ಆರೋಪ ಪಟ್ಟಿಯ ಪ್ರತಿ ಸಿಗುವುದಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಆಗ ನ್ಯಾಯಪೀಠ, ಆರೋಪ ಪಟ್ಟಿಯಲ್ಲಿ ಅರ್ಜಿದಾರರನ್ನು ಉಲ್ಲೇಖಿಸದಿದ್ದರೆ ಈ ಅರ್ಜಿ ನಿಮ್ಮ ಪರವಾಗಿರುತ್ತಿತ್ತು. ವಿಚಾರಣಾ ನ್ಯಾಯಾಲಯದಲ್ಲಿ ಆತುರದ ನಿರ್ಧಾರ ಕೈಗೊಳ್ಳದಂತೆ ಆದೇಶ ಮಾಡಲಾಗುವುದು. ಅಗತ್ಯ ಬಿದ್ದರೆ ಆರೋಪ ಪಟ್ಟಿ ರದ್ದತಿ ಕೋರಿಕೆಯನ್ನು ಅರ್ಜಿಗೆ ಸೇರ್ಪಡೆ ಮಾಡಬಹುದು ಎಂದು ಅರ್ಜಿದಾರರಿಗೆ ಮೌಖಿಕವಾಗಿ ಸಲಹೆ ನೀಡಿತು.

Related Articles

Comments (0)

Leave a Comment