ಸೌಜನ್ಯಾ ಕೊಲೆ ಕುರಿತ ವಿಡಿಯೊ ಪ್ರಸಾರ; ಯೂಟ್ಯೂಬರ್ ಸಮೀರ್‌ಗೆ ಪೊಲೀಸರು ನೀಡಿದ್ದ ನೋಟಿಸ್‌ಗೆ ಹೈಕೋರ್ಟ್ ತಡೆ
- by Jagan Ramesh
- March 6, 2025
- 894 Views

ಬೆಂಗಳೂರು: ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೊ ಪ್ರಸಾರ ಮಾಡಿದ್ದ ಯೂಟ್ಯೂಬರ್ ಎಂ.ಡಿ. ಸಮೀರ್ ಎಂಬಾತನಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಬಳ್ಳಾರಿ ಪೊಲೀಸರು ನೀಡಿದ್ದ ನೋಟಿಸ್‌ಗೆ ತಡೆಯಾಜ್ಞೆ ನೀಡಿರುವ ಹೈಕೋರ್ಟ್, ತನಿಖಾಧಿಕಾರಿಯ ಕಾರ್ಯವೈಖರಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಸಂಬಂಧ ಮಾರ್ಚ್ 6ರಂದು (ಗುರುವಾರ) ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಮಾರ್ಚ್ 5ರ ರಾತ್ರಿ ಬಳ್ಳಾರಿ ಪೊಲೀಸರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಸೆಕ್ಷನ್ 35(3) ಅಡಿ ಜಾರಿಗೊಳಿಸಿದ್ದ ನೋಟಿಸ್ ರದ್ದುಕೋರಿ ಯೂಟ್ಯೂಬರ್ ಸಮೀರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ವಿಚಾರಣೆಗೆ ಹಾಜರಾಗುವಂತೆ ಬಿಎನ್‌ಎಸ್‌ಎಸ್ ಸೆಕ್ಷನ್ 35(3) ಅಡಿ ನೋಟಿಸ್ ಜಾರಿ ಮಾಡಿರುವುದನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ. 2024ರ ಡಿಸೆಂಬರ್ 30ರಂದು ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಗೆ ವಿರುದ್ಧವಾಗಿ ಬಳ್ಳಾರಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಸ್ಥಾಪಿತ ಕಾನೂನಿನ ಪ್ರಕಾರ ನೋಟಿಸ್ ಜತೆಗೆ ಎಫ್‌ಐಆರ್ ಪ್ರತಿ ಲಗತ್ತಿಸಬೇಕು. ಇದನ್ನು ಉಲ್ಲಂಘಿಸಲಾಗಿದೆ. ಆದ್ದರಿಂದ, ಮುಂದಿನ ವಿಚಾರಣೆವರೆಗೆ ನೋಟಿಸ್‌ಗೆ ತಡೆಯಾಜ್ಞೆ ನೀಡಲಾಗಿದೆ ಎಂದು ಆದೇಶಿಸಿತಲ್ಲದೆ, ಅರ್ಜಿ ವಿಚಾರಣೆಯನ್ನು ಮಾರ್ಚ್ 12ಕ್ಕೆ ಮುಂದೂಡಿತು.
ಅರ್ಜಿದಾರರ ಆಕ್ಷೇಪವೇನು?
ಇದಕ್ಕೂ ಮುನ್ನ ಸಮೀರ್ ಪರ ವಕೀಲ ಎ. ವೇಲನ್ ವಾದ ಮಂಡಿಸಿ, ಯೂಟ್ಯೂಬರ್ ಆಗಿರುವ ಅರ್ಜಿದಾರರು, ಸೌಜನ್ಯ ಕೊಲೆಗೆ ಸಂಬಂಧಿಸಿದಂತೆ ವಿಡಿಯೊ ಮಾಡಿ ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಇದನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ವಿಡಿಯೊ ಆಧರಿಸಿ ಪೊಲೀಸರು ಸ್ವಯಂಪ್ರೇರಿತವಾಗಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 299ರ (ಧಾರ್ಮಿಕ ಭಾವನೆಗೆ ಧಕ್ಕೆ) ಅಡಿ ಪ್ರಕರಣ ದಾಖಲಿಸಿದ್ದಾರೆ. ವಿಡಿಯೊದಲ್ಲಿ ಯಾವುದೇ ಧರ್ಮದ ಬಗ್ಗೆ ಸಮೀರ್ ಮಾತನಾಡಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಬುಧವಾರ ರಾತ್ರಿ ಬೆಂಗಳೂರಿನ ವಕೀಲರ ಕಚೇರಿಗೆ ನುಗ್ಗಿ ಸಮೀರ್ ಅವರನ್ನು ಬಂಧಿಸಲು ಪೊಲೀಸರು ಪ್ರಯತ್ನಿಸಿದ್ದಾರೆ. ವಕೀಲರ ಮಧ್ಯಪ್ರವೇಶದಿಂದ ಅದು ತಪ್ಪಿದೆ. ಬುಧವಾರ ರಾತ್ರಿ 10.45ಕ್ಕೆ ನೋಟಿಸ್ ನೀಡಿ, ಗುರುವಾರ ಬೆಳಗ್ಗೆ 10.30ಕ್ಕೆ ಬಳ್ಳಾರಿಯ ಪೊಲೀಸ್ ಠಾಣೆಗೆ ತನಿಖೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ನೋಟಿಸ್ ಜತೆಗೆ ಎಫ್‌ಐಆರ್ ಪ್ರತಿ ಲಗತ್ತಿಸಿಲ್ಲ. ಪೊಲೀಸರು ಈ ರೀತಿ ನಡೆದುಕೊಳ್ಳುವ ಅಗತ್ಯವೂ ಇರಲಿಲ್ಲ ಎಂದು ಆಕ್ಷೇಪಿಸಿದರು.
ತನಿಖಾಧಿಕಾರಿ ನಡೆಗೆ ಕೋರ್ಟ್ ಕಿಡಿ:
ಆಗ ನ್ಯಾಯಪೀಠ, ಇದು ಧರ್ಮಸ್ಥಳದ ಪ್ರಕರಣವೇ? ನೋಟಿಸ್‌ನೊಂದಿಗೆ ಲಗತ್ತಿಸಿರುವ ಎಫ್‌ಐಆರ್ ಎಲ್ಲಿ? ಇದೇ ನ್ಯಾಯಾಲಯದ ಆದೇಶ ಆಧರಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯನ್ನು ನೋಡಿಲ್ಲವೇ? ಸುತ್ತೋಲೆಗೆ ವಿರುದ್ಧವಾಗಿ ಈ ವ್ಯಕ್ತಿ (ತನಿಖಾಧಿಕಾರಿ) ಹೇಗೆ ನಡೆದುಕೊಳ್ಳುತ್ತಾರೆ? ಬಿಎನ್‌ಎಸ್ಎಸ್ ಸೆಕ್ಷನ್ 35(3)ರ ಅಡಿ ಯಾರಿಗಾದರೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದರೆ, ಅದರ ಜತೆ ಎಫ್‌ಐಆರ್ ಪ್ರತಿಯನ್ನೂ ಲಗತ್ತಿಸಬೇಕು. ಅದನ್ನೂ ಸಹ ಅಂಚೆ ಮೂಲಕ ಕಳುಹಿಸಿ ಖಾತ್ರಿಪಡಿಸಿರಬೇಕು. ಇರುವುದು ಇದೊಂದೇ ಮಾರ್ಗ. ವಾಟ್ಸ್‌ಆ್ಯಪ್ ಮೂಲಕವೂ ನೋಟಿಸ್ ಕಳುಹಿಸುವಂತಿಲ್ಲ. ಅದನ್ನು ತನಿಖಾಧಿಕಾರಿ ಪಾಲಿಸಿದ್ದಾರೆಯೇ? ಇದರಲ್ಲಿ ಅಂಥ ತುರ್ತೇನಿತ್ತು? ಪ್ರಭಾವಿಯಾದವರನ್ನು ವಿಡಿಯೊದಲ್ಲಿ ಬಿಂಬಿಸಿದ್ದಾರೆ ಎಂದೇ? ಅದು ಬಿಟ್ಟು ಬೇರೇನು ಇರಲು ಸಾಧ್ಯ? ಎಂದು ತೀಕ್ಷ್ಣವಾಗಿ ಪ್ರಶ್ನಿಸಿತು.
ಬುಧವಾರ ರಾತ್ರಿ 10.45ಕ್ಕೆ ನೋಟಿಸ್ ನೀಡಿ, ಬೆಳಗ್ಗೆ ಎದ್ದು ಬನ್ನಿ ಎಂದರೆ ಹೇಗೆ? ಎಫ್‌ಐಆರ್ ಇಲ್ಲ, ಏನಿಲ್ಲ? ಇದು ಸುತ್ತೋಲೆಗೆ ವಿರುದ್ಧವಾದ ಕ್ರಮ. ವಿಡಿಯೊದಲ್ಲಿ ಮಾನಹಾನಿಕಾರಕ ಅಂಶಗಳಿವೆ ಎಂದು ದೂರು ನೀಡಿದವರು ಯಾರು? ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದಾರೆ. ಇದು ಯೂಟ್ಯೂಬರ್ ಮೂಲಭೂತ ಹಕ್ಕಿನ ವಿಚಾರವಾಗಿದೆ. ನೋಟಿಸ್ ಅನುಪಾಲಿಸಿಲ್ಲ ಎಂದರೆ ಮುಂದಿನ ಹಂತ ಬಂಧನವಾಗುತ್ತದೆ. ನಿಮ್ಮ ಉದ್ದೇಶ ಬಂಧಿಸಬೇಕು ಎನ್ನುವುದೇ ಅಗಿದ್ದು, ಅವರು ವಿಚಾರಣೆಗೆ ಬಂದಿಲ್ಲ ಎಂಬ ಆಧಾರ ಸೃಷ್ಟಿಸಲು ಉದ್ದೇಶಿಸಿದ್ದಂತಿದೆ ಎಂದು ಕುಟುಕಿತು.
ಕಾನೂನಿನ ಅನ್ವಯ ನೋಟಿಸ್ ನೀಡದಿದ್ದರೆ ಅರ್ಜಿದಾರರ ವಿಚಾರಣೆಗೆ ಅನುಮತಿಸುವುದಿಲ್ಲ. ನೋಟಿಸ್ ನೀಡುವಲ್ಲಿ ಕಾನೂನು ಪಾಲನೆಯಾಗಿಲ್ಲ ಎಂದಾದರೆ ಅದಕ್ಕೆ ಗೌರವ ನೀಡಬೇಲಿಲ್ಲ ಎಂಬುದು ಸ್ಥಾಪಿತ ಕಾನೂನಾಗಿದೆ. ಇನ್ನು ಬಂಧಿಸುವ ಪ್ರಶ್ನೆ ಎಲ್ಲಿ? ಬಂಧನವಿರಲಿ, ಅರ್ಜಿದಾರರು ವಿಚಾರಣೆಗೆ ಹಾಜರಾಗಬೇಕು ಎಂದು ನೀವು ಕೇಳುವಂತೆಯೂ ಇಲ್ಲ, ಅದು ದೂರದ ಮಾತು. ಕಾನೂನು ಏನಿದೆ ಎಂಬುದರ ಕುರಿತು ತನಿಖಾಧಿಕಾರಿಗೆ ತಿಳಿ ಹೇಳಬೇಕಿದೆ. ಕಾನೂನಿನ ಬಗ್ಗೆ ಅರಿವಿಲ್ಲದೇ ಅಷ್ಟು ತುರ್ತಾಗಿ ಅಧಿಕಾರ ಚಲಾಯಿಸಲು ಮುಂದಾಗಿದ್ದಾರೆ ಎಂದು ತನಿಖಾಧಿಕಾರಿಯ ಕಾರ್ಯವೈಖರಿಯನ್ನು ನ್ಯಾಯಾಲಯ ಖಂಡಿಸಿತು.
Related Articles
Thank you for your comment. It is awaiting moderation.
Comments (0)