ಮಾಹಿತಿ ಆಯುಕ್ತರ ನೇಮಕಾತಿಗೆ ಶೋಧನಾ ಸಮಿತಿ ರಚಿಸಿಲ್ಲ; ಹೈಕೋರ್ಟ್‌ಗೆ ರಾಜ್ಯ ಸರ್ಕಾರದ ಹೇಳಿಕೆ

ಬೆಂಗಳೂರು: ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಮುಖ್ಯ ಆಯುಕ್ತರು (ಸಿಐಸಿ) ಹಾಗೂ ಮಾಹಿತಿ ಆಯುಕ್ತರ (ಐಸಿ) ನೇಮಕಾತಿಗೂ ಮೊದಲು ಶೋಧನಾ ಸಮಿತಿ ರಚನೆ ಮಾಡಲಾಗಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ. ಇದೇ ವೇಳೆ, ಆಯುಕ್ತರ ನೇಮಕಾತಿಗೆ ತಡೆ ನೀಡಬೇಕೆಂಬ ಮಧ್ಯಂತರ ಮನವಿಗೆ ಸಂಬಂಧಿಸಿದ ಆದೇಶವನ್ನು ನ್ಯಾಯಾಲಯ ಕಾಯ್ದಿರಿಸಿದೆ.

ಮಾಹಿತಿ ಆಯುಕ್ತರ ನೇಮಕಾತಿಯಲ್ಲಿ ಸುಪ್ರೀಂಕೋರ್ಟ್ ಆದೇಶವನ್ನು ರಾಜ್ಯ ಸರ್ಕಾರ ಪಾಲಿಸಿಲ್ಲ ಎಂದು ಆಕ್ಷೇಪಿಸಿ ಮಾಹಿತಿ ಆಯುಕ್ತರ ಹುದ್ದೆ ಆಕಾಂಕ್ಷಿಯೂ ಆಗಿದ್ದ ಬೆಂಗಳೂರಿನ ಜೆಪಿ ನಗರದ ನಿವಾಸಿ ಕೆ.ಮಲ್ಲಿಕಾರ್ಜುನ ರಾಜು ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಆರ್‌. ದೇವದಾಸ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಮಧ್ಯಂತರ ತಡೆಗೆ ಅರ್ಜಿದಾರರ ಮನವಿ:
ಅರ್ಜಿದಾರರ ಪರ ವಕೀಲ ಅಶೋಕ್‌ ಬಿ. ಪಾಟೀಲ್‌ ವಾದ ಮಂಡಿಸಿ, ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಮುಖ್ಯ ಮಾಹಿತಿ ಆಯುಕ್ತರು ಮತ್ತು ಮಾಹಿತಿ ಆಯುಕ್ತರ ನೇಮಕಾತಿಗೂ ಮುನ್ನ ತಮಿಳುನಾಡು, ಮಹಾರಾಷ್ಟ್ರ, ಹರಿಯಾಣ ಮತ್ತು ತ್ರಿಪುರ ರಾಜ್ಯಗಳಲ್ಲಿ ಶೋಧನಾ ಸಮಿತಿ ರಚಿಸಲಾಗಿದೆ. ಆದ್ದರಿಂದ, ಸುಪ್ರೀಂಕೋರ್ಟ್‌ ನಿರ್ದೇಶನಗಳು ಕರ್ನಾಟಕ ರಾಜ್ಯಕ್ಕೆ ಅನ್ವಯಿಸುವುದಿಲ್ಲ ಎನ್ನಲಾಗದು. ಶೋಧನಾ ಸಮಿತಿಯೇ ಇಲ್ಲದೇ ನೇಮಕಗೊಂಡಿರುವವರು ಪ್ರಮಾಣ ಸ್ವೀಕರಿಸಿ, ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದ್ದರಿಂದ, ಮಧ್ಯಂತರ ಮನವಿ ಕುರಿತು ಆದೇಶ ಮಾಡಬೇಕು ಎಂದು ನ್ಯಾಯಪೀಠವನ್ನು ಕೋರಿದರು.

ಶೋಧನಾ ಸಮಿತಿ ಕಡ್ಡಾಯವೆಂದು ಸುಪ್ರೀಂ ಹೇಳಿಲ್ಲ:
ಅಡ್ವೊಕೇಟ್‌ ಜನರಲ್‌ (ಎಜಿ) ಕೆ. ಶಶಿಕಿರಣ್ ಶೆಟ್ಟಿ ಅವರು, ಶೋಧನಾ ಸಮಿತಿ ರಚಿಸುವುದು ಕಡ್ಡಾಯವೆಂದು ಸುಪ್ರೀಂಕೋರ್ಟ್‌ ಹೇಳಿಲ್ಲ. ಶೋಧನಾ ಸಮಿತಿ ರಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ನಿರ್ದಿಷ್ಟ ನಿರ್ದೇಶನ ನೀಡಿಲ್ಲ. ಶೋಧನಾ ಸಮಿತಿ ರಚಿಸುವುದು ಸೂಕ್ತ ಎಂದು ಹೇಳಿದೆ. ಅರ್ಜಿದಾರರು ತಾವು ಹುದ್ದೆಗೆ ಅರ್ಹರು ಎಂದು ಹೇಳಿದ ಮಾತ್ರಕ್ಕೆ ತಡೆಯಾಜ್ಞೆ ಪ್ರಶ್ನೆ ಉದ್ಭವಿಸುವುದಿಲ್ಲ. ನೇಮಕಾತಿ ಸಂಬಂಧ ಯಾವುದೇ ಆಕ್ಷೇಪವಿದ್ದರೂ ಅರ್ಜಿದಾರರು ಸುಪ್ರೀಂಕೋರ್ಟ್‌ ಮೊರೆ ಹೋಗಬಹುದು ಎಂದರು.

ನೇಮಕಾತಿಗೆ ಯಾವ ಪ್ರಕ್ರಿಯೆ ಅನುಸರಿಸಲಾಗಿದೆ ಎಂಬ ಸಂಬಂಧ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಬೇಕಿದ್ದು, ಅಲ್ಲಿ ಒಪ್ಪಿಗೆ ಪಡೆಯಲಾಗುವುದು. ಸುಪ್ರೀಂಕೋರ್ಟ್‌ ಪರಿಗಣನೆಗೆ ಅರ್ಜಿ ಒಳಪಟ್ಟಿರುವಾಗ ಈ ಅರ್ಜಿ ಪುರಸ್ಕರಿಸುವುದು ಸೂಕ್ತವಲ್ಲ ಎಂದು‌ ತಿಳಿಸಿದರು. ಆಗ ನ್ಯಾಯಪೀಠ, ಶೋಧನಾ ಸಮಿತಿ ರಚಿಸಲಾಗಿಲ್ಲ ಎಂದು ಹೇಳುತ್ತಿರುವಿರೇ ಎಂದು ಎಜಿ ಅವರನ್ನು ಪ್ರಶ್ನಿಸಿತು. ಎಜಿ ಅವರು, ಶೋಧನಾ ಸಮಿತಿ ಇರಲಿಲ್ಲ ಎಂದರು. ಅದಕ್ಕೆ ನ್ಯಾಯಪೀಠ, ಸುಪ್ರೀಂಕೋರ್ಟ್‌ ಶೋಧನಾ ಸಮಿತಿ ರಚಿಸಲೇಬೇಕು ಎಂದು ಹೇಳಿಲ್ಲ ಎನ್ನುವುದು ನಿಮ್ಮ ನಿಲುವಾಗಿದೆ ಎಂದಿತು. ಇದಕ್ಕೆ ಎಜಿ ಶಶಿಕಿರಣ್ ಶೆಟ್ಟಿ ಹೌದು ಎಂದರು.

ರಿಟ್ ಅರ್ಜಿ ಊರ್ಜಿತವಾಗದು:
ಪ್ರತಿವಾದಿ ಆಯುಕ್ತರ ಪರವಾಗಿ ಹಾಜರಿದ್ದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌, ಅರ್ಜಿದಾರರು ಸಿಐಸಿ ಹುದ್ದೆಗೆ ಅರ್ಜಿ ಹಾಕಿರಲಿಲ್ಲ. ಸಿಐಸಿಯಾಗಿ ನೇಮಕವಾಗಲು ಆಶಿತ್‌ ಮೋಹನ್‌ ಪ್ರಸಾದ್‌ ಅರ್ಹರಲ್ಲ ಎಂಬುದಕ್ಕೆ ಸಂಬಂಧಿಸಿದಂತೆ ಯಾವುದೇ ಅನುಮಾನ ಅರ್ಜಿಯಲ್ಲಿಲ್ಲ. ಆದ್ದರಿಂದ, ಅರ್ಜಿ ವಜಾಗೊಳಿಸಬೇಕು ಎಂದು ಕೋರಿದರು. ಆಗ ನ್ಯಾಯಮೂರ್ತಿಗಳು, ಸುಪ್ರೀಂಕೋರ್ಟ್‌ ನಿರ್ದೇಶನಕ್ಕೆ ವಿರುದ್ಧವಾಗಿ ನೇಮಕಾತಿ ನಡೆಸಿರುವುದರಿಂದ ಅವುಗಳನ್ನು ರದ್ದುಪಡಿಸಬೇಕು ಎನ್ನುವುದು ಅರ್ಜಿದಾರರ ಮನವಿಯಾಗಿದೆ ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ಪ್ರೊ. ರವಿವರ್ಮ ಕುಮಾರ್, ಶೋಧನಾ ಸಮಿತಿ ರಚಿಸಬೇಕು ಎಂದು ಸುಪ್ರೀಂಕೋರ್ಟ್‌ ನಿರ್ದೇಶಿಸಿಲ್ಲ. ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇರುವುದರಿಂದ ಈ ರಿಟ್ ಅರ್ಜಿ ಊರ್ಜಿತವಾಗುವುದಿಲ್ಲ. ಹೀಗಿದ್ದರೂ, ನ್ಯಾಯಾಲಯ ಬಯಸಿದರೆ ಆಕ್ಷೇಪಣೆ ಸಲ್ಲಿಸಲಾಗುವುದು. ನೇಮಕಾತಿಗೆ ಮಧ್ಯಂತರ ತಡೆ ನೀಡುವುದರಿಂದ ರಾಜ್ಯ ಸರ್ಕಾರಕ್ಕೆ ಮಧ್ಯಂತರ ಹಾನಿಯಾಗುವುದೇ ಹೊರತು ಮಧ್ಯಂತರ ಪರಿಹಾರವಾಗುವುದಿಲ್ಲ. ಇದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಲಿದೆ ಎಂದರು.

ಆಗ ಅರ್ಜಿದಾರರ ಪರ ವಕೀಲರು, ಸುಪ್ರೀಂಕೋರ್ಟ್‌ ಸಮಗ್ರ ನಿರ್ದೇಶನ ನೀಡಿದ್ದು, ಪ್ರತಿಯೊಂದು ರಾಜ್ಯಕ್ಕೂ ಪ್ರತ್ಯೇಕ ನಿರ್ದೇಶನಗಳನ್ನು ನೀಡಿಲ್ಲ. ಆರಂಭಿಕ ಹಂತದಲ್ಲೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಶೋಧನಾ ಸಮಿತಿ ರಚಿಸಿರುವ ಕುರಿತಾದ ನಿಲುವನ್ನು ಅಡ್ವೊಕೇಟ್‌ ಜನರಲ್‌ ಇಂದು ಬದಲಿಸಿರುವುದು ಮಧ್ಯಂತರ ಆದೇಶ ಮಾಡಲು ಸೂಕ್ತ ಪ್ರಕರಣವಾಗಿದೆ ಎಂದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಮಾಹಿತಿ ಆಯುಕ್ತರ ನೇಮಕಾತಿಗೆ ತಡೆ ‌ನೀಡಬೇಕೆಂಬ ಅರ್ಜಿದಾರರ ಮಧ್ಯಂತರ ಮನವಿ ಕುರಿತ ಆದೇಶವನ್ನು ಕಾಯ್ದಿರಿಸಿತು.

Related Articles

Comments (0)

Leave a Comment