ಕೆಎಸ್‌ಪಿಸಿಬಿ ಅಧ್ಯಕ್ಷ ಸ್ಥಾನಕ್ಕೆ ಶಾಸಕ ನರೇಂದ್ರಸ್ವಾಮಿ ನೇಮಕ ಪ್ರಶ್ನಿಸಿದ ಪಿಐಎಲ್; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಸುಪ್ರಿಂಕೋರ್ಟ್‌ ಮಾರ್ಗಸೂಚಿ ಉಲ್ಲಂಘಿಸಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಕೆಎಸ್‌ಪಿಸಿಬಿ) ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ ಎಂದು ಆಕ್ಷೇಪಿಸಿ ಸಲ್ಲಿಕೆಯಾಗಿರುವ ಪಿಐಎಲ್ ಸಂಬಂಧ ರಾಜ್ಯ ಸರ್ಕಾರ, ಮಂಡಳಿಯ ಅಧ್ಯಕ್ಷರಾಗಿರುವ ಶಾಸಕ ಪಿ.ಎಂ. ನರೇಂದ್ರಸ್ವಾಮಿಗೆ ಹೈಕೋರ್ಟ್ ನೋಟಿಸ್‌ ಜಾರಿಗೊಳಿಸಿದೆ.

ಶಾಶ್ವತ ನೀರಾವರಿ ಹೋರಾಟ ಸಮಿತಿಯ ಆರ್‌. ಆಂಜನೇಯರೆಡ್ಡಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಎಂ.ಐ. ಅರುಣ್‌ ಅವರಿದ್ದ ವಿಭಾಗೀಯ ನ್ಯಾಯಪೀಠ, ಎಲ್ಲ ಪ್ರತಿವಾದಿಗಳಿಗೆ ನೋಟಿಸ್‌ ನೀಡಿ, ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ಮಾರ್ಚ್ 17ಕ್ಕೆ ವಿಚಾರಣೆ ಮುಂದೂಡಿತು.

ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಎಕ್ಸ್‌.ಎಂ. ಜೋಸೆಫ್‌ ವಾದ ಮಂಡಿಸಿ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ರಾಜ್ಯಗಳ ಮಾಲಿನ್ಯ ನಿಯಂತ್ರಣ ಮಂಡಳಿಗಳ ಅಧ್ಯಕ್ಷರ ನೇಮಕಾತಿ ಸಂಬಂಧ ಸುಪ್ರೀಂಕೋರ್ಟ್ ಸ್ಪಷ್ಟ ಮಾರ್ಗಸೂಚಿ ನೀಡಿದೆ. ಆದರೆ, ರಾಜ್ಯ ಸರ್ಕಾರ ಆ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದೆ. ಜತೆಗೆ, ಪರಿಸರ ವಿಜ್ಞಾನ ಸೇರಿ ಯಾವುದೇ ನಿರ್ದಿಷ್ಟ ಅರ್ಹತೆ ಇಲ್ಲದವರನ್ನು ರಾಜಕೀಯ ಕಾರಣಗಳಿಗೆ ನೇಮಕ ಮಾಡಲಾಗಿದೆ. ಆದ್ದರಿಂದ, ಕೆಎಸ್‌ಪಿಸಿಬಿ ಅಧ್ಯಕ್ಷರನ್ನಾಗಿ ಪಿ.ಎಂ.ನರೇಂದ್ರಸ್ವಾಮಿ ಅವರನ್ನು ನೇಮಕ ಮಾಡಿ ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸಬೇಕೆಂದು ಕೋರಿದರು.

ಕೆ‌ಎಸ್‌ಪಿಸಿಬಿ ಪರ ವಕೀಲರು, ಸುಪ್ರೀಂಕೋರ್ಟ್‌ನ ಯಾವುದೇ ನಿಯಮಗಳನ್ನು ಸರ್ಕಾರ ಉಲ್ಲಂಘಿಸಿಲ್ಲ. ಕೇಂದ್ರ ಸರ್ಕಾರ ರೂಪಿಸಿರುವ ನಿಯಮಗಳನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರ ಅಳವಡಿಸಿಕೊಂಡಿಲ್ಲ. ಆದರೆ, ತನ್ನದೇ ಆದ ಸಮಗ್ರ ನಿಯಮಾವಳಿಗಳನ್ನು ರೂಪಿಸಿ ಅದನ್ನು ಆಧರಿಸಿ ಮಂಡಳಿ ಅಧ್ಯಕ್ಷರನ್ನು ನೇಮಿಸಲಾಗಿದೆ. ಆ ಬಗ್ಗೆ ವಿವಿಧ ರಾಜ್ಯಗಳಲ್ಲಿ ಏನೇನು ನಿಯಮಗಳಿವೆ ಎಂಬುದನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸಲು ಸ್ವಲ್ಪ ಕಾಲಾವಕಾಶ ನೀಡಬೇಕೆಂದು ಕೋರಿದರು.

Related Articles

Comments (0)

Leave a Comment