ಸರ್ಕಾರ ಉರುಳಿಸಲು ಸಾವಿರ ಕೋಟಿ ಯೋಜನೆ ಆರೋಪ: ಯತ್ನಾಳ್​ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್​

ಬೆಂಗಳೂರು: ರಾಜ್ಯದಲ್ಲಿ ಸರ್ಕಾರವನ್ನು ಕೆಡವಲು 1,000 ಕೋಟಿ ರೂ. ಗಳ ವೆಚ್ಚದಲ್ಲಿ ಯೋಜನೆ ಸಿದ್ದವಾಗುತ್ತಿದೆ ಎಂಬ ಹೇಳಿಕೆ ನೀಡುವ ಮೂಲಕ ಗಲಭೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಿಜೆಪಿ ಮುಖಂಡ ಬಸನಗೌಡ ಆರ್. ಪಾಟೀಲ ಯತ್ನಾಳ್​ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.

ದಾವಣಗೆರೆಯ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ರದ್ದುಕೋರಿ ಬಸನಗೌಡ ಪಾಟೀಲ ಯತ್ನಾಳ್​ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಇತ್ತೀಚೆಗೆ ಪುರಸ್ಕರಿಸಿದೆ. ಯತ್ನಾಳ್ ಪರವಾಗಿ ವಕೀಲ ವೆಂಕಟೇಶ್ ಪಿ. ದಳವಾಯಿ ವಾದ ಮಂಡಿಸಿದ್ದರು.

ನ್ಯಾಯಾಲಯದ ಆದೇಶ:
ಅರ್ಜಿದಾರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಸೆಕ್ಷನ್ 192ರ (ಉದ್ದೇಶಪೂರ್ವಕವಾಗಿ ಗಲಭೆಗೆ ಪ್ರಚೋದಿಸುವ ವ್ಯಕ್ತಿಗೆ ಶಿಕ್ಷೆ ವಿಧಿಸುವ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ಅರ್ಜಿದಾರರ ಹೇಳಿಕೆ ಗಲಭೆಗೆ ಕಾರಣವಾಗುವ ದುರುದ್ದೇಶಪೂರಿತ ಪ್ರಚೋದನೆಯ ಅಂಶಗಳನ್ನು ಹೊಂದಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ನ್ಯಾಯಾಲಯ ವಿಫಲವಾಗಿದೆ. ಪ್ರಕರಣ ದಾಖಲಿಸಬೇಕೆಂಬ ಕಾರಣಕ್ಕಷ್ಟೇ ದಾಖಲಿಸಲಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಆರೋಪ ಪುಷ್ಠೀಕರಿಸುವ ಯಾವುದೇ ಅಂಶಗಳ ಅನುಪಸ್ಥಿತಿಯಲ್ಲಿ ಅಂತಹ ಅಪರಾಧಗಳ ಬಗ್ಗೆ ಹೆಚ್ಚಿನ ತನಿಖೆಗೆ ಅವಕಾಶ ನೀಡುವುದು, ಅಜಾಗರೂಕ ಪ್ರಕರಣ ದಾಖಲಿಸಲು ಅನುಮತಿಸಿದಂತಾಗುತ್ತದೆ. ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಮುಂದಿನ ಪ್ರಕ್ರಿಯೆಗೆ ಅನುಮತಿ ನೀಡುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗಲಿದೆ ಎಂದಿರುವ ಹೈಕೋರ್ಟ್, ಯತ್ನಾಳ್ ವಿರುದ್ಧದ ಎಫ್‌ಐಆರ್ ರದ್ದುಪಡಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ:
ದಾವಣಗೆರೆಯಲ್ಲಿ 2024ರ ಸೆಪ್ಟೆಂಬರ್ 29ರಂದು ಮಾಧ್ಯಮದವರೊಂದಿಗೆ ಮಾತನಾಡಿದ್ದ ಬಿಜೆಪಿ ಮುಖಂಡ ಬಸನಗೌಡ ಪಾಟೀಲ ಯತ್ನಾಳ್​, ಕಾಂಗ್ರೆಸ್‌ನ ಮಹಾನ್​ ನಾಯಕರೊಬ್ಬರು ರಾಜ್ಯದಲ್ಲಿ ಸರ್ಕಾರವನ್ನು ಉರುಳಿಸಲು 1,000 ಕೋಟಿ ರೂ.ಗಳ ಯೋಜನೆ ರೂಪಿಸಿದ್ದಾರೆ. ಆ ಮಹಾನ್​ ನಾಯಕ ಯಾರು ಎಂಬುದು ನಿಮಗೇ ಗೊತ್ತಿದೆ. ಅವರ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದು ತಿಳಿಸಿದ್ದರು.

ಈ ಸಂಬಂಧ 2024ರ ಅಕ್ಟೋಬರ್ 1ರಂದು ಪೊಲೀಸರಿಗೆ ದೂರು ನೀಡಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್, ಪಕ್ಷ-ಪಕ್ಷಗಳ ಕಾರ್ಯಕರ್ತರ ನಡುವೆ ಕೋಮು ಸೃಷ್ಟಿಸಿ, ಸಮಾಜದಲ್ಲಿ ಗಲಭೆ ಉಂಟಾಗುವಂತಹ ಹೇಳಿಕೆಗಳನ್ನು ನೀಡುತ್ತಿರುವ ಯತ್ನಾಳ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಿದ್ದರು. ದೂರು ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.

Related Articles

Comments (0)

Leave a Comment