ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗೆ ಅರಿವಿಲ್ಲದೆ ಮನೆಯಲ್ಲಿ ಆಶ್ರಯ: ಪ್ರಕರಣ ರದ್ದುಪಡಿಸಿದ ಹೈಕೋರ್ಟ್
- by Jagan Ramesh
- February 8, 2025
- 473 Views

ಬೆಂಗಳೂರು: ಕೊಲೆ ಅಪರಾಧಿಯೊಬ್ಬನಿಗೆ ನ್ಯಾಯಾಲಯ ವಿಧಿಸಿರುವ ಶಿಕ್ಷೆಯ ಬಗ್ಗೆ ಮಾಹಿತಿ ಇಲ್ಲದೆ ಆತನಿಗೆ ಮನೆಯಲ್ಲಿ ಆಶ್ರಯ ನೀಡಿದ ಆರೋಪ ಹೊತ್ತಿದ್ದ ವ್ಯಕ್ತಿಯ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.
ಪ್ರಕರಣ ರದ್ದು ಕೋರಿ ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿ ಗ್ರಾಮದ ಉದಯ್ಕುಮಾರ್ ಶೆಟ್ಟಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಸ್. ಆರ್. ಕೃಷ್ಣ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಹೈಕೋರ್ಟ್ ತೀರ್ಪಿನಲ್ಲೇನಿದೆ?
ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 216ರ (ಅಪರಾಧಿಗೆ ಉದ್ದೇಶಪೂರ್ವಕವಾಗಿ ಆಶ್ರಯ ನೀಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಬೇಕಾದಲ್ಲಿ ಅಪರಾಧಿಗೆ ನ್ಯಾಯಾಲಯ ವಿಧಿಸಿರುವ ಶಿಕ್ಷೆ ಕುರಿತ ಸಂಪೂರ್ಣ ಮಾಹಿತಿ ಆತನಿಗೆ ಆಶ್ರಯ ಕೊಟ್ಟ ವ್ಯಕ್ತಿಗೆ ಇರಬೇಕು. ಜತೆಗೆ, ಉದ್ದೇಶಪೂರ್ವಕವಾಗಿ ಅವರಿಗೆ ಆಶ್ರಯ ನೀಡಿದ್ದಾರೆ ಎಂದು ಸಾಬೀತುಪಡಿಸುವಂತಹ ಅಂಶಗಳು ಹಾಗೂ ಅದಕ್ಕೆ ಪೂರಕ ಸಾಕ್ಷ್ಯಾಧಾರಗಳಿರಬೇಕು ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.
ಹಾಲಿ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಯನ್ನು ಅರ್ಜಿದಾರರ ಮನೆಯಲ್ಲಿದ್ದ ಸಂದರ್ಭದಲ್ಲಿ ಬಂಧಿಸಿ ವಶಕ್ಕೆ ಪಡೆಯಲಾಗಿದೆ ಎಂಬ ಅಂಶ ಹೊರತುಪಡಿಸಿ, ಅರ್ಜಿದಾರರಿಗೆ ಅಪರಾಧಿಯ ಶಿಕ್ಷೆಯ ಬಗ್ಗೆ ಮೊದಲೇ ಮಾಹಿತಿ ಇತ್ತು ಹಾಗೂ ಅವರು ಉದ್ದೇಶಪೂರ್ವಕವಾಗಿ ಅಪರಾಧಿಗೆ ಆಶ್ರಯ ನೀಡಿದ್ದಾರೆ ಎಂದು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ. ಹೀಗಿರುವಾಗ, ಅರ್ಜಿದಾರರ ವಿರುದ್ಧ ಕಾನೂನು ಪ್ರಕ್ರಿಯೆ ಮುಂದುವರಿಸುವುದು ನ್ಯಾಯಾಂಗ ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪ್ರಾಸಿಕ್ಯೂಷನ್ ಪರ ವಕೀಲರು ಅರ್ಜಿದಾರರ ಮೊಬೈಲ್ ಸಂಖ್ಯೆಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿದ್ದು, ಅರ್ಜಿದಾರರು ಉದ್ದೇಶಪೂರ್ವಕವಾಗಿ ಅಪರಾಧಿಗೆ ಆಶ್ರಯ ನೀಡಿದ್ದಾರೆ ಎಂದು ತೋರಿಸುವ ಯಾವುದೇ ಸಂದೇಶ ಹಾಗೂ ಸಂವಹನ ಅದರಲ್ಲಿ ಕಂಡುಬಂದಿಲ್ಲ. ಸಾಕ್ಷ್ಯಾಧಾರಗಳ ಅನುಪಸ್ಥಿತಿಯಲ್ಲಿ ಪ್ರಾಸಿಕ್ಯೂಷನ್ ಮಾಡಿರುವ ಆರೋಪಗಳನ್ನು ಒಪ್ಪಲಾಗದು ಎಂದಿರುವ ಹೈಕೋರ್ಟ್, ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಿದೆ.
ಪ್ರಕರಣದ ಹಿನ್ನೆಲೆ:
ಕೊಲೆ ಆರೋಪದಲ್ಲಿ ಶರಣ್ ಅಲಿಯಾಸ್ ಶರಣ್ ಪೂಜಾರಿ ಎಂಬಾತನಿಗೆ ಮಂಗಳೂರಿನ 5ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಈ ಆದೇಶವನ್ನು ಹೈಕೋರ್ಟ್ ದೃಢಪಡಿಸಿತ್ತು. ಅಪರಾಧಿಯನ್ನು ಬಂಧಿಸಲು ಬರ್ಕೆ ಠಾಣೆ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಈ ಮಧ್ಯೆ, ತಲೆಮರೆಸಿಕೊಂಡಿದ್ದ ಶರಣ್ ಪೂಜಾರಿಯನ್ನು ಉದಯ್ ಕುಮಾರ್ ಮನೆಯಲ್ಲಿ ಬಂಧಿಸಿದ್ದ ಪೊಲೀಸರು, ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಇದರಿಂದ, ಪ್ರಕರಣ ರದ್ದುಕೋರಿ ಉದಯ್ ಕುಮಾರ್ ಶೆಟ್ಟಿ ಹೈಕೋರ್ಟ್ ಮೆಟ್ಟಿಲೇರಿದ್ದರು.
Related Articles
Thank you for your comment. It is awaiting moderation.
Comments (0)