ಆರೋಪಿ ಹಾಲಿ ಸಿಎಂ ಎಂದ ಮಾತ್ರಕ್ಕೆ ಸಿಬಿಐ ತನಿಖೆಗೆ ಆದೇಶಿಸಲಾಗದು; ಕರ್ನಾಟಕ ಹೈಕೋರ್ಟ್

ಬೆಂಗಳೂರು: ಆರೋಪಿಗಳಲ್ಲಿ ಒಬ್ಬರು ಹಾಲಿ ಮುಖ್ಯಮಂತ್ರಿಯಾಗಿರುವುದರಿಂದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರುವುದು “ಅಸಮರ್ಪಕ” ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಮುಡಾ ಹಗರಣದ ತನಿಖೆಯನ್ನು ಲೋಕಾಯುಕ್ತ ಪೊಲೀಸರಿಂದ ಸಿಬಿಐಗೆ ವರ್ಗಾಯಿಸಲು ನಿರಾಕರಿಸಿದೆ.

ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರಕರಣದ ಆರೋಪಿಯೊಬ್ಬರು ಹಾಲಿ ಮುಖ್ಯಮಂತ್ರಿಯಾಗಿರುವುದರಿಂದ ಲೋಕಾಯುಕ್ತದಿಂದ ನ್ಯಾಯಯುತ, ನಿರ್ಭೀತ ಮತ್ತು ಪಾರದರ್ಶಕ ತನಿಖೆ ನಡೆಸಲು ಸಾಧ್ಯವಿಲ್ಲ. ಆದ್ದರಿಂದ, ತನಿಖೆಯನ್ನು ಸಿಬಿಐಗೆ ವರ್ಗಾಯಿಸಬೇಕು ಎಂಬ ಅರ್ಜಿದಾರರ ವಾದವನ್ನು ತಳ್ಳಿಹಾಕಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಈವರೆಗೆ ತನಿಖೆ ನಡೆಸಿ ಸಿದ್ಧಪಡಿಸಿರುವ ವರದಿಯನ್ನು ಸಂಬಂಧಪಟ್ಟ ನ್ಯಾಯಾಲಯಕ್ಕೆ ಸಲ್ಲಿಸಲು ಸ್ವತಂತ್ರರಾಗಿದ್ದಾರೆ. ಅರ್ಜಿದಾರರು ಅಲ್ಲಿಯೇ ಕಾನೂನಿನಡಿ ಲಭ್ಯವಿರುವ ಪರಿಹಾರ ಪಡೆದುಕೊಳ್ಳಬಹುದು ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.

ಹೈಕೋರ್ಟ್ ತೀರ್ಪಿನ ಹೈಲೈಟ್ಸ್:

  • ಅರ್ಜಿದಾರರು ಮೊದಲಿಗೆ ಲೋಕಾಯುಕ್ತ ತನಿಖೆಗೆ ಕೋರಿದ್ದರು. ತನಿಖೆ ಏನೆಂದು ತಿಳಿಯದೆಯೇ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾರೆ ಎಂಬ ಏಕೈಕ ಕಾರಣಕ್ಕೆ ಸಿಬಿಐ ತನಿಖೆಗೆ ಕೋರಿದ್ದಾರೆ ಮತ್ತು ಲೋಕಾಯುಕ್ತ ತನಿಖಾ ಸಂಸ್ಥೆಯ ಸ್ವಾತಂತ್ರ್ಯವನ್ನು ಪ್ರಶ್ನಿಸಿದ್ದಾರೆ.
  • ಲೋಕಾಯುಕ್ತ ಸಂಸ್ಥೆಯು ಬಾಹ್ಯ ಪ್ರಭಾವಗಳಿಂದ ಸ್ವಾತಂತ್ರ್ಯ ಮತ್ತು ರಕ್ಷಣೆ ಹೊಂದಿದೆ. ಅದರ ಸಾಂಸ್ಥಿಕ ಸಮಗ್ರತೆ, ಸ್ವಾತಂತ್ರ್ಯವನ್ನು ಮರೆಯಲಾಗುವುದಿಲ್ಲ. ಮುಖ್ಯಮಂತ್ರಿ, ಸಚಿವರು ಸೇರಿ ಉನ್ನತಾಧಿಕಾರಿಗಳ ವಿರುದ್ಧದ ಅಪರಾಧವನ್ನು ತನಿಖೆ ಮಾಡಲು ಲೋಕಾಯುಕ್ತ ಸಂಸ್ಥೆ ಸಮರ್ಥವಾಗಿದೆ.
  •  ಸುಪ್ರೀಂಕೋರ್ಟ್‌ ಹಾಗೂ ಹೈಕೋರ್ಟ್‌ಗಳು ಹಲವು ಪ್ರಕರಣಗಳಲ್ಲಿ ತನಿಖೆಯನ್ನು ಸ್ಥಳೀಯ ಪೋಲೀಸರಿಂದ ಸಿಬಿಐಗೆ ವರ್ಗಾಯಿಸಿದೆ. ಆ ಅಪರಾಧ ಪ್ರಕರಣಗಳನ್ನು ಯಾವುದೇ ಸ್ವತಂತ್ರ ಸಂಸ್ಥೆ ತನಿಖೆ ನಡೆಸುತ್ತಿರಲಿಲ್ಲ.‌ ಲೋಕಾಯುಕ್ತ ಅಥವಾ ಲೋಕಪಾಲ ಅಂತಹ ಸ್ವತಂತ್ರ ತನಿಖಾ ಸಂಸ್ಥೆಯಿಂದ ಮಧ್ಯಭಾಗದಲ್ಲಿ ತನಿಖೆಯನ್ನು ಸಿಬಿಐಗೆ ವಹಿಸಿದಂತಹ ಒಂದು ಪ್ರಕರಣವನ್ನೂ ನ್ಯಾಯಾಲಯದ ಮುಂದಿಟ್ಟಿಲ್ಲ.
  • ಅಸಾಧಾರಣ ಹಾಗೂ ವ್ಯಾಪಕ ಪರಿಣಾಮಗಳನ್ನು ಬೀರುವ ಸಂದರ್ಭಗಳಲ್ಲಿ ಪ್ರಕರಣಗಳ ತನಿಖೆಯನ್ನು ವರ್ಗಾವಣೆ ಮಾಡುವ ಅಧಿಕಾರವನ್ನು ನ್ಯಾಯಾಲಯಗಳು ಮಿತ ಹಾಗೂ ಎಚ್ಚರಿಕೆಯಿಂದ ಬಳಸಬೇಕಾಗುತ್ತದೆ. ಇಲ್ಲವಾದರೆ, ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಸಿಬಿಐಗೆ ಬರುತ್ತವೆ. ಆರೋಪಿಗಳಲ್ಲಿ ಒಬ್ಬರು ಹಾಲಿ ಮುಖ್ಯಮಂತ್ರಿಯಾಗಿರುವುದರಿಂದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂಬ ವಾದ ಸ್ವೀಕಾರಾರ್ಹವಲ್ಲ.
  • ಲೋಕಾಯುಕ್ತರು ನಿಷ್ಪಕ್ಷಪಾತ ತನಿಖೆ ನಡೆಸುವುದಿಲ್ಲ ಎಂದು ಅರ್ಜಿದಾರರು ಸಂಶಯ ವ್ಯಕ್ತಪಡಿಸಿದ ಮಾತ್ರಕ್ಕೆ ಲೋಕಾಯುಕ್ತವನ್ನು ಖಂಡಿಸಲಾಗುವುದಿಲ್ಲ. ಲೋಕಾಯುಕ್ತ ಸಂಸ್ಥೆಯಿಂದ ಪ್ರಕರಣದ ತನಿಖೆಗೆ ಸಂಬಂಧಿಸಿದ ದಾಖಲೆಗಳನ್ನು ಹೈಕೋರ್ಟ್ ಕಾಲಕಾಲಕ್ಕೆ ಪಡೆದುಕೊಂಡು ಪರಿಶೀಲಿಸಿದೆ.
  • ಲೋಕಾಯುಕ್ತ ಪೊಲೀಸರು ಎಲ್ಲ ಸಾರ್ವಜನಿಕ ದಾಖಲೆ, ಅಧಿಸೂಚನೆಗಳನ್ನು ಪಡೆದುಕೊಂಡಿದ್ದು, ಎಲ್ಲ ಆರೋಪಿಗಳ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇದರಿಂದ, ಈವರೆಗಿನ ತನಿಖೆ ಪಕ್ಷಪಾತವಾಗಿದೆ ಅಥವಾ ಕಳಪೆಯಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ತನಿಖೆಯನ್ನು ಸಿಬಿಐಗೆ ವಹಿಸುವ ಅಗತ್ಯ ಕಂಡುಬರುತ್ತಿಲ್ಲ.

Related Articles

Comments (0)

Leave a Comment