ಐಎಂಎ ಬಹುಕೋಟಿ ವಂಚನೆ ಹಗರಣ; ಎಸ್‌ಐ ಗೌರಿಶಂಕರ್ ಆರೋಪಮುಕ್ತ ಆದೇಶ ಎತ್ತಿಹಿಡಿದ ಹೈಕೋರ್ಟ್
- by Jagan Ramesh
- February 7, 2025
- 132 Views

ಬೆಂಗಳೂರು: ಐಎಂಎ ಸಂಸ್ಥೆಯ ಬಹುಕೋಟಿ ಹಗರಣದಲ್ಲಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಗೌರಿಶಂಕರ್ ಅವರನ್ನು ಆರೋಪಮುಕ್ತಗೊಳಿಸಿ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಎಸ್‌ಐ ಗೌರಿಶಂಕರ್ ಅವರನ್ನು ದೋಷಮುಕ್ತಗೊಳಿಸಿ 2024ರ ಜು.15ರಂದು ವಿಚಾರಣಾ ನ್ಯಾಯಾಲಯ ನೀಡಿದ್ದ ತೀರ್ಪು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಆರೋಪಿ ವಿರುದ್ಧದ ಎಲ್ಲ ಆರೋಪಗಳನ್ನು ಪರಿಶೀಲಿಸಿದರೆ, ಡೈರಿಯಲ್ಲಿ ಗೌರಿ-ವಸೀಂ ಭಾಯ್ ಎನ್ನುವ ಪದ ಎಕ್ಸೆಲ್ ಶೀಟ್‌ನಲ್ಲಿ ನಮೂದಾಗಿರುವುದು ಬಿಟ್ಟರೆ ಬೇರೆ ಯಾವುದೇ ಸಾಕ್ಷ್ಯಗಳು ಅವರ ವಿರುದ್ಧ ಇಲ್ಲ. ಘಟನೆ ನಡೆದಾಗ ಆರೋಪಿಯು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಎಸ್‌ಐ ಆಗಿದ್ದರು. ಅವರನ್ನು ಆರೋಪಮುಕ್ತಗೊಳಿಸಿ ವಿಚಾರಣಾ ನ್ಯಾಯಾಲಯ ಹೊರಡಿಸಿರುವ ಆದೇಶ ಸಮಂಜಸವಾಗಿದೆ ಮತ್ತು ಅದು ಸುಪ್ರೀಂಕೋರ್ಟ್ ನೀಡಿರುವ ಆದೇಶಗಳಿಗೆ ಅನುಸಾರವಾಗಿಯೇ ಇದೆ. ಆದ್ದರಿಂದ, ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ನ್ಯಾಯಾಲಯ ಆದೇಶಿಸಿದೆ.
ಪ್ರಕರಣವೇನು?
ಐಎಂಎ ಸಂಸ್ಥೆಯಿಂದ ಠೇವಣಿದಾರರ ಕೋಟ್ಯಂತರ ರೂ. ಹಣ ದುರ್ಬಳಕೆ ಹಗರಣದಲ್ಲಿ ಗೌರಿಶಂಕರ್ ಅವರನ್ನು ಸಿಬಿಐ 28ನೇ ಆರೋಪಿಯನ್ನಾಗಿ ಮಾಡಿ ಅವರ ವಿರುದ್ಧ ಪೂರಕ ಆರೋಪಪಟ್ಟಿ ಸಲ್ಲಿಸಿತ್ತು. ಐಎಂಎ ಸಂಸ್ಥಾಪಕ ಮೊಹಮ್ಮದ್ ಮನ್ಸೂರ್ ಖಾನ್ ಅವರಿಂದ ಗೌರಿಶಂಕರ್ ಹಲವು ಸಂದರ್ಭಗಳಲ್ಲಿ ಅಕ್ರಮವಾಗಿ ಹಣ ಪಡೆದಿದ್ದಾರೆಂದು ಆರೋಪಿಸಲಾಗಿತ್ತು. ಜತೆಗೆ, ಐಎಂಎ ಕಂಪನಿ ವಿರುದ್ಧ ದಾಖಲಾಗಿರುವ ದೂರುಗಳ ಕುರಿತು ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ ಎಂದು ವಸೀಂ ಎಂಬುವರಿಂದ ಹಣ ಪಡೆದಿದ್ದಾರೆಂದು ಹೇಳಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯ, ಗೌರಿಶಂಕರ್ ವಿರುದ್ಧ ಮೇಲ್ನೋಟಕ್ಕೆ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ. ಅವರ ನಿವಾಸದ ಮೇಲೆ ನಡೆಸಿದ ಶೋಧ ಕಾರ್ಯದಲ್ಲೂ ಯಾವುದೇ ಮಾಹಿತಿ ದೊರೆತಿಲ್ಲ. ಆದ್ದರಿಂದ, ಎಸ್ಐ ಗೌರಿಶಂಕರ್ ಅವರನ್ನು ಆರೋಪಮುಕ್ತಗೊಳಿಸಲಾಗುತ್ತಿದೆ ಎಂದು ಆದೇಶ ನೀಡಿತ್ತು. ಈ ಆದೇಶ ಪ್ರಶ್ನಿಸಿ ಸಿಬಿಐ ಹೈಕೋರ್ಟ್ ಮೆಟ್ಟಿಲೇರಿತ್ತು.
Related Articles
Thank you for your comment. It is awaiting moderation.
Comments (0)