- ವ್ಯಕ್ತಿಪರಿಚಯ
- ಸಂಪಾದಕೀಯ
- Like this post: 25
ವಕೀಲರ ಸಂಘದ ಚುನಾವಣೆಯಲ್ಲಿ ಗಮನ ಸೆಳೆಯುತ್ತಿರುವ ಮಹಿಳಾ ವಕೀಲೆ; ಖಜಾಂಚಿ ಅಭ್ಯರ್ಥಿ ಶೈಲಜ ಮತಯಾಚನೆ
- by LegalSamachar
- February 4, 2025
- 844 Views

AAB Election: ಬೆಂಗಳೂರು ವಕೀಲರ ಸಂಘದ (ಎಎಬಿ) ಚುನಾವಣೆ ಈ ಬಾರಿ ಹೆಚ್ಚು ಮಹತ್ವ ಪಡೆದುಕೊಂಡಿದೆ. ಮಹಿಳಾ ಮೀಸಲಾತಿ ವಿಷಯದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪು ಭಾರಿ ಸಂಚಲನ ಸೃಷ್ಟಿಸಿತ್ತು. ಸುಪ್ರೀಂ ತೀರ್ಪಿನ ಪ್ರಕಾರ ಈ ಬಾರಿ ಖಜಾಂಚಿ ಸ್ಥಾನವನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಇದರಿಂದಾಗಿ, ಫೆಬ್ರವರಿ 2ರಂದು ನಡೆಯಬೇಕಿದ್ದ ಚುನಾವಣೆಗೆ ಕೊನೇ ಕ್ಷಣದಲ್ಲಿ ತಡೆ ನೀಡಿ, ಖಜಾಂಚಿ ಹುದ್ದೆಗೆ ಮಹಿಳಾ ನ್ಯಾಯವಾದಿಗಳಿಗೆ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಫೆಬ್ರವರಿ 16ರಂದು ಚುನಾವಣೆ ನಡೆಯಲಿದೆ.
ಮಹಿಳೆಯರಿಗೆ ಮೀಸಲಾಗಿರುವ ಖಜಾಂಚಿ ಸ್ಥಾನಕ್ಕೆ ಹಲವು ವೃತ್ತಿನಿರತ ಮಹಿಳಾ ವಕೀಲರು ನಾಮಪತ್ರ ಸಲ್ಲಿಸಿದ್ದಾರೆ. ಅವರಲ್ಲಿ ಪ್ರಮುಖವಾಗಿ ಗಮನ ಸೆಳೆದಿರುವುದು ವಕೀಲೆ ಶೈಲಜ ಕೆ. ವಕೀಲ ವೃತ್ತಿಯ ಜತೆ ಸಾಮಾಜಿಕ ಕಾರ್ಯಗಳಲ್ಲೂ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಶೈಲಜ ಅವರು ಜನಸಾಮಾನ್ಯರ ಧ್ವನಿಯಾಗಿದ್ದಾರೆ.
ಗ್ರಾಮೀಣ ಜನರ ಆಶಾಕಿರಣ:
ದಶಕಗಳಿಂದ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಶೈಲಜ ಅವರು ಎಚ್ಎಸ್ಆರ್ ವಾರ್ಡ್, ಬೊಮ್ಮನಹಳ್ಳಿ ಕ್ಷೇತ್ರದ ಸಮುದಾಯ ಸದಸ್ಯರಿಗೆ ನಾಗರಿಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೋಲಾರ, ಶ್ರೀನಿವಾಸಪುರ, ಚಿಂತಾಮಣಿ, ಮುಳಬಾಗಿಲು, ನಂಗ್ಲಿಯ ಸುತ್ತಮುತ್ತಲಿನ ರೈತರಿಗೆ ಉಚಿತ ಕಾನೂನು ಸೇವೆಗಳನ್ನೂ ಒದಗಿಸುತ್ತಿರುವ ವಕೀಲೆ ಶೈಲಜ ಅವರು ಗ್ರಾಮೀಣ ಶಾಲಾ ವಿದ್ಯಾರ್ಥಿಗಳಿಗೆ ಅಧ್ಯಯನ ಸಾಮಾಗ್ರಿಗಳನ್ನು ನೀಡುತ್ತಿದ್ದಾರೆ. ಅಲ್ಲದೆ, ಗ್ರಾಮೀಣ ಪ್ರದೇಶದ ಜನರಿಗೆ ವೈವಾಹಿಕ ಸಮಾಲೋಚನೆ ನಡೆಸುತ್ತಿದ್ದಾರೆ.
ಖಜಾಂಚಿ ಅಭ್ಯರ್ಥಿ ವಕೀಲೆ ಶೈಲಜ ಅವರಿಂದ ಮತಯಾಚನೆ
ಸಾಕಷ್ಟು ವರ್ಷಗಳಿಂದ ವಕೀಲೆಯಾಗಿ ಪ್ರಾಕ್ಟೀಸ್ ಮಾಡುತ್ತಿದ್ದೇನೆ. ಅದರ ಜತೆಗೇ ಸಾಮಾಜಿಕ ಕಾರ್ಯಗಳು ಹಾಗೂ ರಾಜಕೀಯದಲ್ಲೂ ತೊಡಗಿಸಿಕೊಂಡಿದ್ದೇನೆ. ಈ ಬಾರಿ ವಕೀಲರ ಸಂಘದ ಚುನಾವಣೆಯಲ್ಲಿ ಖಜಾಂಚಿ ಹುದ್ದೆಗೆ ಸ್ಪರ್ಧಿಸಿದ್ದು, ಹೊಸತನದ ಸ್ಪರ್ಶವನ್ನು ವಕೀಲ ವೃಂದಕ್ಕೆ ನೀಡುವ ತವಕದಲ್ಲಿದ್ದೇನೆ. ವಕೀಲ ಸಮುದಾಯದಲ್ಲಿ ನನ್ನ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗುತ್ತಿದ್ದು, ಮತಯಾಚನೆಗೆ ತೆರಳಿದಲ್ಲೆಲ್ಲ ಉತ್ತಮ ಸ್ಪಂದನೆ ದೊರೆಯುತ್ತಿದೆ. ಹೀಗಾಗಿ, ಗೆಲುವಿನ ಬಗ್ಗೆ ಆಶಾಭಾವನೆ ಇಟ್ಟುಕೊಂಡಿದ್ದೇನೆ.
ಶೈಲಜ ಕೆ.
ಖಜಾಂಚಿ ಸ್ಥಾನದ ಅಭ್ಯರ್ಥಿ
ರಾಜಕೀಯವಾಗಿ ಆಸಕ್ತಿ ಹೊಂದಿರುವ ಶೈಲಜ ಅವರು ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (BPAC) ಇಂದ ನಾಗರಿಕ ನಾಯಕಿಯಾಗಿ ಪದವಿ ಪಡೆದಿದ್ದಾರೆ. ಜನಸಾಮಾನ್ಯರ ಕಲ್ಯಾಣಕ್ಕಾಗಿ ಅವರು ಸಲ್ಲಿಸಿರುವ ಸೇವೆ ಅಗಣಿತ. ಈಗ ಅದೇ ಹುಮ್ಮಸ್ಸಿನಲ್ಲಿ ವಕೀಲರ ಸಂಘಕ್ಕೆ ಹೊಸ ಬದಲಾವಣೆಯ ಸ್ಪರ್ಶ ನೀಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಈಗಾಗಲೇ ಹೈಕೋರ್ಟ್, ಸಿಟಿ ಸಿವಿಲ್ ಕೋರ್ಟ್, ಮ್ಯಾಜಿಸ್ಟ್ರೇಟ್ ಕೋರ್ಟ್, ಮೇಯೋ ಹಾಲ್ ಕೋರ್ಟ್ಗಳಲ್ಲಿ ತಮ್ಮ ಹಿರಿಯ-ಕಿರಿಯ ಸಹೋದ್ಯೋಗಿಗಳು ಹಾಗೂ ಸ್ನೇಹಿತರನ್ನು ಭೇಟಿಯಾಗಿ ಮತಯಾಚನೆ ಮಾಡಿದ್ದಾರೆ.
ಶೈಲಜ ಅವರ ಯಂಗ್ ಮೈಂಡ್, ಮುಗುಳು ನಗೆ ಹಾಗೂ ಕೆಲಸದ ಬಗ್ಗೆ ಇರುವ ಅಪಾರ ಶ್ರದ್ಧೆ ಈ ಬಾರಿ ಅವರನ್ನು ಗೆಲುವಿನ ದಡ ಸೇರಿಸಲಿದೆ ಎಂದು ವಕೀಲ ಮಿತ್ರರೇ ಆತ್ಮವಿಶ್ವಾಸದ ಮಾತುಗಳನ್ನಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿ ಖಜಾಂಚಿ ಹುದ್ದೆ ಶೈಲಜ ಅವರಿಗೆ ಒಲಿಯಬಹುದು ಎನ್ನುವುದು ವಕೀಲ ಸಮುದಾಯದ ಲೆಕ್ಕಾಚಾರ.
Comments (1)
She is very good in managing civic issues,leadership,polite,kindness and capable of managing treasurer post
Reply