ಸರ್ಕಾರ, ಕೆಪಿಎಸ್‌ಸಿಗೆ ಕೆಎಟಿ ನೋಟಿಸ್; ಪೂರ್ವಭಾವಿ ಪರೀಕ್ಷೆ ರದ್ದು ಕೋರಿದ ಅರ್ಜಿ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಕಳೆದ ಡಿಸೆಂಬರ್ 29ರಂದು 384 ಕೆಎಎಸ್ ಹುದ್ದೆಗಳ ಭರ್ತಿಗೆ ನಡೆಸಿದ್ದ ಪೂರ್ವಭಾವಿ ಮರು ಪರೀಕ್ಷೆಯಲ್ಲಿ ಲೋಪವಾಗಿರುವ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದುಪಡಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ಸಂಬಂಧ ಸರ್ಕಾರ ಹಾಗೂ ಕೆಪಿಎಸ್‌ಸಿಗೆ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ನೋಟಿಸ್ ಜಾರಿಗೊಳಿಸಿದೆ.

ಅಭ್ಯರ್ಥಿಗಳಾದ ಕೃಷ್ಣ ಮತ್ತಿತರರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಾಂಗ ಸದಸ್ಯ ಎಸ್‌.ವೈ. ವಟವಟಿ ಮತ್ತು ಆಡಳಿತ ಸದಸ್ಯೆ ಡಾ. ಅಮಿತಾ ಪ್ರಸಾದ್‌ ಅವರಿದ್ದ ಕೆಎಟಿ ಪೀಠ ಮಂಗಳವಾರ ವಿಚಾರಣೆ ನಡೆಸಿತು.

ಪ್ರತಿವಾದಿ ಕೆಪಿಎಸ್‌ಸಿಯ ಅಭಿಪ್ರಾಯ ಆಲಿಸದೆ ಯಾವುದೇ ಮಧ್ಯಂತರ ಆದೇಶ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ ಪೀಠ, ಸರ್ಕಾರ ಮತ್ತು ಕೆಪಿಎಸ್‌ಸಿ ಪರ ವಕೀಲರಿಗೆ ನೋಟಿಸ್‌ ಜಾರಿಗೊಳಿಸಿ ಮುಂದಿನ ವಿಚಾರಣೆ ವೇಳೆಗೆ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಸೂಚನೆ ನೀಡಿತು. ಜತೆಗೆ, ಅರ್ಜಿಯ ಮುಂದಿನ ವಿಚಾರಣೆವರೆಗೆ ಪರೀಕ್ಷೆ ಸಂಬಂಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಕೆಪಿಎಸ್‌ಸಿಗೆ ನಿರ್ದೇಶಿಸಿ, ವಿಚಾರಣೆಯನ್ನು ಜನವರಿ 30ಕ್ಕೆ ಮುಂದೂಡಿತು.

ವಿಚಾರಣೆ ವೇಳೆ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು, ಪೂರ್ವಭಾವಿ ಮರು ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಅನುವಾದದಲ್ಲಿ ಮತ್ತೆ ಲೋಪಗಳಾಗಿವೆ. ಇದರಿಂದ, ಕನ್ನಡ ಮಾಧ್ಯಮದ ಹಾಗೂ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ, ಪರೀಕ್ಷೆಯನ್ನು ರದ್ದು ಮಾಡಿ ಹೊಸದಾಗಿ ಪರೀಕ್ಷೆ ನಡೆಸಲು ನಿರ್ದೇಶನ ನೀಡಬೇಕು. ಮಧ್ಯಂತರ ಕ್ರಮವಾಗಿ ಫಲಿತಾಂಶ ಪ್ರಕಟಣೆಗೆ ತಡೆ ನೀಡಬೇಕು ಎಂದು ಕೆಎಟಿಗೆಆ ಮನವಿ ಮಾಡಿದರು.

Related Articles

Comments (0)

Leave a Comment