ಮುಡಾ ಹಗರಣದ ತನಿಖೆ ಸಿಬಿಐಗೆ ವಹಿಸಲು ಕೋರಿದ ಅರ್ಜಿ ವಿಚಾರಣೆ ಪೂರ್ಣ; ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಬೆಂಗಳೂರು: ಮುಖ್ಯಮಂತ್ರಿ‌ ಸಿದ್ದರಾಮಯ್ಯ ಮತ್ತವರ ಪತ್ನಿ ಬಿ.ಎಂ. ಪಾರ್ವತಿ ಪ್ರಮುಖ ಆರೋಪಿಗಳಾಗಿರುವ ಮುಡಾ ಹಗರಣದ ತನಿಖೆಯನ್ನು ಕೇಂದ್ರೀಯ ತನಿಖಾ ಸಂಸ್ಥೆಗೆ (ಸಿಬಿಐ) ವಹಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.

ಇದೇ ವೇಳೆ, ಹಾಲಿ ಪ್ರಕರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸುವುದಕ್ಕೆ ವಿಧಿಸಿದ್ದ ಗಡುವನ್ನು ತೀರ್ಪು ನೀಡುವವರೆಗೆ ವಿಸ್ತರಣೆ ಮಾಡಿದೆ.

ಸಿಎಂ ಸಿದ್ದರಾಮಯ್ಯ ಮತ್ತವರ ಕುಟುಂಬ ಸದಸ್ಯರು ಭಾಗಿಯಾಗಿದ್ದಾರೆಂದು ಆರೋಪಿಸಲಾದ ಮುಡಾ ಬದಲಿ ನಿವೇಶನಗಳ ಹಂಚಿಕೆ ಹಗರಣದ ತನಿಖೆ ನಡೆಸಲು ಸಿಬಿಐ‌ಗೆ ನಿರ್ದೇಶಿಸುವಂತೆ ಕೋರಿ ಮೈಸೂರಿನ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ರಿಟ್ ಅರ್ಜಿ ಕುರಿತು ಸೋಮವಾರ ಸುದೀರ್ಘ ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ತೀರ್ಪು ಕಾಯ್ದಿರಿಸಿತು.

ಅರ್ಜಿದಾರರ ವಾದವೇನು?
ಇದಕ್ಕೂ ಮುನ್ನ ಅರ್ಜಿದಾರ ಸ್ನೇಹಮಯಿ ಕೃಷ್ಣ ಪರ ವಾದ ಮಂಡಿಸಿದ ಸುಪ್ರೀಂಕೋರ್ಟ್ ಹಿರಿಯ ವಕೀಲ ಮಣೀಂದರ್‌ ಸಿಂಗ್‌, ಈ ಹಂತದಲ್ಲಿ ಸಿದ್ದರಾಮಯ್ಯ ವಾದ ಮಂಡನೆ ಪರಿಗಣಿಸುವ ಅಗತ್ಯವಿಲ್ಲ. ಶಂಕಿತ ಆರೋಪಿ ತನಿಖಾ ತಂಡವನ್ನು ಆಯ್ಕೆ ಮಾಡಬಾರದು. ಈ ಬಗ್ಗೆ ಸುಪ್ರೀಂಕೋರ್ಟ್‌ ತೀರ್ಪುಗಳಿವೆ. ರಾಜಕೀಯ ಮುಖಂಡರ ಹೆಸರಿರುವುದರಿಂದ ಸ್ಥಳೀಯ ಪೊಲೀಸರಿಂದ ದಕ್ಷ ತನಿಖೆ ಸಾಧ್ಯವಿಲ್ಲ. ರಾಜಕೀಯ ಒತ್ತಡದಿಂದ ತನಿಖೆ ಹಳಿ ತಪ್ಪಬಹುದು. ಕೋರ್ಟ್‌ಗೆ ಸಮಾಧಾನಕರವೆನ್ನಿಸುವ ಸ್ವತಂತ್ರ ತನಿಖಾ ತಂಡಕ್ಕೆ ಪ್ರಕರಣವನ್ನು ವಹಿಸಬಹುದು. ತನಿಖೆ ಯಾರು ನಡೆಸಬೇಕೆಂದು ಆರೋಪಿಯನ್ನು ಕೇಳುವ ಅಗತ್ಯವಿಲ್ಲ. ಆ ಕುರಿತು ಪಂಜಾಬ್‌, ಗುಜರಾತ್‌ ಸೇರಿ ಹಲವು ಹೈಕೋರ್ಟ್‌ಗಳ ಪ್ರಕರಣಗಳ ತೀರ್ಪುಗಳಿವೆ. ಪ್ರಕರಣದಲ್ಲಿ 3.26 ಲಕ್ಷ ರೂ. ಮೊತ್ತದ ಜಮೀನು ಸ್ವಾಧೀನಕ್ಕೆ ದುಬಾರಿ ನಿವೇಶನ ಹಂಚಿಕೆಯಾಗಿದೆ. ಎಲ್ಲ ಅಧಿಕಾರಿಗಳೂ ಸೇರಿ ಈ ಅನುಕೂಲ ಮಾಡಿಕೊಟ್ಟಿದ್ದಾರೆ. ಅಸ್ತಿತ್ವದಲ್ಲೇ ಇಲ್ಲದ ಜಮೀನು ಭೂಪರಿವರ್ತನೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಸ್ವತಂತ್ರ ತನಿಖೆ ಅನಿವಾರ್ಯ. ಲೋಕಾಯುಕ್ತ ಪೊಲೀಸರಿಂದ ನ್ಯಾಯಸಮ್ಮತ ತನಿಖೆ ಸಾಧ್ಯವಿಲ್ಲ ಎಂದರು.

ಅರ್ಜಿದಾರರ ನಡೆಯೇ ಸಂಶಯಾಸ್ಪದವಾಗಿದೆ!
ಅರ್ಜಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿವಾದಿತ ಜಮೀನಿನ ಮೂಲ ಮಾಲೀಕ ದೇವರಾಜು ಪರ ಸುಪ್ರೀಂಕೋರ್ಟ್ ಹಿರಿಯ ವಕೀಲ ದುಶ್ಯಂತ್ ದವೆ, ನಮ್ಮ ಕಕ್ಷಿದಾರರಿಗೂ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಅರ್ಜಿದಾರರ ವಾದ ಈ ಪ್ರಕರಣಕ್ಕೆ ಅನ್ವಯವಾಗುವುದಿಲ್ಲ. ಪ್ರಕರಣವನ್ನು ಸಿಬಿಐಗೆ ವಹಿಸುವಂತಹ ಯಾವುದೇ ಆರೋಪಗಳು ಇಲ್ಲ. ಪ್ರಕರಣದ ಮೊದಲ ಆರೋಪಿ (ಸಿದ್ದರಾಮಯ್ಯ) ಅವರೊಂದಿಗೆ ನಮಗೆ ಯಾವುದೇ ಸಂಬಂಧವಿಲ್ಲ. ಅರ್ಜಿದಾರರು ಪ್ರಕರಣ ಲೋಕಾಯುಕ್ತ ತನಿಖೆ ಕೋರಿದ್ದರು. ಇದೀಗ ಇದೊಂದು ದೊಡ್ಡ ಭ್ರಷ್ಟಾಚಾರ ಪ್ರಕರಣವಾಗಿದ್ದು, ಸಿಬಿಐಗೆ ವರ್ಗಾವಣೆ ಮಾಡಬೇಕು ಎಂದು ಕೋರಿದ್ದಾರೆ. ಅರ್ಜಿದಾರರ ನಡವಳಿಕೆ ಸಂಶಯಾಸ್ಪದವಾಗಿದೆ. ಆದ್ದರಿಂದ, ಅವರ ಮನವಿ ಅಂಗೀಕರಿಸಬಾರದು ಎಂದು ಕೋರಿದರು.

ಇತರ ಪ್ರತಿವಾದಿಗಳ ವಾದಾಂಶ:
ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಸುಪ್ರೀಂಕೋರ್ಟ್‌ ಹಿರಿಯ ವಕೀಲ ಕಪಿಲ್ ಸಿಬಲ್, ಅರ್ಜಿದಾರರು ಪ್ರಕರಣದಲ್ಲಿ ಮುಖ್ಯಮಂತ್ರಿ ಆರೋಪಿಯಾಗಿದ್ದಾರೆ. ಆದ್ದರಿಂದ, ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರುತ್ತಿದ್ದಾರೆ. ಲೋಕಾಯುಕ್ತ ಸಂಸ್ಥೆ ರಾಜ್ಯ ಸರ್ಕಾರದ ಅಧೀನದಲ್ಲಿದೆ ಎಂದು ಹೇಳುವುದಾದರೆ, ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿದೆ ಎಂದು ಹೇಳಬೇಕಾಗುತ್ತದೆ. ಹೀಗಿರುವಾಗ, ನ್ಯಾಯಾಕ್ಕಾಗಿ ಎಲ್ಲಿಗೆ ಹೋಗಬೇಕು ಎಂಬ ಪ್ರಶ್ನೆ ಎದುರಾಗಲಿದೆ ಎಂದು ಅವರು ಪೀಠಕ್ಕೆ ತಿಳಿಸಿದರು.

ಸಿಎಂ ಪರ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ವಾದ ಮಂಡಿಸಿ, ಲೋಕಾಯುಕ್ತ ಸಂಸ್ಥೆಯ ಕೆಳಗೆ ಎಲ್ಲರೂ ಬರುತ್ತಾರೆ. ಸಿಎಂ, ಡಿಸಿಎಂ, ಉನ್ನತ ಅಧಿಕಾರಿಗಳೂ ಬರುತ್ತಾರೆ. ರಾಜಕೀಯ ಬಣ್ಣವಿದೆ ಎಂಬ ಕಾರಣಕ್ಕೆ ಸಿಬಿಐಗೆ ನೀಡಬಾರದು. ದೂರುದಾರ ಮೊದಲಿಗೆ ಸಿಬಿಐ ತನಿಖೆ ಕೋರಿರಲಿಲ್ಲ. ಈಗ ಸಿಬಿಐ ತನಿಖೆ ಕೋರುತ್ತಿದ್ದಾರೆ. ಅದನ್ನು ಏಕೆ ಪರಿಗಣಿಸಬೇಕು? ಸಿಬಿಐಗೆ ಹಸ್ತಾಂತರಿಸಲು ಇದು ಅಪರೂಪದಲ್ಲಿ ಅಪರೂಪ ಪ್ರಕರಣವಲ್ಲ. ಲೋಕಾಯುಕ್ತ ಪೊಲೀಸರ ತನಿಖೆಯ ಮಧ್ಯದಲ್ಲಿ ಪ್ರಕರಣ ಹಸ್ತಾಂತರ ಸರಿಯಲ್ಲ. ಸಿಎಂ, ಸಚಿವರ ವಿರುದ್ಧದ ಕೇಸ್‌ ಸಿಬಿಐಗೆ ಹೋಗಬೇಕೆ? ಹೀಗೆಂದಾದರೆ ಸಿಬಿಐಗೆ ಪ್ರಕರಣಗಳ ಮಹಾಪೂರವೇ ಹೋಗುತ್ತದೆ ಎಂದರು.

ಸಿದ್ದರಾಮಯ್ಯ ಪತ್ನಿ ಪಾರ್ವತಿ ಪರ ವಾದ ಮಂಡಿಸಿದ ಹಿರಿಯ ವಕೀಲ ರವಿವರ್ಮ ಕುಮಾರ್, ಪ್ರಧಾನಮಂತ್ರಿಗಳ ಅಧೀನದಲ್ಲಿ ಸಿಬಿಐ ಕಾರ್ಯನಿರ್ವಹಣೆ ಮಾಡಲಿದೆ. ಪ್ರಧಾನಮಂತ್ರಿ ಕಾಂಗ್ರೆಸ್‌ ಮುಕ್ತ ಭಾರತ ಮಾಡುವುದು ನನ್ನ ಉದ್ದೇಶ ಎಂದು ಘೋಷಣೆ ಮಾಡಿದ್ದಾರೆ. ರಾಜಕೀಯ ಉದ್ದೇಶದಿಂದ ಲೋಕಾಯುಕ್ತ ತನಿಖೆಯಿಂದ ತಪ್ಪಿಸಿ ಸಿಬಿಐಗೆ ವಹಿಸಲು ಶ್ರಮಿಸಲಾಗುತ್ತಿದೆ. ನಮ್ಮ ಕಕ್ಷಿದಾರರು ಪ್ರಕರಣದಲ್ಲಿ ಎಲ್ಲಿಯೂ ಭಾಗಿಯಾಗಿಲ್ಲ. ಆದರೂ, ಅವರನ್ನು ಅನಗತ್ಯವಾಗಿ ಸೇರಿಸಲಾಗಿದೆ. ಅವರ ವಿರುದ್ಧದ ಆರೋಪಗಳನ್ನು ಹಿಂಪಡೆಯಬೇಕು ಹಾಗೂ ಅರ್ಜಿ ವಜಾಗೊಳಿಸಬೇಕು ಎಂದು ಕೋರಿದರು.

ಸಿದ್ದರಾಮಯ್ಯ ಬಾವಮೈದುನ ಮಲ್ಲಿಕಾರ್ಜುನ ಸ್ವಾಮಿ ಪರ ವಾದ ಮಂಡಿಸಿದ ಹಿರಿಯ ವಕೀಲ ಆದಿತ್ಯ ಸೋಂಧಿ, ಅರ್ಜಿದಾರರು, ಸರ್ಕಾರದಲ್ಲಿ ಪ್ರಮುಖ ವ್ಯಕ್ತಿ ಆರೋಪಿಯಾಗಿರುವುದರಿಂದ ಲೋಕಾಯುಕ್ತ ಪೊಲೀಸರಿಂದ ನಿಷ್ಪಕ್ಷಪಾತದ ತನಿಖೆ ಸಾಧ್ಯವಿಲ್ಲ ಎಂಬದು ಕಾಲ್ಪನಿಕವಾಗಿ ಹೇಳುತ್ತಿದ್ದಾರೆ. ಆದರೆ, ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ ದಿನವೇ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ ಲೋಕಾಯುಕ್ತ ತನಿಖೆಗೆ ಕೋರಿದ್ದ ಅರ್ಜಿದಾರರಿಗೆ ಇದೀಗ ಸಿಬಿಐ ಕೋರುತ್ತಿದ್ದಾರೆ. ಇದೊಂದು ಅಸಂಬದ್ಧ ಅರ್ಜಿಯಾಗಿದ್ದು ಅದನ್ನು ವಜಾಗೊಳಿಸಬೇಕು ಎಂದು ಮನವಿ ಮಾಡಿದರು.

ತನಿಖಾ ವರದಿ ಸಲ್ಲಿಕೆ:
ಹೈಕೋರ್ಟ್‌ ಈ ಹಿಂದೆ ನೀಡಿದ್ದ ನಿರ್ದೇಶನದಂತೆ ಲೋಕಾಯುಕ್ತ ಪೊಲೀಸರು ಈವರೆಗೆ ಪ್ರಕರಣದಲ್ಲಿ ಆಗಿರುವ ತನಿಖೆಯ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಲೋಕಾಯುಕ್ತರ ಪರ ಹಾಜರಾದ ವಕೀಲ ವೆಂಕಟೇಶ್‌ ಅರಬಟ್ಟಿ ಅವರು ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಿ, ತನಿಖಾಧಿಕಾರಿ ಸಿದ್ಧಪಡಿಸಿರುವ ವರದಿಯನ್ನು ಐಜಿಪಿ ಹಾಗೂ ಎಡಿಜಿಪಿ ಪರಿಶೀಲಿಸಿದ್ದಾರೆ ಎಂದು ತಿಳಿಸಿದರು. ನ್ಯಾಯಾಲಯ ಅದನ್ನು ದಾಖಲು ಮಾಡಿಕೊಂಡಿತು.

Related Articles

Comments (0)

Leave a Comment