ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣ; ಮುಂದಿನ ವಿಚಾರಣೆವರೆಗೆ ಆರೋಪ ನಿಗದಿ ಬೇಡವೆಂದ ಹೈಕೋರ್ಟ್

ಬೆಂಗಳೂರು: ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಯಾಗಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಆರೋಪ ನಿಗದಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯ ವಾದ-ಪ್ರತಿವಾದ ಆಲಿಸಬಹುದು. ಆದರೆ, ಆರೋಪ ನಿಗದಿ ಮಾಡಬಾರದು ಎಂದು ಹೈಕೋರ್ಟ್‌ ಆದೇಶಿಸಿದೆ.

ಪ್ರಕರಣ ಸಂಬಂಧ ತಮ್ಮ ಕಾರು ಚಾಲಕನ ಸ್ಯಾಮ್‌ಸಂಗ್‌ ಮೊಬೈಲ್‌ ಫೋನ್‌ನಿಂದ ಪಡೆದಿರುವ ಫೋಟೋ ಹಾಗೂ ವಿಡಿಯೊಗಳನ್ನು ಒದಗಿಸಲು ಪ್ರಾಸಿಕ್ಯೂಷನ್‌ಗೆ ನಿರ್ದೇಶಿಸುವಂತೆ ಕೋರಿ ಪ್ರಜ್ವಲ್‌ ರೇವಣ್ಣ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಅರ್ಜಿದಾರರು ಮತ್ತು ಪ್ರಾಸಿಕ್ಯೂಷನ್‌ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ಆರೋಪ ನಿಗದಿಗೂ ಮುನ್ನ ವಾದ ಆಲಿಸುವ ಪ್ರಕ್ರಿಯೆಯನ್ನು ವಿಚಾರಣಾ ನ್ಯಾಯಾಲಯ ನಡೆಸಬಹುದು. ಆದರೆ, ಈ ಅರ್ಜಿಯ ಮುಂದಿನ ವಿಚಾರಣೆವರೆಗೆ ಆರೋಪ ನಿಗದಿ ಮಾಡಬಾರದು ಎಂದು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿ, ಅರ್ಜಿ ವಿಚಾರಣೆಯನ್ನು ಜನವರಿ 16ಕ್ಕೆ ಮುಂದೂಡಿತು.

ಫೋಟೋ, ವಿಡಿಯೊ ಒದಗಿಸಲು ಪ್ರಾಸಿಕ್ಯೂಷನ್ ನಕಾರ:
ವಿಚಾರಣೆ ವೇಳೆ ಪ್ರಜ್ವಲ್ ರೇವಣ್ಣ ಪರ ವಕೀಲ ಜಿ. ಅರುಣ್‌ ವಾದ ಮಂಡಿಸಿ, ವಿಚಾರಣಾ ನ್ಯಾಯಾಲಯದಲ್ಲಿ ಅರ್ಜಿದಾರರು ತಮ್ಮನ್ನು ಸಮರ್ಥಿಸಿಕೊಳ್ಳಲು ಅವರ ಕಾರು ಚಾಲಕನಿಂದ ಜಪ್ತಿ ಮಾಡಿರುವ ಸ್ಯಾಮ್‌ಸಂಗ್‌ ಮೊಬೈಲ್‌ನಿಂದ ಪಡೆದಿರುವ ಎಲ್ಲ ಫೋಟೊ ಮತ್ತು ವಿಡಿಯೊಗಳನ್ನು ಒದಗಿಸಬೇಕು ಎಂದರು.

ಇದಕ್ಕೆ ತೀವ್ರವಾಗಿ ಆಕ್ಷೇಪಿಸಿದ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್‌. ಜಗದೀಶ್, ಪ್ರಕರಣಕ್ಕೆ ಸಂಬಂಧಿಸಿದ ಡಿಜಿಟಲ್‌ ಸಾಕ್ಷ್ಯವನ್ನು ಅರ್ಜಿದಾರರಿಗೆ ಪೆನ್‌ಡ್ರೈವ್‌ ಮೂಲಕ ಒದಗಿಸಲಾಗಿದೆ. ಕಾರು ಚಾಲಕನ ಮೊಬೈಲ್‌ ಫೋನ್‌ನಲ್ಲಿ ಪಡೆದಿರುವ ಎಲ್ಲ 2 ಸಾವಿರ ವಿಡಿಯೊ ಹಾಗೂ 15 ಸಾವಿರ ಫೋಟೊಗಳನ್ನು ಅವರಿಗೆ ಒದಗಿಸಲಾಗದು. ಇದರಿಂದ, ಸಂತ್ರಸ್ತ ಮಹಿಳೆಯರ ಖಾಸಗಿತನಕ್ಕೆ ಸಮಸ್ಯೆಯಾಗುತ್ತದೆ. ವಿಚಾರಣಾ ನ್ಯಾಯಾಲಯದಲ್ಲಿ ವಿಚಾರಣೆ ವಿಳಂಬಗೊಳಿಸುವ ಉದ್ದೇಶದಿಂದ ಇಂತಹ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ದೂರಿದರು.

ಸಂತ್ರಸ್ತರಿಗೆ ತೊಂದರೆಯಾಗಲು ಅವಕಾಶ ನೀಡಲಾಗದು:
ಆಗ ನ್ಯಾಯಪೀಠ, ದೂರುದಾರರನ್ನು ಹೊರತುಪಡಿಸಿ ಉಳಿದ ಸಂತ್ರಸ್ತರ ಗುರುತು ಬಹಿರಂಗವಾಗುವುದಕ್ಕೆ ನ್ಯಾಯಾಲಯ ಅವಕಾಶ ನೀಡುವುದಿಲ್ಲ. ನೀವು ಕೇಳುತ್ತಿರುವ ದಾಖಲೆ ಸಾವಿರಾರು ಪುಟಗಳಷ್ಟಿವೆ ಎಂದು ಪ್ರಾಸಿಕ್ಯೂಷನ್‌ ಹೇಳುತ್ತಿದೆ. ಅದರ ಅವಶ್ಯಕತೆ ನಿಮಗೇನಿದೆ ಎಂದು ಪ್ರಶ್ನಿಸಿತಲ್ಲದೆ, ಹಾಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ದಂಡ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 207ರ (ಪ್ರಾಸಿಕ್ಯೂಷನ್ ಸಂಗ್ರಹಿಸಿದ ಕೆಲ ನಿರ್ದಿಷ್ಟ ದಾಖಲೆಗಳನ್ನು ಕಡ್ಡಾಯವಾಗಿ ಆರೋಪಿಗೆ ಒದಗಿಸುವುದು) ಅಡಿ ನಿಮಗೆ ಒದಗಿಸಲು ಸಾಧ್ಯವಿರಬಹುದಾದ ಸಾಕ್ಷಿಗಳನ್ನು ನೀಡಬಹುದು. ಆದರೆ, ಇತರ ಸಂತ್ರಸ್ತರ ಗುರುತು ಬಹಿರಂಗವಾಗುವುದಕ್ಕೆ ಮತ್ತು ಅವರ ಬದುಕಿಗೆ ಎರವಾಗುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿ, ಅರ್ಜಿ ವಿಚಾರಣೆ ಮುಂದೂಡಿತು.

Related Articles

Comments (0)

Leave a Comment