ಶಾಲೆಗಳ ಮಾನ್ಯತೆ ನವೀಕರಣ ಕುರಿತ ಶಿಕ್ಷಣ ಇಲಾಖೆಯ ಸುತ್ತೋಲೆ ಎತ್ತಿಹಿಡಿದ ಹೈಕೋರ್ಟ್; ಸರ್ಕಾರಿ ಶಾಲೆಗಳಲ್ಲೂ ನಿಯಮ ಪಾಲನೆಗೆ ಆದೇಶ
- by Jagan Ramesh
- January 9, 2025
- 60 Views
ಬೆಂಗಳೂರು: ಖಾಸಗಿ ಶಾಲೆಗಳ ಮಾನ್ಯತೆ ನವೀಕರಣಕ್ಕಾಗಿ ಶಾಲಾ ಕಟ್ಟಡದ ಸುರಕ್ಷತೆ ಪ್ರಮಾಣಪತ್ರ ಮತ್ತು ನಕ್ಷೆ ಅನುಮೋದನೆ, ಅಗ್ನಿ ಸುರಕ್ಷತಾ ಪ್ರಮಾಣಪತ್ರ ಸಲ್ಲಿಸುವುದನ್ನು ಕಡ್ಡಾಯಗೊಳಿಸಿ 2022ರ ಜೂನ್ 6ರಂದು ಶಿಕ್ಷಣ ಇಲಾಖೆ ಹೊರಡಿಸಿದ್ದ ಸುತ್ತೋಲೆಯನ್ನು ಎತ್ತಿಹಿಡಿದಿರುವ ಹೈಕೋರ್ಟ್, ಈ ನಿಯಮಗಳನ್ನು ಸರ್ಕಾರಿ ಶಾಲೆಗಳೂ ಪಾಲನೆ ಮಾಡಬೇಕು ಎಂದು ಆದೇಶಿಸಿದೆ.
ಶಿಕ್ಷಣ ಇಲಾಖೆಯ ಸುತ್ತೋಲೆ ಪ್ರಶ್ನಿಸಿ ಅನುದಾನರಹಿತ ಖಾಸಗಿ ಶಾಲೆಗಳ ಸಂಘ (ಅವರ್ಸ್ ಸ್ಕೂಲ್) ಹಾಗೂ ಮತ್ತಿತರ ಖಾಸಗಿ ಶಿಕ್ಷಣ ಟ್ರಸ್ಟ್ಗಳು ಸಲ್ಲಿಸಿದ್ದ ಅರ್ಜಿಗಳನ್ನು ಇತ್ಯರ್ಥಪಡಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಹೈಕೋರ್ಟ್ ಆದೇಶದಲ್ಲೇನಿದೆ?
ಶಾಲೆಗಳಲ್ಲಿ ಆಕಸ್ಮಿಕವಾಗಿ ಅವಘಡಗಳೇನಾದರೂ ಸಂಭವಿಸಿದ ಸಂದರ್ಭಗಳಲ್ಲಿ ಮಕ್ಕಳಿಗೆ ವಿಪತ್ತುಗಳನ್ನು ಎದುರಿಸುವುದನ್ನು ಸುಲಭವಾಗಿ ತಿಳಿಸಿಕೊಡಲಾಗದು ಎನ್ನುವ ಉದ್ದೇಶದಿಂದ ಸುತ್ತೋಲೆಯನ್ನು ಹೊರಡಿಸಲಾಗಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ಶಾಲೆಯ ಮಾನ್ಯತೆ 10 ವರ್ಷಗಳ ಅವಧಿಗೆ ಇರುತ್ತದೆ. ಆದರೆ, ಸರ್ಕಾರ 2022ನೇ ವರ್ಷಕ್ಕೆ ಮಾತ್ರ ಕಟ್ಟಡ ಸುರಕ್ಷತಾ ಪ್ರಮಾಣಪತ್ರ, ನಕ್ಷೆ ಅನುಮೋದನೆ ಮತ್ತು ಆಗ್ನಿ ಶಾಮಕ ಇಲಾಖೆ ಪ್ರಮಾಣಪತ್ರಗಳನ್ನು ಕಡ್ಡಾಯಗೊಳಿಸಿದೆ. ಇದು ನಿಯಮಗಳಿಗೆ ವಿರುದ್ಧವಾಗಿದೆ ಎಂಬ ಅರ್ಜಿದಾರರ ವಾದವನ್ನು ನ್ಯಾಯಾಲಯ ತಳ್ಳಿಹಾಕಿದೆ.
ಸುತ್ತೋಲೆಯಂತೆ ಶಾಲೆಗಳಿಗೆ ಅಂತಿಮ ಮಾನ್ಯತೆ ನೀಡುವ ಮುನ್ನವೇ ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಕಡ್ಡಾಯವಾಗಿದೆ. ಶಾಲಾ ಕಟ್ಟಡಗಳಲ್ಲಿ ಬಿಲ್ಡಿಂಗ್ ಬೈಲಾ ಮತ್ತು ಇತರ ನಿಯಮಗಳನ್ನು ಪಾಲನೆ ಮಾಡಬೇಕು ಎನ್ನುವುದು ಇದರ ಉದ್ದೇಶವಾಗಿದೆ. ಜತೆಗೆ, ಪ್ರಸ್ತುತ ನಿಯಮಗಳಲ್ಲಿರುವ ಅಂಶಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಶಿಕ್ಷಣ ಇಲಾಖೆ ಸೂಚನೆ ನೀಡಿದೆಯೇ ಹೊರತು, ಹೊಸ ಷರತ್ತುಗಳೇನೂ ವಿಧಿಸಲಾಗಿಲ್ಲ. ಆದ್ದರಿಂದ, ಸರ್ಕಾರದ ಆದೇಶದಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಇದೇ ವೇಳೆ ಕಟ್ಟಡ ನಿಯಮಗಳು, ಕಾನೂನು, ನಿಬಂಧನೆಗಳು ಹಾಗೂ ನಿಯಮಗಳನ್ನು ಪಾಲನೆ ಮಾಡಲು ಶಾಲೆಗಳಿಗೆ ಮುಂದಿನ ಶೈಕ್ಷಣಿಕ ವರ್ಷ ಆರಂಭವಾಗುವವರೆಗೆ ಕಾಲಾವಕಾಶ ನೀಡಿರುವ ಹೈಕೋರ್ಟ್, ಖಾಸಗಿ ಶಾಲೆಗಳು ಇಷ್ಟು ವರ್ಷದಿಂದ ಶಿಕ್ಷಣ ಸೇವೆ ಒದಗಿಸಿವೆ. ಏಕಾಏಕಿ ಅವುಗಳ ಮೇಲೆ ಒತ್ತಡ ಹೇರಲಾಗದು. ಶಿಕ್ಷಣ ಇಲಾಖೆ ಅವುಗಳಿಗೆ ಸಮಯಾವಕಾಶ ನೀಡಬೇಕಾಗುತ್ತದೆ ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಸರ್ಕಾರಿ ಶಾಲೆಗಳಲ್ಲೂ ಪಾಲನೆಯಾಗಲಿ:
ಕಟ್ಟಡ ಸುರಕ್ಷತಾ ನಿಯಮಗಳನ್ನು ಖಾಸಗಿ ಶಾಲೆಗಳಿಗೆ ಮಾತ್ರ ಕಡ್ಡಾಯಗೊಳಿಸಲಾಗಿದೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಈ ನಿಯಮಗಳನ್ನು ಜಾರಿಗೊಳಿಸುತ್ತಿಲ್ಲ ಎಂಬ ಅರ್ಜಿದಾರರ ವಾದವನ್ನು ಒಪ್ಪಿರುವ ನ್ಯಾಯಾಲಯ, ಖಾಸಗಿ ಶಾಲೆಗಳಿಗೆ ಸರ್ಕಾರ ಕೆಲ ನಿಯಮ, ನಿಬಂಧನೆಗಳು ಮತ್ತು ಷರತ್ತುಗಳನ್ನು ವಿಧಿಸಿದಾಗ, ಅವುಗಳನ್ನು ಸರ್ಕಾರಿ ಶಾಲೆಗಳೂ ಪಾಲನೆ ಮಾಡಬೇಕಾಗುತ್ತದೆ ಎಂದು ಹೇಳಿದೆ.
ಶಾಲಾ ಕಟ್ಟಡ ಸುರಕ್ಷತಾ ನಿಯಮಾವಳಿ, ರಾಷ್ಟ್ರಿಯ ಕಟ್ಟಡ ಕೋಡ್ ಮತ್ತು ಖಾಸಗಿ ಶಾಲೆಗಳಿಗೆ ಅನ್ವಯಿಸುವ ನಿಯಮಗಳು ಸರ್ಕಾರಿ ಶಾಲೆಗಳಿಗೂ ಅನ್ವಯವಾಗುತ್ತವೆ. ರಾಜ್ಯ ಸರ್ಕಾರಕ್ಕೇನೂ ವಿನಾಯಿತಿ ಇಲ್ಲ. ಆದ್ದರಿಂದ, ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಈ ಸಂಬಂಧ ವಿಸ್ತೃತ ಕ್ರಿಯಾ ಯೋಜನೆ ರೂಪಿಸಬೇಕು ಮತ್ತು ಖಾಸಗಿ ಶಾಲೆಗಳಿಗೆ ಅನ್ವಯವಾಗುವ ನಿಯಮಗಳನ್ನು ಸರ್ಕಾರಿ ಶಾಲೆಗಳಲ್ಲಿ ಹೇಗೆ ಪಾಲನೆ ಮಾಡಲಾಗುತ್ತದೆ ಎನ್ನುವ ಬಗ್ಗೆ ಯೋಜನೆ ರೂಪಿಸಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.
ಪೋರ್ಟಲ್ ಅಭಿವೃದ್ಧಿಗೆ ನಿರ್ದೇಶನ:
ಶಿಕ್ಷಣ ಇಲಾಖೆಯು ಕರ್ನಾಟಕ ಶಿಕ್ಷಣ ಕಾಯ್ದೆಯ ಸೆಕ್ಷನ್ 36ರ ಅನುಸಾರ ತಾತ್ಕಾಲಿಕ ಮಾನ್ಯತೆಯನ್ನು ಶಾಲೆಗಳಿಗೆ ನೀಡುತ್ತದೆ ಮತ್ತು ಒಂದು ವರ್ಷದಲ್ಲಿ ನಿಯಮದಲ್ಲಿ ಪ್ರಸ್ತಾಪಿಸಿರುವ ಎಲ್ಲ ಅಗತ್ಯತೆಗಳನ್ನು ಪೂರೈಸಲೇಬೇಕು. ಶಿಕ್ಷಣ ಇಲಾಖೆಯಲ್ಲಿ ಎಲ್ಲ ಷರತ್ತುಗಳನ್ನು ಖಾಸಗಿ ಶಾಲೆಗಳು ಪಾಲನೆ ಮಾಡುತ್ತಿವೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಯಾವುದೇ ಕಾರ್ಯವಿಧಾನ ಹೊಂದಿಲ್ಲ ಎಂದಿರುವ ನ್ಯಾಯಪೀಠ, ಖಾಸಗಿ ಶಾಲೆಗಳೂ ಸೇರಿ ಎಲ್ಲ ಶಾಲೆಗಳು ಕಟ್ಟಡ ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡುತ್ತಿರುವ ಕುರಿತ ವಿವರಗಳನ್ನು ಅಪ್ಲೋಡ್ ಮಾಡಲು ಇಲಾಖೆ ಒಂದು ಪೋರ್ಟಲ್ ಅಭಿವೃದ್ಧಿಪಡಿಸಬೇಕು ಮತ್ತು ಈ ಕುರಿತು ಶಿಕ್ಷಣ ಇಲಾಖೆ 6 ವಾರಗಳಲ್ಲಿ ಕ್ರಿಯಾ ಯೋಜನೆ ಸಲ್ಲಿಸಬೇಕು ಎಂದು ಆದೇಶಿಸಿದೆ.
Related Articles
Thank you for your comment. It is awaiting moderation.
Comments (0)